| ಬರಹ : ಮೋಹನದಾಸ್ ಕಿಣಿ, ಕಾಪು kini.mohandas@gmail.com ಅಸ್ಪೃಶ್ಯತೆಯೆಂಬುದು ಕೇವಲ ನಮ್ಮ ದೇಶಕ್ಕೆ ಸೀಮಿತವಾಗಿಲ್ಲ. ಒಂದರ್ಥದಲ್ಲಿ ಅದು ವಿಶ್ವವ್ಯಾಪಿ. ನಮ್ಮ ದೇಶದಲ್ಲಿ ಇರುವ ಅಸ್ಪೃಶ್ಯತೆ ಜಾತಿ ಆಧಾರಿತವಾದರೆ, ವಿಶ್ವದ ಕೆಲವು ದೇಶಗಳಲ್ಲಿ ಅದು ಜನಾಂಗೀಯ ತಾರತಮ್ಯದ ರೂಪದಲ್ಲಿದೆ. ಎರಡನೇಯದಾಗಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಿರುವ ಬಹುತೇಕ ದೇಶಗಳಲ್ಲಿ ಸಮಾನತೆ ಎಂಬುದು ಇದೆಯಾದರೂ ದೇಶದಿಂದ ದೇಶಕ್ಕೆ ಇದರ ವ್ಯಾಖ್ಯಾನ ಕೂಡಾ ಬೇರೆ ಬೇರೆ ರೀತಿಯಲ್ಲಿ ಇದೆ. ಆದರೆ ಈಗ ಇದೆರಡರ ವ್ಯಾಖ್ಯಾನವನ್ನು ಒರೆಸಿ ಗುಡಿಸಿ ವಿನೂತನ ವ್ಯಾಖ್ಯೆ ಬರೆದಿದೆ, ಈ ಕೊರೋನಾ ವೈರಾಣು ಅಥವಾ ಕೋವಿಡ್ 19 ಎಂಬ ಮಹಾಮಾರಿ! ಮುಂದೆ ಓದಿ: ●ವಿದೇಶಗಳಲ್ಲಿ ಯಾವುದೇ ಖರೀದಿಯಿರಲಿ, ಬಸ್ಸು, ರೈಲು, ವಿಮಾನ ನಿಲ್ದಾಣವಿರಲಿ, ಎಲ್ಲರೂ ಶಿಸ್ತಿನಿಂದ ಸರತಿ ಸಾಲಿನಲ್ಲಿ ಬರುತ್ತಿದ್ದರೆ ನಮ್ಮಲ್ಲಿ ಎಲ್ಲೆಡೆ ಓವರ್ ಟೇಕ್, ನೂಕು ನುಗ್ಗಲು ಮಾಡುತ್ತಿದ್ದವರು ಈಗ ಸಾಕಷ್ಟು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಎಲ್ಲಾ ಬಿಟ್ಟು ಹೆಂಡದ ಅಂಗಡಿಯಲ್ಲಿ ಕೂಡಾ ಸರದಿ ಸಾಲು ಪಾಲನೆಯಾಗುತ್ತಿರುವ ಬಗ್ಗೆ ಒಂದು ಚಿತ್ರ ಹರಿದಾಡುತ್ತಿತ್ತು.(ಲಾಕ್ ಡೌನ್ ಜಾರಿಗೆ ಮೊದಲು). ಎಷ್ಟೇ ಒತ್ತಡ ಹೇರಿದರೂ ಶಿಸ್ತು ಪಾಲಿಸದವರು ಸ್ವಯಂಪ್ರೇರಿತ ಶಿಸ್ತು ಪಾಲಿಸುವಂತಾಯಿತು. ●ಭಾರತೀಯ ಸಂಸ್ಕೃತಿಯ ಉತ್ತಮ ಪರಂಪರೆಯ ಪ್ರತೀಕವಾಗಿರುವ ನಮಸ್ಕಾರ ಅದೊಂದು ಕಾಲದಲ್ಲಿ ಎಲ್ಲೆಡೆ ಅವಹೇಳನಕ್ಕೆ ಗುರಿಯಾಗುತ್ತಿತ್ತು. ಹಸ್ತಲಾಘವದ ಬದಲು ನಮಸ್ಕರಿಸಿದವರನ್ನು ತಿರಸ್ಕಾರದ ದೃಷ್ಟಿಯಲ್ಲಿ ನೋಡುವ ಪರಿಸ್ಥಿತಿಯಿತ್ತು. ಕೆಲವು ದೇಶಗಳಲ್ಲಿ, ಧರ್ಮಗಳಲ್ಲಿ ಆಲಿಂಗನವೂ ಸಂಪ್ರದಾಯವಾಗಿತ್ತು. ಈ ಎಲ್ಲ ಅಸ್ಪೃಶ್ಯತೆಯ ಪರಿಪಾಠ ಚಿಟಿಕೆ ಹೊಡೆಯುವಷ್ಟರಲ್ಲಿ ಬದಲಾಗಿ ವಿಶ್ವದ ಗಣ್ಯಾತಿಗಣ್ಯರು ಪರಸ್ಪರ ನಮಸ್ಕಾರ ಮಾಡುವ ಪದ್ಧತಿ ಜಾರಿಗೆ ಬಂತು. ●ಬ್ಯಾಂಕುಗಳಿರಲಿ, ಯಾವುದೇ ಸಾರ್ವಜನಿಕ ಸಂಪರ್ಕಕ್ಕೆ ಬರುವ ಕಚೇರಿಗಳಿರಲಿ, ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಸೀಮಾರೇಖೆ ರಚಿತವಾಗಿದೆ. ಅಂತರವಿಲ್ಲದಿರುವ ಏಕೈಕ ಸ್ಥಳವೆಂದರೆ ಆಸ್ಪತ್ರೆ ಮಾತ್ರ. ●ಹಿಂದೆಲ್ಲಾ ತಲೆ ಉಳಿಸಿಕೊಳ್ಳಲು ಹೆಲ್ಮೆಟ್ ಧರಿಸಲು ಹೇಳಿದರೆ ಕದ್ದು ಮುಚ್ಚಿ ಓಡಾಡುತ್ತಿದ್ದವರು, ಈಗ ಪೂರ್ತಿ ಮುಖ ಮುಚ್ಚುವ ಹೆಲ್ಮೆಟ್ ಧರಿಸುತ್ತಾರೆ, ಮನೆಯಿಂದ ಹೊರಡುವಾಗ ಹಾಕಿದವರು, ಪುನಃ ಮನೆಗೆ ಬರುವವರೆಗೂ ತೆಗೆಯುವುದಿಲ್ಲ. ●ಜನರು ಉದ್ಯೋಗ ಅರಸಿ ಹಳ್ಳಿಯಿಂದ ನಗರಕ್ಕೆ, ದೇಶದಿಂದ ವಿದೇಶಕ್ಕೆ ಹೋಗುವ ಮೂಲಕ ಮನೆ, ಊರು ಹಳ್ಳಿಯ ಸಂಪರ್ಕ ತಪ್ಪಿಹೋಗಿತ್ತು. ಒಂದೇ ಏಟಿಗೆ ಎಲ್ಲರೂ ಸ್ವಗ್ರಾಮಕ್ಕೆ, ಮನೆಗೆ ವಾಪಸ್ಸು! ಊರು, ಮನೆಯೆಂದರೆ ಇದ್ದ ಅಸ್ಪೃಶ್ಯತೆ ಕಣ್ಣಿನ ರೆಪ್ಪೆ ಮಿಟುಕಿಸುವಷ್ಟರಲ್ಲಿ ತೊಲಗಿತ್ತು. ●ಯಾವ ಪ್ರಾಣಿದಯಾ ಸಂಘದಿಂದಲೂ ತಡೆಯಲು ಸಾಧ್ಯವಾಗದಿದ್ದ, ವಿವಿಧ ಧರ್ಮಗಳ ಆಚರಣೆಗಳ ಅಂಗವಾಗಿ ನಡೆಯುತ್ತಿದ್ದ ಪ್ರಾಣಿವಧೆಯನ್ನು ಒಮ್ಮೆಗೆ ನಿಲ್ಲಿಸುವುದರಲ್ಲಿ ಒಂದು ಯಕಶ್ಚಿತ್ ವೈರಾಣು ಯಶಸ್ವಿಯಾಗಿದೆ. ●ವಿವಿಧ ಧರ್ಮಗಳ ನಡುವೆ ಇದ್ದ ಅಸಮಾನತೆ ಏಕಾಏಕಿ ತೊಲಗಿದೆ. ದೇವಸ್ಥಾನಗಳ ಜಾತ್ರೆ ರದ್ದಾಗಿದೆ. ಚರ್ಚು, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಿಂತುಹೋಗಿದೆ, ಹೆಚ್ಚು ಜನ ಸೇರಬಾರದೆಂಬ ಒಂದೇ ಕಾರಣಕ್ಕೆ ಇದೆಲ್ಲಾ ಸಾಧ್ಯವಾಗಿದೆ. ●ಮೊದಲಿಗೆ ಸಾಮೂಹಿಕವಾಗಿ ಜನ ಸೇರುವುದು, ಸಂತೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು, ಪ್ರತಿಭಟನೆ ನಡೆಸುವುದು ಅತಿರೇಕಕ್ಕೆ ಹೋಗಿತ್ತು. ಸಣ್ಣಪುಟ್ಟ ಕಾರಣಕ್ಕೆಲ್ಲ ಪದೇಪದೆ ಪ್ರತಿಭಟನೆಗಳು ನಡೆಯುತ್ತಿದ್ದವು. ಈಗ ಅದೆಲ್ಲವೂ ನಿಂತಿದೆ- ಪಕ್ಷಬೇಧವಿಲ್ಲದೆ ಸಮಾನವಾಗಿ. (ಅಲ್ಲೊಂದು, ಇಲ್ಲೊಂದು ಅಪವಾದಗಳಿವೆ) ●ವೃಕ್ಷ ಪ್ರದಕ್ಷಿಣೆ,ದೇವಸ್ಥಾನದಲ್ಲಿ ಶಾಂತಿ, ಪ್ರದಕ್ಷಿಣೆ, ಚಪ್ಪಲಿ ಹೊರಗೆ ಬಿಡುವ, ಕೈಕಾಲು ತೊಳೆದು ಒಳಗೆ ಬರುವ, ಕ್ಷೌರಕ್ಕೆ ಹೋಗಿ ಬಂದಾಗ, ಶವಸಂಸ್ಕಾರಕ್ಕೆ ಹೋಗಿ ಬಂದಾಗ ಸ್ನಾನ ಮಾಡುವ ಪದ್ಧತಿಯನ್ನು ಟೀಕಿಸುತ್ತಿದ್ದವರಿಗೆ ಅಂತಹ ಆಚರಣೆಗಳೆಷ್ಟು ಮುಖ್ಯವೆಂದು ತೋರಿಸಿಕೊಟ್ಟಿದೆ. ●ದೇವಸ್ಥಾನಗಳು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ವ್ಯಾಪಾರಿ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದವು. ಬಡವನಿಗೊಂದು ಮಾನದಂಡ, ಸಿರಿವಂತನಿಗೊಂದು ಮಾನದಂಡ, ಹೆಚ್ಚು ಹಣ ನೀಡಿದರೆ ದೇವರ ದರ್ಶನಕ್ಕೆ ಪ್ರತ್ಯೇಕ ಅವಕಾಶ. ಹೀಗೆ ದೇವರನ್ನು ನಿಜವಾದ ಭಕ್ತರಿಂದ ದೂರ ಮಾಡುವ ಪ್ರವೃತ್ತಿ ಹೆಚ್ಚಾಯಿತು. ಅದಕ್ಕಾಗಿ ದೇವರು ಎಲ್ಲರನ್ನೂ ಸಮಾನವಾಗಿ ದೂರ ಇರಿಸಿದ. ಯಾರೂ ತನ್ನ ದರ್ಶನ ಪಡೆಯಲು ಬರುವುದೇ ಬೇಡ ಎಂಬಂತಹ ವಾತಾವರಣ ಸೃಷ್ಟಿಸಿದ! ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು ಎಂಬ ಗಾದೆಯಂತೆ ಸರ್ಕಾರದ ನಿರ್ಧಾರಗಳನ್ನು ಸದಾಕಾಲ ಟೀಕಿಸುವವರು ಬೇರೆ ದೇಶಗಳ ಆಡಳಿತ ವೈಖರಿ ಗಮನಿಸಬೇಕು. ಕೆಲವರಿಗೆ ಇಂತಹ ಪೆಟ್ಟಿನ ಅಗತ್ಯವಿದೆ ಎನ್ನಿಸುತ್ತದೆ. ●ರಷ್ಯಾದಲ್ಲಿ ಪ್ರತಿಯೊಬ್ಬ ಶಂಕಿತ ವ್ಯಕ್ತಿಯೂ ಕಡ್ಡಾಯವಾಗಿ ಯಾರೊಬ್ಬರ ಸಂಪರ್ಕಕ್ಕೂ ಬರದಂತೆ ಮನೆಯೊಳಗೆ ಇರಬೇಕು. ಏಕೆಂದರೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಎಚ್ಚರಿಕೆ ಹೀಗಿದೆ: “15ದಿನ ಮನೆಯ ಒಳಗಿರಿ, ಇಲ್ಲಾ ಐದು ವರ್ಷ ಜೈಲಿನ ಒಳಗಿರಿ- ಆಯ್ಕೆ ನಿಮ್ಮದು” ●ದಕ್ಷಿಣ ಕೊರಿಯಾದಲ್ಲಿ ಇಂತಹ ಕ್ರಮ ಕೈಗೊಂಡ ಕಾರಣ ಪರಿಸ್ಥಿತಿ ನಿಯಂತ್ರಣದಲ್ಲಿದೆ. ●ಇಷ್ಟೆಲ್ಲಾ ಹೇಳಿಯೂ ಮುಂಜಾಗ್ರತೆ ವಹಿಸಿ ಬಂದ್ ಮಾಡದಿದ್ದರೆ ಮುಂದೆ ಎಲ್ಲವೂ ತನ್ನಿಂತಾನೇ ಬಂದ್ ಆಗುತ್ತದೆ, ಇಟೆಲಿಯಲ್ಲಿ ಆದದ್ದು ಇದೇ. ಯಾರ ಮೇಲಿನ ದ್ವೇಷಕ್ಕೆ ಯಾರೋ ಬಲಿ? ತತ್ವ, ಸಿದ್ಧಾಂತ, ರಾಜಕೀಯ ಭಿನ್ನಮತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜ, ಆದರೆ ಇಂತಹದೊಂದು ಸಂದಿಗ್ಧ ಪರಿಸ್ಥಿತಿಯಲ್ಲೂ ಕೇವಲ ಆಡಳಿತಾರೂಢ ಸರಕಾರದ ನಿರ್ಧಾರಗಳನ್ನು ವಿರೋಧಿಸಬೇಕೆಂಬ ಕಾರಣಕ್ಕೆ ನಮ್ಮ ನೇತಾರರ, ಸ್ವಯಂಘೋಷಿತ ಬುದ್ದಿಜೀವಿಗಳ ಟೀಕೆ-ಟಿಪ್ಪಣಿಗಳು ಹೀಗಿವೆ. ●ಚಪ್ಪಾಳೆ ತಟ್ಟಿದರೆ ರೋಗ ಹೋಗುತ್ತಾ? ಮಾಜಿ ಸಚಿವರೊಬ್ಬರ ಪ್ರಶ್ನೆ, ಚಪ್ಪಾಳೆ ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೊರತು ವೈರಾಣುವಿಗಲ್ಲ ಎಂಬ ಸಾಮಾನ್ಯ ಜ್ಞಾನವಿಲ್ಲದವರ ಹೇಳಿಕೆ. ●ದೇಶವಿಡೀ ಎಪ್ರಿಲ್ 5ರಂದು ದೀಪ ಬೆಳಗಿದರೆ, ಮೊನ್ನೆ ತನಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಯಾರೊಬ್ಬರಿಗೂ ಹೊಳೆಯದ, ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಈ ರೀತಿ ಪರೋಕ್ಷವಾಗಿ ಆಚರಿಸಲಾಗಿದೆ ಎಂಬ ಬಾಲಿಶ ಹೇಳಿಕೆ ನೀಡಿದರು. ●ಸಿಎಎ ಪ್ರತಿಭಟನೆ ತಡೆಯಲು ಈ ಬಂದ್ ಆಚರಿಸಲಾಗುತ್ತಿದೆಯಂತೆ:ಇದು ಓರ್ವ ಖ್ಯಾತ ಪತ್ರಿಕಾ ಸಂಪಾದಕರ ಹೇಳಿಕೆ! ●(1)ಒಂದು ದಿನ ಕರ್ಫ್ಯೂ ಮಾಡಿದರೆ ವೈರಸ್ ಹೋಗುತ್ತಾ, ಮಾಜಿ ಸಚಿವರೊಬ್ಬರ ಹೇಳಿಕೆ: ಇಂತಹ ಕ್ರಮದ ಅವಶ್ಯಕತೆ ಮತ್ತು ಪರಿಣಾಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿದರೂ, ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಶ್ಲಾಘಿಸಿದರೂ ಇಂತಹ ಬೇಜವಾಬ್ದಾರಿ ಹೇಳಿಕೆ ಬೇಕಿತ್ತೇ? ●(2)ದೇಶವನ್ನುದ್ದೇಶಿಸಿ ಭಾಷಣ ಮಾಡಿ ಮೂರು ದಿನಗಳ ನಂತರ ಜನತಾ ಕರ್ಫ್ಯೂ ಏಕೆ? ಎರಡು ದಿನ ವೈರಾಣು ಸಂಗ್ರಹಿಸಲಿಕ್ಕಾ? ಇದು ಒಬ್ಬರ ಪ್ರಶ್ನೆ. ●(3)ಮುಂಗಡವಾಗಿ ಹೇಳಿದ ಕಾರಣ ಅವಶ್ಯಕ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದಂತಾಗಿದೆಯೆಂದೊಬ್ಬರ ಹೇಳಿಕೆ. ಹೀಗೆಲ್ಲಾ ಹೇಳುವವರಿಗೆ ದೂರದ ಊರಿನಲ್ಲಿ ಇರುವವರು ಮನೆಗೆ ಹಿಂದಿರುಗಲು, ಆಹಾರ ಪದಾರ್ಥ ಸಂಗ್ರಹ ಮುಂತಾದ ಅಗತ್ಯ ವ್ಯವಸ್ಥೆ ಮಾಡಬೇಕೆಂಬ ಕನಿಷ್ಟ ಪ್ರಜ್ಞೆಯಿಲ್ಲ? ●ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಲ್ಲಿನ ಶಾಲೆಗಳಲ್ಲಿ ಮದ್ಯಾಹ್ನ ಊಟದ ಸಾಮಗ್ರಿಗಳನ್ನು ವಿತರಿಸಲು 22ರ ದಿನಾಂಕವನ್ನೇ ಆಯ್ಕೆ ಮಾಡಿದ್ದರು. ಎಪ್ರಿಲ್ 5ರಂದು ರಾತ್ರಿ 9ಗಂಟೆಗೆ ತನಗೆ ನಿದ್ದೆ ಬರುತ್ತದೆಯೆಂದರು. ●ವಿದೇಶದಿಂದ ಬಂದ ಓರ್ವ ತನಗೆ ವೈದ್ಯಕೀಯ ವಿವರದ ಪತ್ರ ಮಾತ್ರ ಭರ್ತಿ ಮಾಡಿಸಿದರು, ಯಾವ ಪರೀಕ್ಷೆ ಮಾಡಿಲ್ಲ ಎಂದು ಜಾಲತಾಣದಲ್ಲಿ ಬರೆದರು, ಒಂದು-ಘೋಷಣಾಪತ್ರದಲ್ಲಿ ಶಂಕೆ ಇದ್ದರೆ ಬರೆಯಬೇಕಿತ್ತು, ಏಕೆ ಬರೆಯಲಿಲ್ಲವೆಂದರೆ ಅಂಥವರನ್ನು ಪ್ರತ್ಯೇಕಿಸಿಡಬಹುದೆಂಬ ಭಯಕ್ಕೆ ಹೇಳಿಲ್ಲ, ತಪ್ಪು ಯಾರದು? ವಿಮಾನ ನಿಲ್ದಾಣದ ಅಧಿಕಾರಿಗಳು ಸಿಸಿ ಕೆಮರಾ ವಿವರ ನೀಡಿ ಪರಿಶೀಲನೆ ನಡೆಸಿದ ಬಗ್ಗೆ ಸಾಕ್ಷಿ ಒದಗಿಸಿದ ಮೇಲೆ ಬಾಯಿ ಮುಚ್ಚಿದರು. ●ಕ್ರೀಡಾ ಪಟು ಮೇರಿ ಕೋಮ್, ಖ್ಯಾತ ಗಾಯಕಿ ಕನಿಕಾ ಕಪೂರ್ ಊರೆಲ್ಲಾ ತಿರುಗಾಡಿದ್ದಲ್ಲದೆ, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗರಿಷ್ಠ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಷ್ಟೆಲ್ಲದರ ನಡುವೆಯೂ ವಿಡಂಬನೆಗೆ ಬರವಿಲ್ಲ ಬಿಡಿ: ಜಗದಗಲ ಕೋಲಾಹಲವೆಬ್ಬಿಸುತ್ತಿರುವ ವೈರಾಣುವಿನ ಪ್ರತಾಪದ ನಡುವೆಯೂ ಮನುಜನ ಹಾಸ್ಯಪ್ರಜ್ಞೆಗೆ ಬರವಿಲ್ಲವೆಂಬುದಕ್ಕೆ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ಸಂದೇಶಗಳು ಹೀಗಿವೆ ನೋಡಿ: ★ಮುಖ ಮುಚ್ಕೊಂಡು ಹೊರಗೆ ತಿರುಗೋ ಬದಲು ತಿಕ ಮುಚ್ಕೊಂಡು ಒಳಗಿರಿ. ★ಸಿಕ್ಕಿದ್ದೆಲ್ಲಾ ಮುಕ್ಕಿದ್ದು ಚೀನದವರು, ಜಗತ್ತೆಲ್ಲಾ ಕೈ ತಿಕ್ಕಿಕೊಳ್ಳುವಂತಾಗಿದೆ. ★ಏನು ಬೇಕಾದರೂ ಮುಚ್ಚಿ, ಮದ್ಯದಂಗಡಿ ಮುಚ್ಚಬೇಡಿ, ಹೀಗೊಂದು ವೀಡಿಯೊ ಹರಿದಾಡುತ್ತಿದೆ. ★ವೈರಾಣು ನಕ್ಕು ವಿಶ್ವದ ದೊಡ್ಡ ರಾಷ್ಟ್ರಗಳಿಗೆ ಕೇಳಿತಂತೆ, ಎಲ್ಲಿದೆ ನಿಮ್ಮ ಮಿಸೈಲ್, ಫೈಟರ್ ಜೆಟ್? ಯಾರಲ್ಲಿಯೂ ಉತ್ತರವಿಲ್ಲ. ★ಇದುವರೆಗೆ ಪ್ರಾಣಿಗಳು ಒಳಗಿದ್ದು ಮನುಷ್ಯ ಒಳಗಿದ್ದ, ಈಗ ಪ್ರಾಣಿಗಳು ಹೊರಗೆ, ಮನುಷ್ಯ ಒಳಗೆ! ಒಂದಂತೂ ಸತ್ಯ:ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಕಣ್ಣಿಗೆ ಕಾರಣದ ವೈರಾಣು ಇಷ್ಟೊಂದು ರುದ್ರ ತಾಂಡವವಾಡಲು ಸಾಧ್ಯವೆಂದಾದರೆ, ಅದೇ ರೀತಿ ಕಣ್ಣಿಗೆ ಕಾಣದ ದೇವರು ನಮ್ಮನ್ನು ಕಾಯುತ್ತಾನೆ ಎಂಬ ನಂಬಿಕೆಯೂ ಸತ್ಯವಷ್ಟೇ? ಇದಕ್ಕೂ ಜಾತಿ, ಧರ್ಮ, ದೇಶಗಳ ಪರಿಧಿಯಿಲ್ಲ, ಕಾಯಬೇಕು ಅಷ್ಟೇ. ಒಟ್ಟಿನಲ್ಲಿ ಮನುಜನೊಂದಿಗೆ ಹಗ್ಗ ಜಗ್ಗಾಟವಾಡುತ್ತಿದ್ದ ಪ್ರಕೃತಿ ಸ್ವಲ್ಪ ಸಡಿಲ ಬಿಟ್ಟಿದೆ, ಅಷ್ಟಕ್ಕೇ ಇಡೀ ವಿಶ್ವವೇ ತತ್ತರಿಸಿ, ಮುಗ್ಗರಿಸಿ, ಒದ್ದಾಡುತ್ತಿದೆ. ಇನ್ನಾದರೂ ಅರ್ಥ ಮಾಡಿಕೊಂಡು ಪ್ರಕೃತಿಯೊಂದಿಗೆ ಆಟವನ್ನು ನಿಲ್ಲಿಸಿದರೆ ಒಳಿತು ಎಂಬ ಸಂದೇಶ ಇಲ್ಲಿದೆ. ಕೊನೆಯದಾಗಿ: ಇದೇನಿದ್ದರೂ ಸಧ್ಯದಲ್ಲಿ ಮುಗಿಯದ ಕಥೆ. ಕಿರುತೆರೆಯ ಧಾರಾವಾಹಿಗಳಂತೆ,ಆದಿ-ಅಂತ್ಯ ಯಾವುದೂ ಯಾರಿಗೂ ಗೊತ್ತಿಲ್ಲ! |








































































