ಪ್ಯಾರಿಸ್, ಅ.17: ತರಗತಿಯಲ್ಲಿ ಮಕ್ಕಳಿಗೆ ಪ್ರವಾದಿ ಮಹಮ್ಮದರ ಕಾರ್ಟೂನುಗಳನ್ನು ತೋರಿಸಿದ ಶಿಕ್ಷಕನನ್ನು ಧರ್ಮಾಂಧರು ಶಾಲೆಯ ಹೊರಗೆ ಶಿರಚ್ಛೇದ ಮಾಡಿದ ಭೀಕರ ಘಟನೆ ಪ್ಯಾರಿಸ್ ನ ಹೊರವಲಯವಾದ ಕೊಂಫ್ಲಾನ್ಸ್ ಸೈಂಟ್ ಹೊನೊರಿನ್ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.
ಶಿರಚ್ಛೇದ ಮಾಡಿದ ದುಷ್ಕರ್ಮಿಯನ್ನು ಪೊಲೀಸರು ಗುಂಡಿಕ್ಕಿ ಸಾಯಿಸಿದ್ದಾರೆ. ಈ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿ ಓರ್ವ ಅಪ್ರಾಪ್ತ ವಯಸ್ಸಿನ ಯುವಕ ಸೇರಿ ನಾಲ್ಕು ನಂದಿಯನ್ನು ಬಂಧಿಸಲಾಗಿದೆ. ದುಷ್ಕರ್ಮಿಗಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಶಿಕ್ಷಕನ ತಲೆ ಕಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಲ್ ಮ್ಯಾಕ್ರೊನ್ ಇದು ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ.

2015ರಲ್ಲಿ ಚಾರ್ಲಿ ಹೆಬ್ಡೊ ಎಂಬ ಪತ್ರಿಕೆ ಪ್ರವಾದಿಯ ಕಾರ್ಟೂನ್ ಪ್ರಕಟಿಸಿದ್ದನ್ನು ವಿರೋಧಿಸಿ ಪತ್ರಿಕೆಯ ಕಚೇರಿಯ ಮೇಲೆ ಮೂಲಭೂತವಾದಿಗಳು ದಾಳಿ ಮಾಡಿದ್ದರು. ಅಂದಿನಿಂದ ಫ್ರಾನ್ಸ್ ಹಲವು ಭಯೋತ್ಪಾದಕ ಕೃತ್ಯಗಳಿಗೆ ಸಾಕ್ಷಿಯಾಗಿದೆ.
ಪ್ರಸ್ತುತ ಹತ್ಯೆಯಾಗಿರುವ ಶಿಕ್ಷಕ ಇತಿಹಾಸ ಬೋಧಿಸುತ್ತಿದ್ದರು. ಇತ್ತೀಚೆಗೆ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಪಾಠ ಮಾಡುವಾಗ ಪ್ರವಾದಿಯ ಕೆಲವು ಕಾರ್ಟೂನುಗಳನ್ನು ಮಕ್ಕಳಿಗೆ ತೋರಿಸಿದ್ದರು. ಈ ಚಿತ್ರಗಳನ್ನು ತೋರಿಸುವ ಮೊದಲು ಮುಸ್ಲಿಂ ವಿದ್ಯಾರ್ಥಿಗಳಿಗೆ ಇದು ನಿಮ್ಮ ಧಾರ್ಮಿಕ ಭಾವನೆಗೆ ಘಾಸಿ ಮಾಡುವುದಾದರೆ ತರಗತಿಯಿಂದ ಹೊರಗೆ ಹೋಗಿ ಎಂದು ಹೇಳಿದ್ದರು.































