ಮುಂಬಯಿ, ಆ. 18: ವಿವೊ ನಿರ್ಗಮನದಿಂದ ತೆರವಾಗಿದ್ದ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾರತೀಯ ಮೂಲದ್ದೇ ಆದ ಡ್ರೀಮ್ 11 ಎಂಬ ಕಂಪೆನಿಯ ತೆಕ್ಕೆಗೆ ಬಿದ್ದಿದೆ ಪ್ರಾಯೋಜಕತ್ವದ ಅವಕಾಶ.
ಡ್ರೀಮ್ 11 ಕ್ರೀಡಾಕ್ಷೇತ್ರದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಕಂಪನಿ. ಕ್ರಿಕೆಟ್, ಕಬಡ್ಡಿ, ಫುಟ್ಭಾಲ್ ಮತ್ತು ಬಾಸ್ಕಟ್ ಬಾಲ್ ಆಟಗಳನ್ನು ಪ್ರೋತ್ಸಾಹಿಸುತ್ತಿದೆ. ಎಂ.ಎಸ್.ಧೋನಿ ಬ್ರಾಂಟ್ ಅಂಬಾಸಡರ್ ಆಗಿರುವ ಈ ಕಂಪನಿಯ ಪ್ರಧಾನ ಕಚೇರಿ ಮುಂಬಯಿಯಲ್ಲಿದೆ.
ಡ್ರೀಮ್ 11 ಈ ಬಾರಿ ರೂ.222 ಕೋಟಿ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ 2020ಐಪಿಎಲ್ ಟೂರ್ನಮೆಂಟ್ ನ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿದೆ.
ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2020ಕ್ಕೆ ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವ ಮಾಡಲಿದೆ. ಚೀನಾದ ಫೋನ್ ತಯಾರಕ ವಿವೊ ಅನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಟಾಟಾ ಗ್ರೂಪ್ ಮತ್ತು ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಅನಾಕಾಡೆಮಿ ಸಹ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಕಣದಲ್ಲಿದ್ದವು, ಆದರೆ ಡ್ರೀಮ್ 11 ಅವುಗಳನ್ನು ಮೀರಿಸಿದೆ.
ಈ ವರ್ಷ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಐಪಿಎಲ್ ನಡೆಯಲಿದೆ. ವಾರ್ಷಿಕವಾಗಿ ರೂ. 440 ಕೋಟಿ ಪಾವತಿಸುವ ವಿವೊ, ಚೀನಾ-ಭಾರತದ ಗಡಿ ಉದ್ವಿಗ್ನತೆಯಿಂದಾಗಿ ಈ ವರ್ಷ ಶೀರ್ಷಿಕೆ ಪ್ರಾಯೋಜಕತ್ವದಿಂದ ಹೊರಗುಳಿದಿದೆ.