ಕಗ್ಗದ ಸಂದೇಶ –ಅಹಂಕಾರ ಸುಡುವುದು ನಮ್ಮನ್ನೇ

ನಿನ್ನ ಜೀವಿತವೆಲ್ಲ ನಿನ್ನ ಕೈ ಮಾಲ್ಕೆಯೇಂ|

ಅನ್ಯ ಶಕ್ತಿಗಳೆನಿತೊ ಬೆರೆತಿರುವುವಲ್ಲಿ?|

ಅನ್ನವಿಡುವವರು ತಿಳಿವನೀವರ್,ಒಡನಾಡುವರು|

ನಿನ್ನ ಬಾಳ್ಗಿವರಿರರೆ-ಮಂಕುತಿಮ್ಮ.

 ಪ್ರತಿಯೊಬ್ಬನ ಜೀವನ ರೂಪುಗೊಳ್ಳುವಲ್ಲಿ ವ್ಯಕ್ತಿತ್ವ ವಿಕಾಸವಾಗುವಲ್ಲಿ ಅನೇಕರ ನೆರವಿರುತ್ತದೆ. ನಿನ್ನ ಜೀವನವನ್ನು ನಿನ್ನೊಬ್ಬನ ಶ್ರಮದಿಂದ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅನ್ನವಿತ್ತು ಸಲಹಿದವರು, ಅರಿವಿನ ಬೆಳಕನ್ನು ಬೀರಿ ದಾರಿ ತೋರಿದವರು, ಬದುಕಿಗೆ ಬಲವಾಗಿ ನಿಂತ ಒಡನಾಡಿಗಳು, ಇವರೆಲ್ಲರ ಸಹಕಾರದಿಂದ ನಿನ್ನ ಬದುಕು ರೂಪುಗೊಂಡಿದೆ. ನಾನು ನನ್ನಿಂದಲೇ ಎನ್ನುವುದನ್ನು ಬಿಟ್ಟು ಎಲ್ಲರೂ ನನಗಾಗಿ ನಾನು ಎಲ್ಲರಿಗಾಗಿ ಎನ್ನುವುದನ್ನು ತಿಳಿದು ಧನ್ಯತಾ ಭಾವದೊಂದಿಗೆ ಬಾಳಬೇಕು ಎಂದಿದ್ದಾರೆ ಡಿ.ವಿ.ಜಿ.

“ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ. ತಿಳಿದು ನೋಡಿದರೆ  ಬಾಳು ಎಂಬುದಿದು ಋಣದ ರತ್ನದ ಗಣಿಯೋ”  ಎಂಬ ಕವಿ ಜಿ. ಎಸ್. ಶಿವರುದ್ರಪ್ಪನವರ ಮಾತು ಇಲ್ಲಿಗೆ ಪ್ರಸ್ತುತ ಎಂದು ಭಾವಿಸುತ್ತೇನೆ. ನಮಗೆ ತಾಯಿ, ತಂದೆ, ಗುರು ಹಿರಿಯರ, ಸಮಾಜದ, ದೈವ ದೇವರ ಮತ್ತು ಬಂಧು ಬಳಗದವರ ಋಣವಿದೆ ಎನ್ನುವುದನ್ನು ಮರೆಯಲಾದೀತೆ ? ನಮ್ಮ ಬೆಳವಣಿಗೆಯಲ್ಲಿ ಪರಿಸರದ ಅನೇಕ ಶಕ್ತಿಗಳ ಪ್ರಭಾವವನ್ನು ಅಲ್ಲಗಳೆಯಲಾದೀತೆ ? ಬಾಳ ದಾರಿಯಲ್ಲಿ ಪಡೆದ ನೆರವನ್ನು ಅನವರತ ನೆನೆಯುವುದು ಧರ್ಮವಲ್ಲವೆ ?

“ಈ ನಿನ್ನ ಬಾಳ ತರು ಚೆಂದವಿದೆ ಎನಿಸಿದರೆ ಎನಿತೊ ಜನ ಪ್ರೀತಿ ಜಲವೆರೆದಿರಲೇ ಬೇಕು.  ಅವರ ಸದಾಶಯದ ಚಿಗುರು ಬಳ್ಳಿಯೊ ನೀನು, ನೆನೆ ಸತತ ಉಪಕಾರ –ಮುದ್ದುರಾಮ ಎನ್ನುವ ಕೆ. ಶಿವಪ್ಪನವರ ಕವಿತೆಯ ಸಾಲುಗಳು ಕೂಡ ನೆನೆ ಮೊದಲು ಬಾಳಿನಲಿ ಬೆಳಕು ತಂದವರ ಎನ್ನುತ್ತವೆ. ಬದುಕಿನ ಸರ್ವಶ್ರೇಷ್ಠ  ಮೌಲ್ಯವಾದ ಕೃತಜ್ಞತೆ ಯನ್ನು ಮೈಗೂಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆಯಲ್ಲವೆ ?

“ನಾವು ಎತ್ತರಕ್ಕೆ ಬೆಳೆದಷ್ಟು ಸ್ನೇಹಜೀವಿ ಆಗಬೇಕೇ ಹೊರತು ಅಹಂಕಾರಿಯಾಗಬಾರದು. ಯಾಕೆಂದರೆ ಸ್ನೇಹ ನಮಗೆ ಪ್ರೀತಿ ಕೊಡುತ್ತೆ ಅಹಂಕಾರ ನಮ್ಮ  ಬದುಕನ್ನೆ ಸುಡುತ್ತೆ”.

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷರು








































































































error: Content is protected !!
Scroll to Top