ಮುಂಬಯಿ, ಸೆ.4: ಮರದ ಉಬ್ಬುಶಿಲ್ಪಗಳ ವಿಶಿಷ್ಟ ಕಲಾ ರಚನೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾಗಿ ತನ್ನ ಗಣೇಶ ಸರಣಿ, ಸೂರ್ಯ ಸರಣಿ ,ಅಶ್ವ ಸರಣಿ ,ಹಂಸ ಸರಣಿ ಇತ್ಯಾದಿ ರಚನೆಗಳಿಂದ ಪ್ರಖ್ಯಾತರಾದ ಮುಂಬಯಿಯ ಚಾರ್ಕೋಪ್ ನಿವಾಸಿ ದಿವಾಕರ ಶೆಟ್ಟಿ (63 ವರ್ಷ) ಅವರು ಸೆಪ್ಟೆಂಬರ್ 4 ರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಒಂದೊಮ್ಮೆ ‘ಮೆಟಲ್ ಮ್ಯಾನ್ ಆಫ್ ಇಂಡಿಯಾ’ ಎಂಬ ಬಿರುದು ಪಡೆದಿರುವ ದಿವಾಕರ ಶೆಟ್ಟಿ ಅವರು ಇತ್ತೀಚಿನ ವರ್ಷಗಳಲ್ಲಿ ಮರದ ಉಬ್ಬುಶಿಲ್ಪದ ಸಂಶೋಧನಾತ್ಮಕ ರಚನೆಗಳನ್ನು ಕೈಗೊಂಡಿದ್ದರು .
ಎಂಬತ್ತರ ದಶಕದಲ್ಲಿ ಉಡುಪಿಯಿಂದ ಮುಂಬೈಗೆ ಬಂದಿರುವ ದಿವಾಕರ ಶೆಟ್ಟಿಯವರು ಆರಂಭದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಅನಂತರ ಬ್ಯಾಂಕ್ ಹುದ್ದೆಗೆ ರಾಜೀನಾಮೆ ನೀಡಿ ಪೂರ್ಣಕಾಲಿಕ ಚಿತ್ರಕಲಾ ರಚನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇವರನ್ನು ‘ದಾರ್ಶನಿಕ ಚಿತ್ರಕಲಾವಿದ’ ಎಂದೂ ಕರೆಯುತ್ತಿದ್ದರು. 5 ವರ್ಷಗಳ ಹಿಂದೆ ಪಂಚಮಹಾಭೂತಗಳ ತತ್ವಗಳಡಿ ಕಲಾ ರಚನೆಯನ್ನು ಮಾಡಿದ್ದು, ಕಳೆದ ವರ್ಷದಿಂದ ‘ಶಿವಶಕ್ತಿ ಸರಣಿ’ ಯ ಹೊಸ ಕಲಾರಚನೆಗಳ ಮೂಲಕ ಗಮನಸೆಳೆದಿದ್ದರು. ದೇಶವಿದೇಶಗಳಲ್ಲಿ ಇವರು ತಮ್ಮ ಕಲಾ ಪ್ರದರ್ಶನಗಳನ್ನು ನಡೆಸಿ ಪ್ರಶಂಸೆ, ಪ್ರಶಸ್ತಿ ಪಡೆದಿರುವರು.
2015 ರಲ್ಲಿ ಕರ್ನಾಟಕ ಸಂಘ ಮುಂಬೈ ಇವರಿಗೆ ‘ಸಾಧನಾ ಶಿಖರ ಪ್ರಶಸ್ತಿ’ಯನ್ನು ಪ್ರದಾನಿಸಿತ್ತು.
ದಿವಾಕರ ಶೆಟ್ಟಿ ಅವರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧು-ಬಳಗ ಅಭಿಮಾನಿಗಳನ್ನು ಆಗಲಿದ್ದಾರೆ .
ಕರ್ನಾಟಕ ಸಂಘ ಮುಂಬಯಿ ಇದರ ಪದಾಧಿಕಾರಿಗಳು ದಿವಾಕರ ಶೆಟ್ಟಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
































