“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬಂತೆ ಅತಿ ಪ್ರಾಚೀನ ವೇದಗಳ ಕಾಲದ ಗುರುಕುಲ ಪದ್ಧತಿಯಲ್ಲಿ ರಾಜಮಹಾರಾಜರ ಅಥವಾ ಎಷ್ಷೇ ಶ್ರೀಮಂತರ ಮಕ್ಕಳು ತಾವೇ ಗುರುಗಳ ಬಳಿ ತೆರಳಿ , ಅವರಿಗೆ ಸಂಪೂರ್ಣ ಶರಣು ಹೋಗಿ –ಸರ್ವವಿದ್ಯೆಗಳನ್ನು ತಮ್ಮದನ್ನಾಗಿಸುವ“ಸು” ಸಂಸ್ಕೃತಿ ಇತ್ತು.ಇಷ್ಟಪಟ್ಟು ಕಷ್ಟಪಟ್ಟು ವಿದ್ಯಾರ್ಜನೆ ಮಾಡಿ ಮುಂದಿನ ಪೀಳಿಗೆಗೆ ಭವ್ಯ ಸಂಸ್ಕೃತಿಯನ್ನು ಧಾರೆ ಎರೆದು ಚಿರಸ್ಮರಣೀಯರಾಗಿದ್ದಾರೆ.
ಆದರೆ ಪ್ರಸ್ತುತ “ವಿದ್ಯಾಗಮ” ಏನುಹೇಳುತ್ತದೆ?. ಮಕ್ಕಳ ನಿರಂತರ ಕಲಿಕೆ, ನಿರಂತರ ಸಂಪರ್ಕ ಮತ್ತು ಅವರಿಗೆ ಮನೋಸ್ಥೈರ್ಯ ತುಂಬಲು ಎಲ್ಲ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕ್ಕೊಳ್ಳಬೇಕು.21 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದುಶ್ಲಾಘನೀಯ ಕಾರ್ಯವೇ ಸರಿ.
ಆದರೆ ಇಲ್ಲಿ ಮಕ್ಕಳು ಶಾಲೆಗೆ ಬರುವಂತಿಲ್ಲ. ಶಿಕ್ಷಕರೇ ಅವರಿಗೆ ಬೇರೊಂದು ಜಾಗದಲ್ಲಿ ಕಲಿಸಬೇಕು. ಈ ಮಹಾಮಾರಿ ಕೊರೊನಾದ ಮಧ್ಯೆ ಪಾಠವನ್ನು ಮಾಡಬೇಕು. ಅಷ್ಟೇ ಅಲ್ಲ ಅದಕ್ಕೆ ಸೂಕ್ತವಾದ ತಾಣವನ್ನೂ ಶಿಕ್ಷಕರೇ ನಿಗದಿ ಪಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸೂಕ್ತವಾದ ತಾಣಗಳನ್ನು ಹುಡುಕುವುದು ಬಹಳ ತ್ರಾಸದ ಕೆಲಸ . ಕೆಲವರು ಬಸ್ ಸ್ಟಾಪ್ ಗಳಲ್ಲಿ, ಮರದ ನೆರಳಲ್ಲಿ, ಯಾರದ್ದೋ ಮನೆಗಳಲ್ಲಿ ತರಗತಿಗಳನ್ನು ನಿರ್ವಹಿಸಿದರು .ಕನಿಷ್ಠ ಅಗತ್ಯಗಳನ್ನು ಪೂರೈಸಲು ಅಸಾಧ್ಯವಾದ ತಾಣಗಳಿವು. ಪ್ರಕೃತಿಯಕರೆಗೂ ಕೆಲವು ಕಡೆಗಳಲ್ಲಿಅವಕಾಶವಿರಲಿಲ್ಲ. ಅಲ್ಲದೆ ಇಲ್ಲಿ ಸೋಂಕು ಹರಡಲು ಸಾಕಷ್ಟು ಆಸ್ಪದವಿದೆ.

ಇದೇ“ವಿದ್ಯಾಗಮ”ಕಲಿಕೆಯನ್ನುಆಯಾಯ ಶಾಲೆಗಳಲ್ಲಿಯೇ ಮಾಡಲು ಏನು ಕೊರತೆ?. ದಿನಕ್ಕೆ 10-15 ಮಕ್ಕಳನ್ನು ಶಾಲೆಗೆ ಬರಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಇದನ್ನು ಆಯಾಯ ಶಾಲೆಗಳಲ್ಲಿ ಮಾಡುತ್ತಿದ್ದರೆ ಅತ್ಯಂತ ಸೂಕ್ತವಾಗುತ್ತಿತ್ತು. ಇದರ ಬದಲು ಶಿಕ್ಷಕರನ್ನು ಮಕ್ಕಳ ಬಳಿ ಕಳುಹಿಸುವುದು ಒಂದು ಅವೈಜ್ಞಾನಿಕ ಕ್ರಮವೇ ಸರಿ. ವಿದ್ಯಾರ್ಥಿಗಳ ಕ್ಷೇಮ ಎಷ್ಟು ಮುಖ್ಯವೊ, ಅಷ್ಟೇ ಮುಖ್ಯ ಶಿಕ್ಷಕರ ಕ್ಷೇಮ ಕೂಡ. ಬಿಸಿಲು,ಮಳೆ, ಗಾಳಿ ಎನ್ನದೆ,ಎಲ್ಲೆಲ್ಲೋ ಅಲೆದು ಕೊರೋನಾ ವಜ್ರಮುಷ್ಟಯಿಂದ ಇಹಲೋಕ ತ್ಯಜಿಸಿದ ಶಿಕ್ಷಕರ ಜೀವಕ್ಕೆ ಬೆಲೆ ಇಲ್ಲವೇ? ಈ ಅಮಾಯಕ ಶಿಕ್ಷಕರನ್ನು ದುಡಿಸಿಕೊಂಡ ರೀತಿ ನಿಜಕ್ಕೂ ಅಮಾನವೀಯ.
ಶಾಲೆಯಿಂದ ಹೊರಗುಳಿದ ಮಕ್ಕಳು“ಬಾಲಕಾರ್ಮಿಕ”ರಾಗುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ . ಇದಕ್ಕೆ ಯಾರು ಹೊಣೆ? ಮಕ್ಕಳ ತಪ್ಪನ್ನುತಿದ್ದುವ ನೈತಿಕ ಹಕ್ಕನ್ನೇ ಈಗಿನ ಶಿಕ್ಷಣ ವ್ಯವಸ್ಥೆ ಶಿಕ್ಷಕರಿಂದ ಕಿತ್ತುಕೊಂಡಿರುವಾಗ, ಅಸಹಾಯಕ ಶಿಕ್ಷಕರು ಏನು ಮಾಡಲು ಸಾಧ್ಯ? ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಂತೂ ಬಿಸಿ ಊಟ,ಸೈಕಲ್ ವಿತರಣೆ, ಅಕ್ಕಿ, ಬೇಳೆ, ತರಕಾರಿ ಇತ್ಯಾದಿಗಳ ಲೆಕ್ಕಾಚಾರದಲ್ಲೇ ಸೋತು ಹೈರಾಣಾಗಿದ್ದಾರೆ. “ನಾವು ಶಾಲೆಯಲ್ಲೇ ಹೋಗಿ ಪಾಠ ಮಾಡುತ್ತೇವೆ”ಎಂದು ಶಿಕ್ಷಕರ ಅಳಲು. ಆದರೆ ಇವನ್ನೆಲ್ಲಾ ಕೇಳುವವರು ಯಾರು? ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾನೂನುಗಳನ್ನು ಮಾಡುವಾಗ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಶಿಕ್ಷಕರನ್ನು ಗೌರವಿಸಿದಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಗೌರವ. ಇಡೀ ಸಮಾಜಕ್ಕೂ ಗೌರವ.
ಮಾಲತಿ ವಸಂತರಾಜ್

































