ರಾಜ್ಯದಲ್ಲಿ ಕೊರೊನ ಸೋಂಕು ವಿಪರೀತವಾಗಿದ್ದರೂ, ಮತ್ತೊಂದು ಕಡೆ ಭೀಕರ ನೆರೆ ಹಾವಳಿ ಉಂಟಾದರೂ ಸಹ ಚುನಾವಣಾ ಆಯೋಗ ತನ್ನ ಏಕಪಕ್ಷೀಯ ತೀರ್ಮಾನದಿಂದ ಹೊರಬರಲು ಸಿದ್ದವಾಗಿಲ್ಲ. ಕೇಂದ್ರದ ಹುಕುಂ ಕೂಡಾ ಹಾಗೇ ಇರಬಹುದು.
ಇಬ್ಬರು ಶಾಸಕರ ಆಯ್ಕೆ ತಡವಾದರೆ ಯಾವ ನಷ್ಟವೂ ಇಲ್ಲ. ಒಬ್ಬ ಶಾಸಕನ ಅಗತ್ಯ ಅಂಥದ್ದಾಗಿದೆಯೆಂದಾಗಿದ್ದರೆ ರಾಜ್ಯದ ಪರಿಸ್ಥಿತಿ ಈ ಮಟ್ಟದಲ್ಲಿ ತೊಳಲಾಡುವುದಿಲ್ಲ. ಶಾಸಕ ನಾಗುವ ಬಯಕೆಯೇ ತಾನುದ್ಧಾರವಾಗುವುದು.
ಬಿಜೆಪಿ ಹೈಕಮಾಂಡು ಈ ಉಪಚುನಾವಣೆಯನ್ನು ಒಂದು ಅಸ್ತ್ರವನ್ನಾಗಿ ಮಾಡಿ ಯಡಿಯೂರಪ್ಪನವರ ಕೊರಳ ನೇರಕ್ಕೆ ಗುರಿಯಿಟ್ಟಿರುವುದಂತೂ ಸೂರ್ಯನಷ್ಟೇ ಸತ್ಯ.ಅದಕ್ಕೆಂದೇ ಯಡಿಯೂರಪ್ಪನವರು ತನ್ನ ಮಗನಿಗೆ ಆಶೀರ್ವಾದ ಮಾಡಿ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಬಾ ಅಂತ ರಥವೇರಿಸಿ ಕಳುಹಿಸಿದ್ದು. ಮಣಿರತ್ನಂ ಗೆಲ್ಲದೆ ಹೋದರೆ ಶಿರಾದಲ್ಲಿನ 70 ವರ್ಷದ ದಾಖಲೆಯನ್ನು ಮುರಿಯುವ ಕೆಲಸಮಾಡಿ ಶಹಬ್ಬಾಸ್ ಗಿಟ್ಟಿಸಿಕೊಳ್ಳುವ ಯೋಚನೆ ಮುಖ್ಯಮಂತ್ರಿಯವರದ್ದಾಗಿದೆ.

ಬಿಜೆಪಿ ಹೈಕಮಾಂಡು ಏನೇ ಒಳ ತಂತ್ರ ಹೂಡಿದರೂ ಅನೇಕ ಸಂದರ್ಭಗಳಲ್ಲಿ ಯಡಿಯೂರಪ್ಪ ಗೆದ್ದಿದ್ದಾರೆ. ಪಕ್ಷದೊಳಗಿನ ರಹಸ್ಯ ಸವಾಲಿಗೆ ಉತ್ತರ ಕೊಟ್ಟಿದ್ದಾರೆ. ಅದು ಗೊತ್ತಿದ್ದೇ ಹೈಕಮಾಂಡು ಈ ಬಾರಿ ಯಡಿಯೂರಪ್ಪನವರನ್ನು ಹುದ್ದೆಯಿಂದ ಕೆಳಗಿಳಿಸುವುದಕ್ಕೆ ತನ್ನದೇ ಅಂತಿಮ ನಿರ್ಣಯವನ್ನು ಈಗಾಗಲೇ ಬರೆದಿಟ್ಟಿದೆ ಎಂಬುದಕ್ಕೆ ಬಸವನ ಗೌಡ ಪಾಟೀಲ್ ಯತ್ನಾಳ್ ಅವರ ಮಾತುಗಳೇ ಸಾಕ್ಷಿ.
ಲಿಂಗಾಯತ ಹೊರತಾಗಿ ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡುವುದಕ್ಕಾಗದಿರುವ ಧರ್ಮ ಸಂಕಟದಿಂದಾಗಿ ಯತ್ನಾಳ್ ಅವರು ಮಾತ್ರ ಅವಿರೋಧ ಅಭ್ಯರ್ಥಿಯಾಗುವ ಅವಕಾಶ ಹೊಂದಿರುತ್ತಾರೆ. ಯಡಿಯೂರಪ್ಪನವರಿಗೆ ಸಮಯಗಳಿಂದಲೂ ಬಹಿರಂಗ ಹೇಳಿಕೆಯ ಗುದ್ದು ಕೊಡುತ್ತ ಬಂದವರಲ್ಲಿ ಯತ್ನಾಳ್ ಪ್ರಬಲರು ಎಂಬುದು ಗಮನಾರ್ಹ.
ವಿ.ಕೆ.ವಾಲ್ಪಾಡಿ








































































