ಟೆಹ್ರಾನ್, ಸೆ. 13 : ರಾಷ್ಟ್ರೀಯ ಕುಸ್ತಿ ಚಾಂಪಿಯನ್ ನವೀದ್ ಅಫ್ಕಾರಿಯನ್ನು (27) ಇರಾನ್‌ನಲ್ಲಿ ಶನಿವಾರ ಗಲ್ಲಿಗೇರಿಸಿದ ಘಟನೆ ಕ್ರೀಡಾವಲಯವನ್ನು ಆಘಾತಕ್ಕೀಡುಮಾಡಿದೆ. 2018ರಲ್ಲಿ ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ನವೀದ್ ಸೆಕ್ಯುರಿಟಿ ಗಾರ್ಡ್ ಒಬ್ಬರನ್ನು ಇರಿದು ಸಾಯಿಸಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು.
ಶಿರಾಜ್ ನಗರದಲ್ಲಿ ನವೀದ್‌ರನ್ನು ನೇಣಿಗೆ ಹಾಕಿ ಸಾಯಿಸಲಾಗಿದೆ ಎಂದು ಇರಾನ್‌ನ ರಾಷ್ಟ್ರೀಯ ಮಾಧ್ಯಮ ಪ್ರಕಟಿಸಿದೆ.
ನವೀದ್ ಅಫ್ಕಾರಿಯನ್ನು 2018, ಸೆ.17ರಂದು ಬಂಧಿಸಲಾಗಿತ್ತು. ತ್ವರಿತ ವಿಚಾರಣೆ ನಡೆದು ಅವರಿಗೆ ಎರಡು ಮರಣ ದಂಡನೆ ವಿಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ನವೀದ್ ಅಫ್ಕಾರಿಯ ಸಹೋದರರಾದ ವಹೀದ್ ಅಫ್ಕಾರಿಗೆ 56 ವರ್ಷ ಮತ್ತು ಹಬೀಬ್ ಅಫ್ಕಾರಿಗೆ 24 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನವೀದ್ ಅಫ್ಕಾರಿಯನ್ನು ಗಲ್ಲಿಗೇರಿಸದಂತೆ ಇರಾನ್ ಮೇಲೆ ಭಾರಿ ಅಂತಾರಾಷ್ಟ್ರೀಯ ಒತ್ತಡವಿತ್ತು. ಇದರ ಹೊರತಾಗಿಯೂ ಶನಿವಾರ ಗಲ್ಲು ಶಿಕ್ಷೆ ಜಾರಿಯಾಗಿದೆ.
ಆಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನವೀದ್ ಅಫ್ಕಾರಿಯನ್ನು ಗಲ್ಲಿಗೇರಿಸಿರುವುದಕ್ಕೆ ಆಘಾತ ವ್ಯಕ್ತಪಡಿಸಿದೆ. ಸಮಿತಿ ಸ್ವತಃ ಇರಾನ್ ಅಧ್ಯಕ್ಷರಿಗೆ ಗಲ್ಲು ಶಿಕ್ಷೆಯನ್ನು ತಡೆಯುವಂತೆ ಮನವಿ ಮಾಡಿತ್ತು.
ಕಳೆದ ವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ನವೀದ್ ಅಫ್ಕಾರಿ ಗಲ್ಲುಶಿಕ್ಷೆಯನ್ನು ವಜಾಗೊಳಿಸಲು ಆಗ್ರಹಿಸಿದ್ದರು.
ಇರಾನ್ ನಲ್ಲಿ ಕುಸ್ತಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಹಲವು ಶ್ರೇಷ್ಠ ಕುಸ್ತಿಪಟುಗಳನ್ನು ಈ ದೇಶ ನೀಡಿದೆ. ನವೀದ್ ಎಳೆ ಹರೆಯದಲ್ಲೇ ಕುಸ್ತಿ ಕಣಕ್ಕೆ ಬಂದು ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ವಿಶ್ವಮಟ್ಟದಲ್ಲಿ ಸ್ಪರ್ಧಿಸುವ ಅರ್ಹತೆ ಅವರಿಗಿತ್ತು.



















