ಪ್ರತಿ ಭಾರತೀಯನ ಮನಸ್ಸಿನಲ್ಲಿ ಮೊಳಗುತ್ತಿದೆ ಆತ್ಮ ನಿರ್ಭರ್‌ ಮಂತ್ರ : ಮೋದಿ

ದಿಲ್ಲಿ, ಆ. 15: ಪ್ರತಿ ಭಾರತೀಯನ ಮನಸ್ಸಿನಲ್ಲಿ   ಆತ್ಮನಿರ್ಭರ ಭಾರತ ಪರಿಕಲ್ಪನೆ ಇದೆ.  ಇದೊಂದು ಕನಸಾಗಿದ್ದು, ಈ ಕನಸು ಈಗ ಪ್ರತಿಜ್ಞೆಯಾಗಿ ಬದಲಾಗುತ್ತಿದೆ. 130 ಕೋಟಿ ಭಾರತೀಯರ ಮನಸ್ಸಿನಲ್ಲಿ ಆತ್ಮನಿರ್ಭರ್ ಭಾರತ ದಿವ್ಯ ಮಂತ್ರವಾಗಿ ಮೊಳಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ, ಇಂದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ನೆನೆಯುವ ದಿನ. ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ನಿಂತಿರುವ ಸೈನಿಕರು ಹಾಗೂ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಪೊಲೀಸರು ಸೇರಿಂದತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ ಇದಾಗಿದೆ. ಈ ದಿನವನ್ನು ಅವರಿಗೆ ಸಮರ್ಪಿಸಬೇಕು ಎಂದು ಹೇಳಿದರು.

ಆತ್ಮ ನಿರ್ಭರ ಭಾರತ ಒಂದು  ಸಂಕಲ್ಪವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.  130 ಕೋಟಿ ಜನರಿಗೆ ಆತ್ಮನಿರ್ಭರ ಭಾರತ ದಿವ್ಯ ಮಂತ್ರವಾಗಿ ಮಾರ್ಪಟ್ಟಿದೆ. ಕೃಷಿ ಕ್ಷೇತ್ರದಲ್ಲಿ ನಾವು ‘ಆತ್ಮ ನಿರ್ಭರ’ರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ. ‘ಆತ್ಮ ನಿರ್ಭರ ಭಾರತ’ ಕನಸನ್ನು ಭಾರತ ಸಾಕಾರಗೊಳಿಸುತ್ತದೆ. ಭಾರತೀಯರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ.

ವಿಶ್ವ ಕಲ್ಯಾಣದಲ್ಲಿ ಭಾರತದ ಕರ್ತವ್ಯವಿದೆ. ಭಾರತ ಸಶಕ್ತವಾಗಬೇಕಿದೆ, ಆತ್ಮ ನಿರ್ಭರವಾಗಬೇಕಿದೆ. ನಮಗೆ ನಮ್ಮ ಸ್ವಂತ  ಸಾಮರ್ಥ್ಯವಿದ್ದರೆ ಇಡೀ ವಿಶ್ವದ ಅಭಿವೃದ್ಧಿಯಾಗಲಿದೆ. ಮಾನವ ಸಂಪದದಲ್ಲಿ ಮೌಲ್ಯವೃದ್ಧಿ ಮಾಡೋಣ. ಕಚ್ಚಾ ವಸ್ತುಗಳನ್ನು ವಿದೇಶಕ್ಕೆ ಕಳುಹಿಸುವುದು, ರೆಡಿ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಎಷ್ಟು ದಿನ ನಡೆಯುತ್ತದೆ. ಆತ್ಮ ನಿರ್ಭರವಾಗಲೇಬೇಕು ಎಂದು ಮೋದಿ ಭವಿಷ್ಯದ ಮಾರ್ಗಸೂಚಿಯನ್ನು ಬಿಚ್ಚಿಟ್ಟರು.

ಕೃಷಿ ಕ್ಷೇತ್ರದಲ್ಲಿ ಆತ್ಮ ನಿರ್ಭರ ಮಾಡಿದ್ದಾರೆ, ಬೇರೆ ದೇಶಗಳಿಗೂ ಊಟ ನೀಡಲು ನಮ್ಮ ರೈತರು ತಯಾರಿದ್ದಾರೆ. ಕೃಷಿ ಕ್ಷೇತ್ರವನ್ನು ಕಾನೂನಿನಿಂದ ಮುಕ್ತಗೊಳಿಸಿದ್ದೇವೆ. ಕೇವಲ ಆಮದು ಕಡಿಮೆ ಮಾಡುವುದು ಮಾತ್ರ ಆತ್ಮ ನಿರ್ಭರವಲ್ಲ, ನಮ್ಮ ದೇಶೀಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದು, ಕೌಶಲವನ್ನು ಹೆಚ್ಚಿಸುವುದು ಕೂಡ ಮುಖ್ಯವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲವು ವಸ್ತುಗಳ ಅವಶ್ಯಕತೆ ಇತ್ತು, ವಿಶ್ವದಿಂದ ತರಿಸಿಕೊಳ್ಳುವ ಅಗತ್ಯವಿತ್ತು. ಆದರೆ ಸಿಗುತ್ತಿರಲಿಲ್ಲ. ಆದರೆ ಉದ್ಯಮಿಗಳು ಮನಸ್ಸು ಮಾಡಿ ಎನ್‌ 95 ಮಾಸ್ಕ್ ತಯಾರಿಕೆಯಿಂದ ಹಿಡಿದು ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಬೇರೆ ದೇಶಗಳಿಗೆ ರಫ್ತನ್ನು ಕೂಡ ಮಾಡಿದ್ದೇವೆ. ವೋಕಲ್ ಫಾರ್ ಲೋಕಲ್ ಎನ್ನುವುದು ದೇಶದ ಮಂತ್ರವಾಗಿರಬೇಕು ಎಂದು ಹೇಳಿದ್ದಾರೆ.

ಸಾವಿರ ದಿನಗಳಲ್ಲಿ ಲಕ್ಷದ್ವೀಪಕ್ಕೆ ಆಪ್ಟಿಕಲ್‌  ಫೈಬರ್‌

ಮುಂದಿನ 1000 ದಿನಗಳಲ್ಲಿ ಲಕ್ಷದ್ವೀಪವನ್ನು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್‌ ಮೂಲಕ  ಸಂಪರ್ಕಿಸಲಾಗುವುದು ಎಂದು ಇದೇ ವೇಳೆ  ಮೋದಿಯವರು ಹೇಳಿದ್ದಾರೆ.

ದೇಶದಲ್ಲಿ 1300ಕ್ಕೂ ಹೆಚ್ಚು ದ್ವೀಪಗಳಿದ್ದು, ಅವುಗಳ  ಭೌಗೋಳಿಕ ಪ್ರಾಮುಖ್ಯತೆ  ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಅವುಗಳ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕೆಲವು ದ್ವೀಪಗಳಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಕೆಲಸ ನಡೆಸಲಾಗುತ್ತಿದೆ. ಮುಂದಿನ 1000 ದಿನಗಳಲ್ಲಿ ಲಕ್ಷದ್ವೀಪವನ್ನು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್‌ ಮೂಲಕ  ಸಂಪರ್ಕಿಸಲಾಗುವುದು ಎಂದು ಹೇಳಿದ್ದಾರೆ.

 









































































































error: Content is protected !!
Scroll to Top