ಬೆಂಗಳೂರು, ಅ.16: ಅಕ್ಟೋಬರ್ 15ರಿಂದ ಕೆಲವು ನಿರ್ಬಂಧಗಳಿಗೊಳಪಟ್ಟು ದೇಶಾದ್ಯಂತ ಸಿನೇಮಾ ಮಂದಿರಗಳು ತೆರೆದಿವೆ. ಆದರೆ ನಿರೀಕ್ಷೆಯಂತೆಯೇ ಜನರ ಪ್ರತಿಸ್ಪಂದನ ಮಾತ್ರ ತೀರಾ ನೀರಸವಾಗಿತ್ತು. ಕೆಲವೇ ನಗರಗಳಲ್ಲಿ ಮಲ್ಟಿಪ್ಲೆಕ್ಸ್ ಗಳು ಮಾತ್ರ ಕೆಲವು ಪ್ರದರ್ಶನಗಳನ್ನು ಏರ್ಪಡಿಸಿದ್ದವು. ಈ ಶೋಗಳಿಗೆ ಕೆಲವೇ ಪ್ರೇಕ್ಷಕರು ಬಂದಿದ್ದಾರೆ.
ಈ ನಡುವೆ ಬೆಂಗಳೂರಿನ ಐನಾಕ್ಸ್ ಥಿಯೇಟರ್ ನಲ್ಲಿ ಅಚ್ಚರಿಯೊಂದು ಸಂಭವಿಸಿದೆ. ಐನಾಕ್ಸ್ ಗೆ ಸಿನೇಮಾ ವೀಕ್ಷಿಸಲು ಬಂದದ್ದು ಕೇವಲ ಒಬ್ಬ ಪ್ರೇಕ್ಷಕ. ಆದರೆ ಐನಾಕ್ಸ್ ನವರು ಈ ಒಬ್ಬ ಪ್ರೇಕ್ಷಕನಿಗಾಗಿ ಒಂದಿಡೀ ಪ್ರದರ್ಶನವನ್ನು ತೋರಿಸಿದ್ದಾರೆ.
ಮಹದೇವಪುರ ಬಳಿ ಇರುವ ಐನಾಕ್ಸ್ ನಲ್ಲಿ ಥಪ್ಪಡ್ ಎಂಬ ಹಿಂದಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ರವೀಂದ್ರ ಎಂಬ ಪ್ರೇಕ್ಷಕ ಬಂದಾಗ ಚಿತ್ರಮಂದಿರದ ಸಿಬಂದಿ ಪುಷ್ಪಗುಚ್ಚ ನೀಡಿ ಅವರನ್ನು ಸ್ವಾಗತಿಸಿ ಅವರೊಬ್ಬರಿಗಾಗಿ ಒಂದು ಸಿನೇಮಾ ಪೂರ್ತಿ ತೋರಿಸಿದರು. ಥಪ್ಪಡ್ ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ.







































































