ಶಬರಿಮಲೆ, ಅ.17 : ಪ್ರಸಿದ್ಧ ಶಬರಿಮಲೆ ಕ್ಷೇತ್ರವನ್ನು ಸುಮಾರು ಏಳು ತಿಂಗಳ ಬಳಿಕ ಭಕ್ತರಿಗಾಗಿ ಶನಿವಾರ ತೆರೆಯಲಾಯಿತು. ಕ್ಷೇತ್ರಕ್ಕೆ ಬರುವ ಭಕ್ತರು ಕೊರೊನಾ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಮಾಡಲಾಗಿದೆ. ಜೊತೆಗೆ ಮಾಸ್ಕ್ ಧರಿಸುವುದು ಸೇರಿದಂತೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಐದು ದಿನಗಳ ಕಾಲ ಅಂದರೆ ಅ.21ರ ತನಕ ಸನ್ನಿಧಾನ ತೆರೆದಿರುತ್ತದೆ.
ನಿತ್ಯ 250 ಭಕ್ತರಿಗೆ ಮಾತ್ರ ಸನ್ನಿಧಾನಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಆನ್ ಲೈನ್ ನಲ್ಲಿ ದರ್ಶನ ಕಾದಿರಿಸಿ ಹೋಗಬೇಕು. ಶನಿವಾರ 246 ಮಂದಿ ಆನ್ ಲೈನ್‌ನಲ್ಲಿ ದರ್ಶನ ಕಾದಿರಿಸಿದ್ದರು.
ಕ್ಷೇತ್ರಕ್ಕೆ ತಲುಪುದಕ್ಕಿಂತ 48 ತಾಸು ಮೊದಲು ಪಡೆದುಕೊಂಡ ಕೊರೊನಾ ನೆಗೆಟಿವ್ ವರದಿ ಇದ್ದರೆ ಮಾತ್ರ ದರ್ಶನಕ್ಕೆ ಅನುಮತಿ ಸಿಗುತ್ತದೆ. 10ವರ್ಷಕ್ಕಿಂತ ಕೆಳಗಿನ ಮತ್ತು 60ವರ್ಷ ಮೇಲ್ಪಟ್ಟವರಿಗೆ ಶಬರಿಮಲೆ ಯಾತ್ರೆಗೆ ಅನುಮತಿ ಇಲ್ಲ. ಮಾ.25ರಂದು ಲಾಕ್ ಡೌನ್ ಹೇರಿಕೆಯಾದ ಬಳಿಕ ಶಬರಿಮಲೆಗೆ ಭಕ್ತರು ಹೋಗುತ್ತಿರುವುದು ಇದೇ ಮೊದಲು.
































