ವರ್ಷದಲ್ಲಿ ಎರಡು ಬಾರಿ ಬೆಂಕಿ | ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗುತ್ತಿದೆಯೇ ?
ಕಾರ್ಕಳ : ಪುರಸಭೆ ವ್ಯಾಪ್ತಿಯ ಕರಿಯಕಲ್ಲು ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನ. 29ರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಸುಮಾರು ಒಂದೂವರೆ ಗಂಟೆಯ ಸತತ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಇಲಾಖಾ ಸಿಬ್ಬಂದಿ ಯಶಸ್ವಿಯಾದರು. ಅಗ್ನಿಶಾಮಕದಳದ ಠಾಣಾಧಿಕಾರಿ ಬಿ.ಎಂ. ಸಂಜೀವ, ದಫೇದಾರ್ ಉದಯ್ ಕುಮಾರ್ ಹೆಗಡೆ, ರೂಪೇಶ್, ಸಿಬ್ಬಂದಿ ಮೊಹಮ್ಮದ್ ರಫೀಕ್, ಕಲ್ಲಪ್ಪ, ಗೃಹರಕ್ಷಕ ದಳದ ಸಂದೀಪ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಪದೇ ಪದೇ ಅವಘಡ
ಪುರಸಭೆಯ 13ನೇ ವಾರ್ಡ್ ನಲ್ಲಿರುವ ಕರಿಯಕಲ್ಲು ಘನ ತ್ಯಾಜ್ಯ ನಿರ್ಹಹಣಾ ಘಟಕದಲ್ಲಿ (ಎಸ್‌ಎಲ್‌ಆರ್‌ಎಂ) ವರ್ಷದಲ್ಲಿ ಒಂದೆರಡು ಬಾರಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ವರ್ಷದ ಮಾರ್ಚ್ 20 ಮತ್ತು 24ರಂದು ಎರಡು ಬಾರಿ ಬೆಂಕಿ ಅವಘಡ ಸಂಭವಿಸಿತ್ತು. ಸೆಕ್ಯೂರಿಟಿ ಗಾರ್ಡ್ ಓರ್ವರೂ ಇದ್ದು ಕೂಡ ಬೆಂಕಿ ಅವಘಡ ನಡೆಯುವುದಾದರೂ ಹೇಗೆ ? ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಲಾಗುತ್ತಿದೆಯೇ ?
ಬೆಂಕಿ ಹಚ್ಚಿದಲ್ಲಿ ಘನ ತ್ಯಾಜ್ಯ ನಿರ್ವಹಣೆ ಹೊಣೆಯೇ ಇರುವುದಿಲ್ಲ ಎನ್ನುವ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗುತ್ತಿದೆಯೇ ಎನ್ನವ ಅನುಮಾನ ಮೂಡುತ್ತಿದೆ. ಜಿಲ್ಲಾಧಿಕಾರಿಯವರು ಕಾರ್ಕಳ ಭೇಟಿ ನೀಡುವ ಮುನ್ಸೂಚನೆ ದೊರೆಯುವ ಸಂದರ್ಭದಲ್ಲೇ ಹೆಚ್ಚಾಗಿ ಎಸ್‌ಎಲ್‌ಆರ್‌ಎಂ ನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಇದಕ್ಕೆ ಪುಷ್ಠಿ ನೀಡುತ್ತಿದೆ.
ಪರಿಸರ ಮಾಲಿನ್ಯ-ಆರೋಗ್ಯ ಸಮಸ್ಯೆ
ಕರಿಯಕಲ್ಲು ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಂತಹ ತ್ಯಾಜ್ಯ ಶೇಖರಣೆಯಾಗುವ ಕಾರಣ ಬೆಂಕಿ ಹಚ್ಚಿಕೊಂಡಾಗ ಭಾರಿ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡು ಪರಿಸರ ಮಾಲಿನ್ಯವಾಗುತ್ತಿದೆ. ಈ ಭಾಗದಲ್ಲಿ ಹಲವಾರು ಮನೆಗಳಿರುವುದರಿಂದ ಅಲ್ಲಿನ ನಿವಾಸಿಗಳಿಗೆ ವಿಷಕಾರಿ ಹೊಗೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತಿದೆ.
ಸಿಸಿಟಿವಿ ಅಳವಡಿಕೆ ಅಗತ್ಯ
ಕರಿಯಕಲ್ಲು ಎಸ್‌ಎಲ್‌ಆರ್‌ಎಂ ನಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುವುದರಿಂದ ಪುರಸಭೆ ಇಲ್ಲೊಂದು ಸಿಸಿಟಿವಿ ಅಳವಡಿಸಬೇಕು. ಬೆಂಕಿ ಯಾರು ಹಚ್ಚುತ್ತಿದ್ದಾರೆ ಎನ್ನವ ಪ್ರಶ್ನೆಗೆ ಇದರಿಂದ ಉತ್ತರ ದೊರೆಯುವುದರ ಜತೆಗೆ ಸ್ಥಳೀಯರ ಆರೋಗ್ಯ ರಕ್ಷಣೆಗೂ ಸಿಸಿಟಿವಿ ಸಹಕಾರಿಯಾಗಲಿದೆ.
ಪ್ರಕಾಶ್ ರಾವ್
ಮಾಜಿ ಪುರಸಭಾ ಸದಸ್ಯರು





















