ಕರಾವಳಿ ಕರ್ನಾಟಕದ ಸ್ವಾತಂತ್ರ್ಯದ ಕಿಡಿ ಕಾರ್ಕಳದ ಎಂ.ಡಿ. ಅಧಿಕಾರಿ.

2

ಎಲ್ಲಾ ಓದುಗರಿಗೂ ನ್ಯೂಸ್‌ ಕಾರ್ಕಳದ ವತಿಯಿಂದ ಭಾರತ ಸ್ವಾತಂತ್ರ್ಯ ಉತ್ಸವದ ಹಾರ್ದಿಕ ಶುಭಾಶಯಗಳು.

ಇಡೀ ಭಾರತ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಶಿಖರವನ್ನು ಮುಟ್ಟಿದ್ದ ಸಂದರ್ಭದಲ್ಲಿ ಕರಾವಳಿ ಕರ್ನಾಟಕವು ಕೂಡ ಮುಂಚೂಣಿಯ ಪಾತ್ರವನ್ನೇ ವಹಿಸಿತ್ತು. ಅದರಲ್ಲಿ ಕೂಡ ಕಾರ್ಕಳದಲ್ಲಿ ಜನಿಸಿದ ಓರ್ವ ಮಹಾನ್ ರಾಷ್ಟ್ರೀಯವಾದಿ ನಾಯಕ ನಿರ್ಣಾಯಕವಾದ ಪಾತ್ರವನ್ನು ವಹಿಸಿದ್ದು, ಪ್ರತಿಫಲದ ಅಪೇಕ್ಷೆ ಇಲ್ಲದೆ ಸ್ವಾತಂತ್ರ್ಯದ ಕ್ರಾಂತಿ ಪುರುಷನಾದದ್ದು ಸದಾ ಸ್ಮರಣೀಯ. ಇದನ್ನೆಲ್ಲ ಮರೆಯುವುದು ಹೇಗೆ? ಅವರೇ ನಮ್ಮ ಇಂದಿನ ಐಕಾನ್ ಮುದ್ರಾಡಿ ಧರ್ಮರಾಜ ಅಧಿಕಾರಿ.
1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭ, ಇಡೀ ಭಾರತದಲ್ಲಿ ಮಹಾತ್ಮ ಗಾಂಧಿ ಅವರ ಕರೆಯಂತೆ ಪ್ರತಿಭಟನಾ ಸಭೆಗಳು ನಡೆಯುತ್ತಿದ್ದವು. ಆಗ ಮಂಗಳೂರು ಜಿಲ್ಲೆಯ ಕೇಂದ್ರ ಮೈದಾನದಲ್ಲಿ ಹತ್ತು
ಸಾವಿರಕ್ಕಿಂತ ಅಧಿಕ ಸಂಖ್ಯೆಯ ಕಾಂಗ್ರೆಸ್ಸಿನ ಕಾರ್ಯಕರ್ತರು ಸೇರಿದ್ದರು. ಸಮುದ್ರದ ಘೋಷದಂತೆ ‘ವಂದೇ ಮಾತರಂ’ ಘೋಷಣೆಯು ಮುಗಿಲು ಮುಟ್ಟಿತ್ತು. ಒಬ್ಬ 27 ವರ್ಷದ ಬಿಸಿರಕ್ತದ ತರುಣ ವೇದಿಕೆಯಲ್ಲಿ ಗುಂಡು ಸಿಡಿದಂತೆ ಭಾಷಣ ಮಾಡುತ್ತಿದ್ದ. ಆತನ ದೇಹದಲ್ಲಿ ಆವೇಶವೆ ಬಂದ ಹಾಗಿತ್ತು. ಅಷ್ಟು ಹೊತ್ತಿಗೆ ಲಾಠಿ ಬೀಸುತ್ತ ಪೊಲೀಸರು ಮೈದಾನಕ್ಕೆ ನುಗ್ಗಿದ್ದರು.
ಸೇರಿದ ಜನರಲ್ಲಿ ಕೆಲವರು ಕಾಲಿಗೆ ಬುದ್ದಿ ಹೇಳಿದರು. ಕೆಲವರು ಮಾತ್ರ ಎದೆ ಕೊಟ್ಟು ನಿಂತರು. ಆ ತರುಣ ಅದೇ ಆವೇಶದಲ್ಲಿ ಮಾತನ್ನು ಮುಂದುವರೆಸಿದ್ದ. ವೇದಿಕೆ ಏರಿದ ಪೊಲೀಸರು ಆ ತರುಣನ ಮೇಲೆ ಲಾಠಿ ಬೀಸಿದರು. ತಲೆಗೆ ಪೆಟ್ಟು ತಾಗಿ ರಕ್ತ ಝಿಲ್ ಎಂದು ಚಿಮ್ಮಿತು. ಕೆಳಗೆ ಬಿದ್ದ ತರುಣ ‘ವಂದೇ ಮಾತರಂ’ ಘೋಷಣೆ ನಿಲ್ಲಿಸಲಿಲ್ಲ. ಪೊಲೀಸರು ಅವನನ್ನು ಬಲವಾಗಿ ಹೊಡೆಯಲು ಶುರು ಮಾಡಿದರು. ಆತ ಪ್ರಜ್ಞೆ ತಪ್ಪಿದ. ಯಾರೋ ಕೆಲವರು ಆತನನ್ನು ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದರು. 24 ಘಂಟೆಯ ನಂತರ ಪ್ರಜ್ಞೆ ಮರಳಿತು. ಅಲ್ಲೇ ಕಾಯುತ್ತಿದ್ದ ಪೊಲೀಸರು ಆತನನ್ನು ಎಳೆದುಕೊಂಡು ಹೋಗಿ ಸೆರೆಮನೆಗೆ ತಳ್ಳಿದರು. ಆ ತರುಣನೆ ಎಂ.ಡಿ. ಅಧಿಕಾರಿ.
ಅವರು ಕಾರ್ಕಳ ತಾಲೂಕಿನ ವರಂಗದ ಪ್ರಸಿದ್ದ ಜೈನ ಕೃಷಿಕ ಕುಟುಂಬದಿಂದ ಬಂದವರು. ಅವರ ಹಿರಿಯರು ವರಂಗದ ಬಸದಿಯನ್ನು ಅಭಿವೃದ್ದಿ ಪಡಿಸಿದವರು. ಮಹಾ ಧರ್ಮ ನಿಷ್ಟರು. ಈ ಹುಡುಗನಿಗೆ ಬಾಲ್ಯದಿಂದಲೂ ತೀವ್ರವಾದ ರಾಷ್ಟ್ರ ಚಿಂತನೆ. ಗಾಂಧಿಯವರ ದಟ್ಟವಾದ ಪ್ರಭಾವ ಆಗಿತ್ತು.
1937ರಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಪ್ರಾಂತೀಯ ಅಸೆಂಬ್ಲಿ ಚುನಾವಣೆ ನಡೆದವು. ಆಗ ತರುಣ ಅಧಿಕಾರಿಯವರು ಕಾಂಗ್ರೆಸ್ ಕಾರ್ಯಕರ್ತನಾಗಿ ಪ್ರಚಾರಕ್ಕೆ ಇಳಿದರು. 1938ರ ಹೊತ್ತಿಗೆ ಕಾರ್ಕಳ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. 1940ರಲ್ಲಿ ( ಅವಿಭಜಿತ) ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಏರಿದರು. 1942ರಲ್ಲಿ ಅಂದಿನ ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ ಮಲ್ಯ ಅವರು ಸೆರೆಮನೆಗೆ ಹೋದಾಗ ಅಧಿಕಾರಿಯವರು ಜಿಲ್ಲಾಧ್ಯಕ್ಷರ ಹುದ್ದೆ ಸ್ವೀಕರಿಸಿ ಹೋರಾಟಕ್ಕೆ ಇಳಿದರು. ಗ್ರಾಮ ಗ್ರಾಮಗಳಲ್ಲಿ ಹೋಗಿ ಯುವಕರ ಸಂಘಟನೆ ಮಾಡಿದರು. ಪ್ರಖರವಾದ ಭಾಷಣಗಳನ್ನು ಮಾಡಿದರು. ಮಂಗಳೂರಿನ ಕ್ವಿಟ್ ಇಂಡಿಯಾ ಚಳುವಳಿಯ ನೇತೃತ್ವವನ್ನು ವಹಿಸಿದರು. ಒಮ್ಮೆ ಆರು ತಿಂಗಳು, ಮತ್ತೊಮ್ಮೆ ಎಂಟು ತಿಂಗಳು, ಮಗದೊಮ್ಮೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಿದರು. ಬಳ್ಳಾರಿಯ ಆಲಿಪುರಂ ಸೆರೆಯಲ್ಲಿ ಅವರನ್ನು ಬಂಧಿಸಿ ಇಡಲಾಯಿತು.
ಸೆರೆಮನೆಯಲ್ಲಿ ಕುಳಿತು ಅವರು ಸ್ವಾಮಿ ವಿವೇಕಾನಂದರ ಬೋಧನೆಯ ಪುಸ್ತಕಗಳನ್ನು ಓದಲು ಆರಂಭ ಮಾಡಿದರು. ಕೆ.ಕೆ. ಶೆಟ್ಟಿ, ಹೆಚ್. ಕೆ. ತಿಂಗಳಾಯ, ಶ್ರೀನಿವಾಸ ಮಲ್ಯ ಅವರ ಒಡನಾಟ ಜೈಲಲ್ಲಿ ಕೂಡ ಅವರ ಒಳಗಿನ ಕ್ರಾಂತಿಯ ಕಿಚ್ಚನ್ನು ಜೀವಂತವಾಗಿರಿಸಿತು.

ಇಂತಹ ಸಂಕೀರ್ಣವಾದ ಸಂದರ್ಭದಲ್ಲಿ ಕೂಡ ಅವರ ಧರ್ಮಪತ್ನಿ ಕಮಲಾವತಿ ಅಧಿಕಾರಿಯವರು ಧೈರ್ಯವನ್ನು ಬಿಡಲಿಲ್ಲ. ಕಣ್ಣೀರು ಸುರಿಸುತ್ತ ಮನೆಯ ಮೂಲೆಯಲ್ಲಿ ಕೂರಲಿಲ್ಲ. ಮನೆಯ ಮತ್ತು ಕೃಷಿಯ ಸಮಗ್ರ ಹೊಣೆಯನ್ನು ಹೊತ್ತುಕೊಂಡು ಗಂಡನಿಗೆ ಧೈರ್ಯ ತುಂಬಿದರು. ಕೋರ್ಟಿನ ಖರ್ಚಿಗೆ ಹಣ ಹೊಂದಿಸಲು ತಮ್ಮ ಚಿನ್ನದ ತಾಳಿಯನ್ನು ಅಡವಿಟ್ಟು, ಅರಶಿನ ದಾರದಲ್ಲಿ ತಾಳಿಯನ್ನು ಕಟ್ಟಿಕೊಂಡರು. ಕೃಷಿಯನ್ನು ಯಾವ ವರ್ಷವೂ ನಿಲ್ಲಿಸಲಿಲ್ಲ. ಒಕ್ಕಲಿನ ಜನರನ್ನು ಚೆನ್ನಾಗಿ ನೋಡಿಕೊಂಡರು.
ಮುಂದೆ ಸ್ವಾತಂತ್ರ್ಯವು ದೊರೆತಾಗ ಅಧಿಕಾರಿಯವರು ಸಂಭ್ರಮ ಪಟ್ಟರು. ಆದರೆ ಯಾವುದೇ ಹುದ್ದೆಯನ್ನು ಕೇಳಿಕೊಂಡು ಹೋಗಲಿಲ್ಲ. ಮನಸ್ಸು ಮಾಡಿದ್ದರೆ ಅವರು ಯಾವ ಹುದ್ದೆಗೂ ತಲುಪಲು ಅವಕಾಶ ಇತ್ತು. ಆದರೆ ಅವರು ಕೃಷಿಕರಾಗಿ ಉಳಿದು ಬಿಟ್ಟರು. ಮಂಗಳೂರಿನಲ್ಲಿ ಮಹಾತ್ಮ ಗಾಂಧೀ ಮತ್ತು ಕಸ್ತೂರ್ಬಾ ಅವರ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸಲು ಶ್ರಮ ವಹಿಸಿದರು. ಭಾರತ ಸರಕಾರವು ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನವನ್ನು ನಿರಾಕರಿಸಿದರು! ತಮ್ಮ ಹೆಂಡತಿಯೂ ಪಡೆಯಬಾರದು ಎಂದು ಅಪ್ಪಣೆ ಕೊಡಿಸಿದರು. ಮುಂದೆ ಭೂಮಸೂದೆಯ ಕಾನೂನು ಜಾರಿಗೆ ಬಂದಾಗಲೂ ಧನಿ, ಒಕ್ಕಲು ಸಂಬಂಧವನ್ನು ಬಹಳ ಚೆನ್ನಾಗಿ ಪೋಷಣೆ ಮಾಡಿಕೊಂಡು ಬಂದರು. ರೈತರ ಪ್ರೀತಿ ಗೆದ್ದರು.
1953ರಲ್ಲೀ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿ ಜನಸಂಘವನ್ನು ಸೇರಿದರು. ಮುಂದೆ 1968ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತರು. ಅದೇ ರೀತಿ ಪಕ್ಷೇತರರಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರು. ಎರಡೂ ಬಾರಿ ಸೋತರು. ಆದರೆ ಜನರ ಪ್ರೀತಿಯನ್ನು ಕೊನೆಯ ಉಸಿರಿನವರೆಗೂ ಅವರು ಕಳೆದುಕೊಳ್ಳಲಿಲ್ಲ. ಚುನಾವಣೆಗೆ ನಿಂತಾಗ ಕಾರಿಗೆ ಪೆಟ್ರೋಲ್ ಹಾಕಲು ದುಡ್ಡಿಲ್ಲದೆ ಕಷ್ಟಪಟ್ಟಾಗ ಮತ್ತೆ ಅವರ ಮಡದಿ ಕಮಲಮ್ಮ ತುರ್ತು ಸಂದರ್ಭಕ್ಕೆ ತೆಗೆದಿಟ್ಟಿದ್ದ ಮೂವತ್ತು ಕ್ವಿಂಟಾಲ್ ಅಕ್ಕಿಯನ್ನು ಮಾರಿ ಹಣಕೊಟ್ಟದ್ದು ಕೂಡ ಇಲ್ಲಿ ಉಲ್ಲೇಖನೀಯ. ಅವರ ಆದರ್ಶ ದಾಂಪತ್ಯ ನಿಜವಾಗಿ ಅನುಕರಣೀಯ ಆಗಿದೆ.
ಮುಂದೆ ಅಧಿಕಾರಿಯವರು ವರಂಗ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಕೆಲಸ ಮಾಡಿದರು. ಕಾರ್ಕಳದ ಸಹಕಾರಿ ರಂಗದ ನೇತೃತ್ವ ವಹಿಸಿದರು. ಶ್ರವಣ ಬೆಳಗೊಳದ ಜೈನ ಮುನಿಯಾದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಪ್ತರಾಗಿ ಪಟ್ಟಾಭಿಷೇಕದ ಪ್ರಮುಖ ಹೊಣೆಯನ್ನು ಹೊತ್ತರು.
ಕರಾವಳಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಅಧಿಕಾರಿಯವರು 1975ರ ಮಕರ ಸಂಕ್ರಾಂತಿಯ ದಿನ ಇಹಲೋಕ ತ್ಯಜಿಸಿದರು. ಅವರ ಸ್ವಾರ್ಥರಹಿತ ಹೋರಾಟವನ್ನು ಭಾರತವು ಎಂದಿಗೂ ಮರೆಯುವುದಿಲ್ಲ.

ರಾಜೇಂದ್ರ ಭಟ್ ಕೆ.---
Previous articleಉಡುಪಿ : ಕೊರೊನಾ ಅಪ್‌ಡೇಟ್‌ 15-08-2020
Next articleಪ್ರತಿ ಭಾರತೀಯನ ಮನಸ್ಸಿನಲ್ಲಿ ಮೊಳಗುತ್ತಿದೆ ಆತ್ಮ ನಿರ್ಭರ್‌ ಮಂತ್ರ : ಮೋದಿ

2 COMMENTS

  1. I’m really enjoying the design and layout of your blog.
    It’s a very easy on the eyes which makes it much more pleasant for me to come here
    and visit more often. Did you hire out a designer to create your theme?
    Exceptional work!

LEAVE A REPLY

Please enter your comment!
Please enter your name here