ಬಯೊ ಬಬ್ಲ್ ಒಳಗೆ ಐಪಿಎಲ್‌ ಆಟಗಾರರು: ಏನಿದು ಬಯೊ ಬಬ್ಲ್? ಅದು ಹೇಗೆ ಆಟಗಾರರನ್ನು ಕೊರೊನಾದಿಂದ ಕಾಪಾಡುತ್ತದೆ?

ಗಲ್ಫ್‌ ದೇಶದಲ್ಲಿ ಐಪಿಎಲ್‌ ಕ್ರಿಕೆಟ್‌ ಕೂಟ ಆರಂಭವಾಗಲು ಇನ್ನು ಉಳಿದಿರುವುದು ಬರೀ ಐದು ದಿನ ಮಾತ್ರ. ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಕ್ರೀಡಾಕೂಟವಿದು. ಈ ಕಾರಣಕ್ಕೆ ಕ್ರಿಕೆಟ್‌ ಪ್ರೇಮಿಗಳು ಮಾತ್ರವಲ್ಲ ಇಡೀ ಜಗತ್ತು ಐಪಿಎಲ್‌ ಆರಂಭವಾಗುವುದನ್ನು ಭಾರಿ ಕುತೂಹಲದಿಂದ ಎದುರು ನೋಡುತ್ತಿದೆ. ಐಪಿಎಲ್‌ನ ಯಶಸ್ಸು ಕೊರೊನೋತ್ತರ ಕಾಲದ ಕ್ರೀಡಾಕೂಟಗಳಿಗೆ ಹೊಸ ಮಾನದಂಡವನ್ನು ನಿಗದಿಪಡಿಸಲು ಕಾರಣವಾಗಬಹುದು. ಈ ದೃಷ್ಟಿಯಿಂದಲೂ ಯುಎಇಯಲ್ಲಿ ಸೆ.19ರಿಂದ ಪ್ರಾರಂಭವಾಗಲಿರುವ ಐಪಿಎಲ್‌ ಮಹತ್ವವನ್ನು ಪಡೆದುಕೊಂಡಿದೆ.

ಪ್ರೇಕ್ಷಕರಿಲ್ಲದೆ, ಅವರ ಹುರಿದುಂಬಿಸುವ ಹರ್ಷೋದ್ಗಾರಗಳನ್ನು ಕೇಳಿಸಿಕೊಳ್ಳದೆ, ಚಿಯರ್‌ ಲೀಡರ್‌ಗಳ ಮಾದಕ ಕುಣಿತವಿಲ್ಲದೆ ಆಡುವ ಐಪಿಎಲ್‌ ಆಟಗಾರರಿಗೆ ಮಾತ್ರವಲ್ಲದೆ ಜನರಿಗೂ ನೀರಸ ಎಂದೆನಿಸಬಹುದು. ಆದರೂ ಈ ವರ್ಷ ಐಪಿಎಲ್‌ ಅಗಲೇ ಬೇಕೆಂದು ಬಿಸಿಸಿಐ ಪಟ್ಟುಹಿಡಿದ ಪರಿಣಾಮವಾಗಿ ಕ್ರಿಕೆಟಿಗರ ದಂಡು ಮರುಭೂಮಿಗೆ ಪ್ರಯಾಣಿಸಿದೆ.

ಕ್ರಿಕೆಟಿಗರ ಆರೋಗ್ಯದ ಸುರಕ್ಷೆಗಾಗಿ ಅಭೂತಪೂರ್ವ ಎನ್ನಬಹುದಾದಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಈಗ ಅತಿ ಪ್ರಮುಖವಾಗಿ ಕೇಳಿಬರುತ್ತಿರುವುದು ಬಯೊ ಬಬ್ಲ್‌ ಎಂಬ ಸುರಕ್ಷತೆಯ ಕುರಿತು? ಏನಿದು ಬಯೊ ಬಬ್ಲ್?‌ ಇದು ಹೇಗೆ ಆಟಗಾರರನ್ನು ಕೊರೊನಾ ವೈರಸ್‌ನಿಂದ  ಕಾಪಾಡುತ್ತದೆ?

ಬಯೊ ಬಬ್ಲ್‌ ಎಂದರೆ ಜೈವಿಕ ಗುಳ್ಳೆಯೊಳಗೆ ಆಟಗಾರರನ್ನು ಇಡುವುದು ಎಂದು ನೀವು ಭಾವಿಸಿದ್ದರೆ ನಿಮ್ಮ ಕಲ್ಪನೆ ತಪ್ಪು. ಹೀಗೆ ಗುಳ್ಳೆಯೊಳಗಿದ್ದು ಕ್ರಿಕೆಟ್‌ ಆಟ ಆಡುವುದು ಅಸಾಧ್ಯ. ಬಯೊ ಬಬ್ಲ್‌ ಎಂದರೆ ಆಟಗಾರರಿಗೆ ವಿಧಿಸಲಾಗಿರುವ ಕೆಲವು ಕಟ್ಟುನಿಟ್ಟಿನ ನಿಯಮಾವಳಿಗಳು. ಆರಂಭದಲ್ಲಿಯೇ ಆಟಗಾರರಿಗೆ ಮತ್ತು ಆಟದ ಭಾಗವಾಗಿರುವ ಇತರರಿಗೆ ಸ್ಟಾಂಡರ್ಡ್‌ ಓಪರೇಟಿಂಗ್‌ ಪ್ರೊಸೀಜರ್‌ ಅನ್ನು ರಚಿಸಲಾಗಿದೆ. ಇದರಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. ಇದರಲ್ಲೇ ಆಟಗಾರರು ತಮ್ಮ ಸುತ್ತ ಒಂದು ಬಯೊ ಬಬ್ಲ್‌ ನಿರ್ಮಿಸಿಕೊಳ್ಳಬೇಕೆಂಬ ಸೂಚನೆಯಿದೆ.

ಬಯೊ ಬಬ್ಲ್‌ನ ಮೊದಲ ಪ್ರಯೋಗವಾಗಿರುವುದು ಇಂಗ್ಲಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ನಡೆದ ಟೆಸ್ಟ್‌ ಸರಣಿಯಲ್ಲಿ. ಇದು ಕೊರೊನಾ ಹಾವಳಿಯ ನಡೆದ ಮೊದಲ ದೊಡ್ಡ ಅಂತಾರಾಷ್ಟ್ರೀಯ ಕ್ರೀಡಾಕೂಟವೂ ಹೌದು.ಇಡೀ ಪಂದ್ಯವನ್ನು ಜೈವಿಕ ಸುರಕ್ಟಿತ ವಾತಾವರಣದಲ್ಲಿ ಆಡಲಾಗಿತ್ತು.  

ಹಾಗಾದರೆ ಬಯೊ ಬಬ್ಲ್‌ ಎಂದರೇನು?

ಸರಳವಾಗಿ ಹೇಳುವುದಾದರೆ ಹೊರಜಗತ್ತಿನ ಎಲ್ಲ ಸಂಪರ್ಕಗಳನ್ನು ತಪ್ಪಿಸಿದ ಒಂದು ಪರಿಸರ ಇದು. ಆಟಗಾರರು, ಬೆಂಬಲ ಸಿಬಂದಿ, ಇನ್ನಿತರ ಅಧಿಕಾರಿಗಳು ತಮ್ಮ ಸುತ್ತ ಹಾಕಿರುವ ಲಕ್ಷ್ಮಣ ರೇಖೆಯನ್ನು ದಾಟಿ ಆಚೆ ಹೋಗಬಾರದು. ಮೈದಾನ ಮತ್ತು ಹೊಟೇಲ್‌ ಬಿಟ್ಟು ಬೇರೆಲ್ಲಿಗೂ ಅವರು ಹೋಗಬಾರದು, ಯಾರನ್ನೂ ಭೇಟಿ ಮಾಡಬಾರದು. ಹೊಟೇಲ್‌ ಮತ್ತು ಮೈದಾನದ ನಡುವೆ ಒಬ್ಬೊಬ್ಬರಾಗಿಯೇ ಪ್ರಯಾಣಿಸಬೇಕು. ಪ್ರತಿ ಸಲ ಅವರು ಕೊರೊನಾ ಪಾಸಿಟಿವ್‌ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್‌ ರಿಪೋರ್ಟ್‌ ಬರುವ ತನಕ ಬಯೊ ಬಬ್ಲ್‌ ಒಳಗೆ ಅವರಿಗೆ ಪ್ರವೇಶ ಸಿಗುವುದಿಲ್ಲ. ಪಂದ್ಯವನ್ನು ಪ್ರಸಾರ ಮಾಡಲು ಬರುವವರಿಗೂ ಇದೇ ಮಾದರಿಯ ಬಯೊ ಬಬ್ಲ್‌ ಇದೆ.

ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಕಾದಿರುತ್ತದೆ. ಇಂಗ್ಲಂಡ್-‌ ವೆಸ್ಟ ಇಂಡೀಸ್‌ ಟೆಸ್ಟ್‌ ಸಂದರ್ಭದಲ್ಲಿ ಬೌಲರ್‌ ಜೋಫ್ರಾ ಆರ್ಚರ್‌ ಬಯೊ ಬಬ್ಲ್‌ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಎರಡನೇ ಟೆಸ್ಟ್ ನಿಂದ ಅವರನ್ನು ಕೈಬಿಡಲಾಗಿತ್ತು. ಮೊಹಮ್ಮದ್‌ ಹಫೀಜ್‌ ಕುಟುಂಬವರನ್ನು ಭೇಟಿ ಮಾಡಿದ ಕಾರಣ ಐದು ದಿನ ಅವರನ್ನು ಹೊರಗಿಡಲಾಗಿತ್ತು. ಎರಡು ಪರೀಕ್ಷೆಯಲ್ಲಿ ನೆಗಟಿವ್‌ ವರದಿ ಬಂದ ಬಳಿಕ ಅವರಿಗೆ ಮರಳಿ ಎಂಟ್ರಿ ಸಿಕ್ಕಿತು.

ಐಪಿಎಲ್‌ನಲ್ಲಿ ಹೊಟೇಲ್‌, ಅಭ್ಯಾಸ,  ಪಂದ್ಯ, ಪ್ರಯಾಣ ಹೀಗೆ ನಾಲ್ಕು ವಿಭಾಗಗಳಲ್ಲಿ ಬಯೊ ಬಬ್ಲ್‌ ರಚಿಸಲಾಗಿದೆ. ಅಂತೆಯೇ ಆಟಗಾರರು, ಸಿಬಂದಿಗಳು, ಅಧಿಕಾರಿಗಳು, ಭದ್ರತೆಯವರು ಎಂದು ಹಲವು ಗುಂಪುಗಳನ್ನು ರಚಿಸಲಾಗಿದೆ. ಎಂಟು ತಂಡಗಳಿಗೆ ಎಂಟು ಬಯೊ ಬಬ್ಲ್‌ ರಚಿಸಲಾಗಿದ್ದು, ಒಂದು ತಂಡದವರು ಇನ್ನೊಂದು ತಂಡದವರನ್ನು ಯಾವ ಕಾರಣಕ್ಕೂ ಈ ಬಬ್ಲ್‌ನಿಂದ ಹೊರಬಂದು ಭೇಟಿಯಾಗುವಂತಿಲ್ಲ.ಪ್ರತಿಯೊಬ್ಬರು ತಮ್ಮ ಜೈವಿಕ ಸುರಕ್ಷಿತ ವಾತಾವರಣದೊಳಗೆ ಇರಬೇಕೆಂಬುದೇ ಬಯೊ ಬಬ್ಲ್‌ ಪರಿಕಲ್ಪನೆ.  

ಉಮೇಶ್‌ ಕೋಟ್ಯಾನ್‌



































































































error: Content is protected !!
Scroll to Top