ಚೆನ್ನೈ,ಅ.22: ಕಳ್ಳರ ತಂಡವೊಂದು ಮೊಬೈಲ್ ಫೋನ್ ಸಾಗಿಸುತ್ತಿದ್ದ ಟ್ರಕ್ಕನ್ನೇ ಹೈಜಾಕ್ ಮಾಡಿ ಸುಮಾರು 15 ಕೋಟಿ ರೂ. ಮೌಲ್ಯದ 14,400 ರೆಡ್ ಮಿ ಮೊಬೈಲ್ ಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸಂಭವಿಸಿದೆ.
ಚೆನ್ನೈ ಮೂಲಕ ಮುಂಬಯಿಗೆ ಮೊಬೈಲ್ ಫೋನ್ ಗಳನ್ನು ಸಾಗಿಸುತ್ತಿದ್ದ ಕಂಟೈನರ್ ಟ್ರಕ್ಕನ್ನು ತಮಿಳುನಾಡಿನ ಕೃಷ್ಣಗಿರಿ ಸಮೀಪ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ 10 ಮಂದಿ ದುಷ್ಕರ್ಮಿಗಳ ತಂಡ ತಡೆದು ಚಾಲಕನ ಮೇಲೆ ಹಲ್ಲೆ ಮಾಡಿ ಮೊಬೈಲ್ ಗಳಿದ್ದ ಬಾಕ್ಸ್ ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಮೇಲುಮಲೈ ಸಮೀಪ ಮತ್ತೊಂದು ಟ್ರಕ್ ಮೊಬೈಲ್‍ಗಳಿದ್ದ ಟ್ರಕ್ ಅನ್ನು ಫಾಲೋ ಮಾಡಲು ಆರಂಭಿಸಿತ್ತು. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಗಿರಿಯ ಸಮೀಪ ಅಡ್ಡಗಟ್ಟಿ ನಿಲ್ಲಿಸಿದ್ದರು. ಮೊದಲು ಟ್ರಕ್ ನಲ್ಲಿದ್ದ 6 ಜನ ಡ್ರೈವರ್, ಕ್ಲೀನರ್ ಮೇಲೆ ಹಲ್ಲೆ ನಡೆಸಿ ಹಗ್ಗದಿಂದ ಕಟ್ಟಿ ಹಾಕಿದ್ದರು. ಮತ್ತೊಂದು ವಾಹನದಲ್ಲಿ ಬಂದ ನಾಲ್ವರು ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಸಾಗಿ ಬಳಿಕ ರಸ್ತೆ ಪಕ್ಕದ ಪೊದೆಯಲ್ಲಿ ಎಸೆದು ಹೋದರು. ಆರೋಪಿಗಳೆಲ್ಲಾ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಸುಮಾರು 14 ಸಾವಿರಕ್ಕೂ ಹೆಚ್ಚು ಮೊಬೈಲ್ ಗಳು ಕಂಟೈನರ್ ನಲ್ಲಿದ್ದವು. ಇವುಗಳ ಒಟ್ಟು ಮೌಲ್ಯ 15 ಕೋಟಿ ರೂ. ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಹೊಸೂರು ಡಿಎಸ್‍ಪಿ ಮುರಳಿ ಅವರು, ಚೆನ್ನೈನ ಪೂನಮಲ್ಲಿ ಮೊಬೈಲ್ ಘಟಕದಿಂದ 14,400 ರೆಡ್ ಮಿ ಮೊಬೈಲ್‍ಗಳನ್ನು 1,440 ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಡ್ರೈವರ್ ಹಾಗೂ ಕ್ಲೀನರ್ ಹಗ್ಗದಿಂದ ತಮ್ಮನ್ನು ಬಿಡಿಸಿಕೊಂಡು ಆಂಬುಲೆನ್ಸ್ ಒಂದರ ಸಹಾಯದಿಂದ ಸ್ಥಳೀಯ ಕೃಷ್ಣಗಿರಿ ಆಸ್ಪತ್ರೆಗೆ ದಾಖಲಾಗಿದ್ದು, ಆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳದಿಂದ ದರೋಡೆಕೋರರು ಹೈಜಾಕ್ ಮಾಡಿದ್ದ ಟ್ರಕ್ ಪತ್ತೆಯಾಗಿದ್ದು, ಮತ್ತೊಂದು ಟ್ರಕ್ ನಲ್ಲಿ ಕಳ್ಳರು ಸರಕಿನೊಂದಿಗೆ ಎಸ್ಕೇಪ್ ಆಗಿದ್ದಾರೆ.


































































