
-ಇಂದು ನೇತಾಜಿ ಪುಣ್ಯತಿಥಿ
ಇಂದು ಆ.18 ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಪುಣ್ಯತಿಥಿ. 75 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಅವರು ನಿಧನರಾದರು ಎಂದು ಬಿಬಿಸಿ ಪ್ರಕಟಿಸಿದಾಗ ಭಾರತಕ್ಕೆ ನಂಬಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರಷ್ಟೇ ಪ್ರಭಾವ ಹೊಂದಿದ್ದ ಮತ್ತು ಯೂತ್ ಐಕಾನ್ ಆಗಿದ್ದ ಸುಭಾಶ್ ಚಂದ್ರ ಬೋಸರು ನನಗೆ ನಿಮ್ಮ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಬಡಿದೆಬ್ಬಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸ್ಥಾಪನೆ ಮಾಡಿದ ಆಜಾದ್ ಹಿಂದ್ ಸೇನೆಯ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಶಸ್ತ್ರ ಕ್ರಾಂತಿಯ ಮೂಲಕ ಸ್ವಾತಂತ್ರ್ಯವನ್ನು ಪಡೆಯುವುದು ಅವರ ಉದ್ದೇಶವಾಗಿತ್ತು.
ಅವರ ಜನ್ಮ ಶತಮಾನದ ವರ್ಷ 1997, ಜ.23ರಂದು ಕಾರ್ಕಳ ತಾಲೂಕಿನ ಮುದ್ರಾಡಿಯ ಕೇಂದ್ರ ಸ್ಥಾನದಲ್ಲಿ ಒಂದು ವೃತ್ತ ಸ್ಥಾಪನೆ ಮಾಡಿ ಸುಭಾಶ್ ಚಂದ್ರ ಬೋಸರ ಆಳೆತ್ತರದ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಅಖಿಲ ಭಾರತೀಯ ನೇತಾಜಿ ಸುಭಾಶ್ ಕ್ರಾಂತಿಕಾರಿ ಸಂಘ, ಮುಂಬಯಿ ಇದನ್ನು ಸ್ಥಾಪಿಸಿದ್ದರು. ಅದರ ಪ್ರಧಾನ ಕಾರ್ಯದರ್ಶಿಯಾದ ಮುದ್ರಾಡಿ ಸಿರಿಬೀಡು ದಿವಾಕರ ಎನ್.ಶೆಟ್ಟಿಯವರು ಈ ಕಾರ್ಯದ ನೇತೃತ್ವ ವಹಿಸಿದ್ದರು ಮತ್ತು ಮುಂಬಯಿಯ ಹಿರಿಯ ಪೊಲೀಸ್ ಅಧಿಕಾರಿಗಳು , ಅತಿ ಪ್ರಾಮುಖ್ಯ ವ್ಯಕ್ತಿಗಳು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುಭಾಶ್ ಚಂದ್ರ ಬೋಸರನ್ನು ಸ್ಮರಿಸಿದ್ದರು. ಇಡೀ ಕರಾವಳಿ ಕರ್ನಾಟಕದಲ್ಲಿ ಅಪರೂಪದ್ದಾದ ಮತ್ತು ರಾಷ್ಟ್ರಭಕ್ತಿಗೆ ಪ್ರೇರಣೆ ಕೊಡುವ ಈ ಪ್ರತಿಮೆಯ ಸ್ಥಾಪನೆಗೆ ಕಾರಣರಾದ ಎಲ್ಲರನ್ನು ಅಭಿನಂದಿಸುತ್ತೇವೆ ಮತ್ತು ಸುಭಾಶ್ ಚಂದ್ರ ಬೋಸರಿಗೆ ನಮ್ಮ ಶ್ರದ್ಧಾಂಜಲಿ ಸಮರ್ಪಿಸುತ್ತೇವೆ.