ಕಾರ್ಕಳ : ಸಿನಿಮಾ ಯಾರನ್ನು ತಾನೆ ತನ್ನತ್ತ ಸೆಳೆಯಲ್ಲ ಹೇಳಿ? ನಾವು ಹೇಳ ಹೊರಟಿರುವುದು ಅಂತಹ ಎಲೆ ಮರೆಯ ಕಾಯಿಯಂತಿರುವ ಹಳ್ಳಿ ಹುಡುಗ ಹೆಬ್ರಿ ಬಳಿಯ ಸೋಮೇಶ್ವರದ ಪವನ್ ಕೃಷ್ಣ ಅವರ ಕುರಿತು. ತನ್ನದೇ ತಂಡ ಕಟ್ಟಿಕ್ಕೊಂಡು ನಾಲ್ಕೈದು ಕಿರು ಚಿತ್ರವನ್ನು ನಿರ್ದೇಶಿಸಿದ ಪವನ್ ಕೃಷ್ಣ ಅಪ್ಪಟ ಗ್ರಾಮೀಣ ಪ್ರತಿಭೆ. ಇತ್ತೀಚೆಗೆ ಭಾರಿ ಸದ್ದು ಮಾಡಿದ “ಅಂಗಾರ” ಕಿರುಚಿತ್ರ ನಿರ್ದೇಶಿಸಿ ತನ್ನ ಪ್ರತಿಬೆಯನ್ನು ತೋರಿಸಿ ಈಗ ಚಂದನವನದತ್ತ ಮುಖ ಮಾಡಿದ್ದಾರೆ. ಅಂಗಾರದ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಪವನ್ ಕೃಷ್ಣ ಈಗ ಕನ್ನಡದ ಇನ್ನೂ ಹೆಸರಿಡದ ಒಂದು ಚಿತ್ರದ ಮೂಲಕ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಕತೆಯನ್ನು ಕೇಳಿದ ತಕ್ಷಣ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಲು ಒಪ್ಪಿದ್ದು, ಮುಂಬರುವ ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ. ನ.29ರಂದು ಶಿವಮೊಗ್ಗದಲ್ಲಿ ಆಡಿಷನ್ ಮಾಡುವುದರ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಇಂಗಿತ ಚಿತ್ರತಂಡಕ್ಕಿದೆ. ಈ ಹಿಂದೆ ಕನ್ನಡ ಹೆಸರಾಂತ ನಾಯಕ ನಟ ಪವನ್ ಶೌರ್ಯರವರ ಗೂಳಿಹಟ್ಟಿ ಹಾಲುತುಪ್ಪ ಚಿತ್ರದಲ್ಲಿಯೂ ಕೆಲಸ ಮಾಡಿರುವ ಅನುಭವ ಇವರಿಗಿದೆ. ಹೆಬ್ರಿಯ ಯುವಕ ಕನ್ನಡ ಚಿತ್ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲಿ ನಮ್ಮೂರಿಗೆ ಕೀರ್ತಿಯನ್ನು ತರಲಿ ಎಂಬ ಹಾರೈಕೆ.
ಸುನೀಲ್ ಹೆಬ್ರಿ