ಬೆಟ್ಟದ ಬುಡದವರೆಗೆ ಹಬ್ಬಿರುವ ಹಸಿರ ಕಾಡು, ಕಪ್ಪನೆ ಹೊಳೆವ ಬೆಟ್ಟಕ್ಕೆ ಏರುತ್ತಾ ಸಾಗುವ ಕಾಲುದಾರಿ, ಮೇಲಕ್ಕೆ ಹತ್ತಿದಂತೆಲ್ಲ ಮೈಸೊಕುವ ಪ್ರಕೃತಿಯ ಸೊಬಗು. ಇದು ಮೂಡಬಿದ್ರೆ ಸಮೀಪದ ಕೊಣಾಜೆ ಕಲ್ಲು ಎಂಬ ಚಾರಣ ತಾಣ.
ಸುಮಾರು 2 ಕಿ.ಮಿ ದೂರವಷ್ಟೆ ಕಾಡುದಾರಿಯಲ್ಲಿ ಚಾರಣ ಮಾಡಬೇಕಾದ ಕಾರಣ ಇಲ್ಲಿಗೆ ಯಾರು ಕೂಡ ಹೋಗಬಹುದು. ಬೆಟ್ಟವನ್ನು ಸುಲಭವಾಗಿ ಸುತ್ತಬಹುದು. ಹೆಚ್ಚೆನು ಕಷ್ಟವಿಲ್ಲದೆ ತಲುಪಬಹುದಾದ ಈ ತಾಣ ವಾರಾಂತ್ಯ ದಿನಗಳಲ್ಲಿ ಚಾರಣಿಗರ ಮತ್ತು ಪ್ರವಾಸಿಗರ ಹಾಟ್ ಸ್ಟಾಟ್ ಎನಿಸಿಕೊಂಡಿದೆ.
ಏನು ವಿಶೇಷತೆ ?

ಕೊಣಾಜೆಕಲ್ಲು ಮೇಲೆ ಒಂದು ಪುಟ್ಟ ದೇವಾಲಯವಿದೆ. ತುಳುನಾಡಿನಲ್ಲಿ ಕೊಣಾಜೆ ಕಲ್ಲು ಭಯ, ಭಕ್ತಿಯ ತಾಣವೂ ಆಗಿದೆ. ಇಲ್ಲಿಗೆ ಪ್ರತಿನಿತ್ಯ ಭಕ್ತರೂ ಆಗಮಿಸುತ್ತಾರೆ. ಇಲ್ಲಿ ಮನಸ್ಸಿನಲ್ಲಿ ಏನಾದರೂ ಬೇಡಿಕೊಂಡರೆ ಅದು ಈಡೇರುತ್ತದೆ ಅನ್ನುವುದು ಇಲ್ಲಿನ ಭಕ್ತರ ನಂಬಿಕೆ. ಕೊಣಾಜೆಕಲ್ಲಿನಲ್ಲಿ ನುರಿತ ತರಬೇತುದಾರರಿಂದ ರೋಪ್ ಕ್ರೈಂಬ್ ಕೂಡ ಮಾಡಬಹುದು. ಪ್ರವಾಸಿಗರನ್ನು ವಾನರ ಸೇನೆ ದಾರಿಯುದ್ದಕ್ಕೂ ಸ್ವಾಗತಿಸುತ್ತದೆ.
ಸಿದ್ದತೆ ಹೀಗಿರಲಿ ?

ಕಾಡಿನ ದಾರಿಯಾಗಿರುವುದರಿಂದ ಶೂ ಹಾಕಿಕೊಳ್ಳಿ. ನಡೆಯಲು ಕಂಫರ್ಟ್ ಅನ್ನಿಸುವಂಥ ಬಟ್ಟೆ ಹಾಕಿಕೊಳ್ಳಿ. ಸಾಕಷ್ಟು ಪ್ರಮಾಣದ ನೀರು, ಲಘು ಆಹಾರ ಕೊಂಡೊಯುವುದನ್ನು ಮರೆಯದಿರಿ. ಮಳೆಗಾಲ ಬಿಟ್ಟು ಮತ್ತೆ ಯಾವ ಸಮಯದಲ್ಲಾದರೂ ಇಲ್ಲಿ ಚಾರಣ ಅಥವಾ ಪ್ರವಾಸ ಕೈಗೊಳ್ಳಬಹುದು. ಚಾರಣ ಕೈಗೊಳ್ಳುವರಿಗೆ ಸಂಜೆಯ ಸಮಯ ಬೆಸ್ಟ್.
ಹೋಗುವುದು ಹೇಗೆ?
ಮೂಡಬಿದ್ರೆ ಪೇಟೆಯಿಂದ 3 ಕಿ.ಮಿ. ದೂರ ಸಂಚರಿಸಿದಾಗ ಕೊಣಾಜೆಕಲ್ಲು ತಲುಪುವ ಒಳರಸ್ತೆ ಸಿಗುತ್ತದೆ. ಇಲ್ಲಿಂದ ಮುಂದೆ ಒಂದು ಕಿ.ಮಿ. ದೂರ ಸಂಚರಿಸಿದರೆ ಸಾಕು ಬೆಟ್ಟಕ್ಕೆ ತಲುಪಬಹುದು. ಅಲ್ಲಿಂದ ಸೃಷ್ಟವಾಗಿ ಕಾಣಿಸುವ ಕಾಡಿನ ದಾರಿಯಲ್ಲಿ ಸಂಚಾರ ಕೈಗೊಂಡರೆ ಬೆಟ್ಟದ ಮೇಲೆ ಹೋಗಬಹುದು.
ಬೆಳ್ತಂಗಡಿಯಿಂದ 45 ಕಿ.ಮಿ ಮತ್ತು ಬೆಂಗಳೂರಿನಿಂದ 360 ಕಿ.ಮಿ ದೂರದಲ್ಲಿದೆ. ಮಂಗಳೂರಿನಿಂದ ಮೂಡಬಿದ್ರೆಗೆ ಬಂದು ಅಲ್ಲಿಂದ ಬಸ್‌ಗಳ ಮೂಲಕವೂ ಹೋಗಬಹುದು ಅಥವಾ ಬಾಡಿಗೆ ಟ್ಯಾಕ್ಸಿ, ಆಟೊದಲ್ಲೂ ಸಂಚಾರಿಸಬಹುದು.
ತೌಫೀಕ್ ಸಾಣೂರು
ದ್ವೀತಿಯ ಬಿ.ಎ. ಪತ್ರಿಕೋದ್ಯಮ ವಿಭಾಗ
ಎಂ.ಪಿ.ಎಂ ಕಾಲೇಜು, ಕಾರ್ಕಳ








































































