ವಿಶ್ವ ಆಹಾರ ದಿನ – ಹಸಿವು ನೀಗಿಸುವುದು ಪುಣ್ಯ ಕಾರ್ಯ

ಅಕ್ಟೋಬರ್ 16 ವಿಶ್ವ ಆಹಾರ ದಿನ. ಜಗತ್ತಿನ 720 ಕೋಟಿ ಜನಸಂಖ್ಯೆಯಲ್ಲಿ 130 ಕೋಟಿಗೂ ಅಧಿಕ ಜನರಿಗೆ ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ. ಪ್ರತೀ ವರ್ಷ 30 ಲಕ್ಷ ಜನ ಪೌಷ್ಟಿಕ ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ ಈ ಸಮಸ್ಯೆ ಇಂದಿಗೂ ಏರುಗತಿಯಲ್ಲಿ ಸಾಗುತ್ತಿದೆ. ಕೊರೊನ ಕಾರಣಕ್ಕೆ ಎಷ್ಟೋ ಜನ ತುತ್ತಿನ ಚೀಲವನ್ನು ಕಳೆದುಕೊಂಡಿದ್ದಾರೆ. ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಇಂದಿಗೂ ಕೂಡ ಹಸಿವಿನ ಸಂಖ್ಯೆ ಜಾಸ್ತಿ ಇರುವ ರಾಜ್ಯಗಳು. ಕರ್ನಾಟಕದಲ್ಲಿ ಅನ್ನ ಭಾಗ್ಯ ಯೋಜನೆಯ ಹೊರತಾಗಿ ಕೂಡ ಹಸಿವಿನ ಸೂಚ್ಯಂಕ ಜಾಸ್ತಿಯೇ ಇದೆ. ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸುವುದು ಸಮಸ್ಯೆಯೇ ಆಗಿದೆ. ಅದರ ಜೊತೆಗೆ ಉಳ್ಳವರು, ಮೇಲ್ಮಧ್ಯಮ ವರ್ಗದವರು ಪೋಲು ಮಾಡುವ ಆಹಾರದ ಪ್ರಮಾಣವೂ ಹೆಚ್ಚಿದೆ. ಪ್ರತಿಷ್ಠೆಗಾಗಿ ಶುಭ ಸಮಾರಂಭವನ್ನು ಏರ್ಪಡಿಸುವ ಮಂದಿ ಪೋಲು ಮಾಡುವ ಆಹಾರದಿಂದ ಎಷ್ಟೋ ಮಂದಿಯ ಹಸಿವು ನೀಗಿಸಬಹುದು. ಒಂದೊಂದು ತುತ್ತು ಸಂಪಾದಿಸಲು ಕಷ್ಟ ಪಡುವ ಮಂದಿಗೆ ಹಸಿವು ನೀಗಿಸಲು ನಾವೆಲ್ಲ ಪ್ರಯತ್ನ ಮಾಡಬೇಕಾಗಿದೆ. ಕರ್ನಾಟಕದಲ್ಲಿ ಇಸ್ಕಾನ್, ಅಕ್ಷಯಪಾತ್ರೆ ಯೋಜನೆಯ ಮೂಲಕ, ಸರಕಾರದ ಅಕ್ಷರ ದಾಸೋಹದ ಯೋಜನೆಯ ಮೂಲಕ ಲಕ್ಷಾಂತರ ಶಾಲೆಯ ಮಕ್ಕಳ ಹಸಿವು ನೀಗಿಸುವ ಪ್ರಯತ್ನಗಳು ನಡೆದಿವೆ. ಅವರಿಗೆ ನಮ್ಮ ಅಭಿನಂದನೆಗಳು. ಹಸಿವು ನೀಗಿಸುವುದ ಪುಣ್ಯ ಕಾರ್ಯ ಎಂಬುದು ನಮ್ಮ ಸನಾತನ ನಂಬಿಕೆ. ದೇವಸ್ಥಾನಗಳಲ್ಲಿ ನಡೆಯುವ ಅನ್ನದಾನಗಳು, ಮದುವೆ ಮುಂತಾದ ಶುಭಕಾರ್ಯಗಳಲ್ಲಿ  ಊಟೋಪಾಚಾರಕ್ಕೆ ಇರುವ ಪ್ರಾಶಸ್ತ್ಯದ ಹಿಂದಿನ ತಿರುಳು ಕೂಡ ಇದೇ ಆಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಯ ಹಸಿವು ನೀಗಿದಾಗಲೇ ಆ ದೇಶ ಸುಭಿಕ್ಷವಾಗುವುದು. ಈ ನಿಟ್ಟಿನಲ್ಲಿ ನಾವು ಸಾಧಿಸಬೇಕಿರುವುದು ಇನ್ನೂ ಬಹಳಷ್ಟಿದೆ.



































































































error: Content is protected !!
Scroll to Top