ವರದಿ: ಏಳಿಂಜೆ ನಾಗೇಶ್, ಮುಂಬಯಿ
ಮುಂಬಯಿ, ಆ. 12 : 2020 ಬಾಲಿವುಡ್ ಗೆ ಅಶುಭವಾಗಿ ಕಾಡಿತ್ತಿರುವಂತೆ ಕಾಣುತ್ತಿದೆ.ಹಿರಿತೆರೆ- ಕಿರುತೆರೆ ಕಲಾವಿದರ( ಆತ್ಮ) ಹತ್ಯೆಗಳ ಜತೆಗೆ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ರಂತಹ ಮಹಾನ್ ಕಲಾವಿದರನ್ನು ಬಾಲಿವುಡ್ ಈ ವರ್ಷ ಕಳಕೊಂಡಿದೆ.ಈ ಇಬ್ಬರು ಕಲಾವಿದರು ಕ್ಯಾನ್ಸರ್ ಗೆ ಬಲಿಯಾಗಿರುವುದು ದುರಂತ.ಈಗ ಅಂತಹ ಮತ್ತೊಂದು ಆಘಾತಕಾರಿ ಸುದ್ದಿ ಮುನ್ನಾಭಾಯಿಯದ್ದು.
ನಟ ಸಂಜಯ್ ದತ್ತ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ಬಂದಿದ್ದು,ಬಾಲಿವುಡ್ ಮಂದಿ,ದತ್ ಅಭಿಮಾನಿಗಳು ಆಘಾತಗೊಂಡಿದ್ದಾರೆ.
61 ರ ಹರೆಯದ ಸಂಜಯ್ ದತ್ತ್ ಮೊನ್ನೆ ಉಸಿರಾಟದ ತೊಂದರೆಯಿಂದ ಬಳಲಿದ್ದು ಪರೀಕ್ಷೆಗಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು.ಅಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿತ್ತು.ಹೆಚ್ಚಿನ ಪರೀಕ್ಷೆಯ ವೇಳೆ ಕ್ಯಾನ್ಸರ್ ಪತ್ತೆಯಾಗಿದ್ದು ಮೂರನೇ ಹಂತದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ.ಆದ್ದರಿಂದ ಹೆಚ್ಚಿನ ಚಿಕಿತ್ಸೆ ಗಾಗಿ ದತ್ತ್ ಶೀಘ್ರವೇ ಅಮೇರಿಕಕ್ಕೆ ತೆರಳಲಿದ್ದಾರೆ.
ಸಂಜಯ್ ದತ್ತ್ ಅತಿಯಾಗಿ ಪ್ರೀತಿಸುತ್ತಿದ್ದ ಅವರ ತಾಯಿ ನಟಿ ನರ್ಗೀಸ್ ಕೂಡಾ ರಕ್ತದ ಕ್ಯಾನ್ಸರ್ ಗೆ ತುತ್ತಾಗಿ ಮೃತಪಟ್ಟಿದ್ದರೆ ಮೊದಲ ಪತ್ನಿ ರಿಚಾ ಶರ್ಮಾ ಮೆದುಳಿನ ಕ್ಯಾನ್ಸರ್ ಗೆ ಒಳಗಾಗಿ ಇಹಲೋಕ ತ್ಯಜಿಸಿದ್ದರು.
ಬಾಲಿವುಡ್‌ನಲ್ಲಿ ಲಿಸಾರೇ, ಸೊನಾಲಿ ಬೇಂದ್ರೆ, ನಟ ಆಯುಷ್ಮಾನ್ ಖುರಾನರ ಪತ್ನಿ ತಾಹಿರಾ ಕಶ್ಯಪ್, ಮನಿಷಾ ಕೊಯಿರಾಲ,ನಿರ್ದೇಶಕ ಅನುರಾಗ್ ಬಸು ಕ್ಯಾನ್ಸರ್ ಗೆದ್ದು ಬಂದ ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು.
ಆದರೆ ರಿಷಿ ಕಪೂರ್, ಇರ್ಫಾನ್ ಖಾನ್, ಫಿರೋಜ್ ಖಾನ್, ನಟಿ-ಗಾಯಕಿ ದಿವ್ಯಾ ಚೌಕ್ಸೆ, ವಿನೋದ್ ಖನ್ನಾ ಕ್ಯಾನ್ಸರ್ ಹೋರಾಟದಲ್ಲಿ ಸೋತು ಜೀವ ಕಳಕೊಂಡಿರುವುದನ್ನಿಲ್ಲಿ ಸ್ಮರಿಸಬಹುದಾಗಿದೆ.
1959 ರ ಜುಲೈ 29 ರಂದು ನಟ,ರಾಜಕಾರಣಿ ಸುನಿಲ್ ದತ್ತ್, ನರ್ಗೀಸ್ ರ ಪುತ್ರನಾಗಿ ಜನಿಸಿದ್ದ ಸಂಜಯ್ ದತ್ತ್ ಮೂರು ವಿವಾಹವಾಗಿದ್ದಾರೆ.ರಿಚಾ ಶರ್ಮಾ(1987-1996),ರಿಹಾ ಪಿಳ್ಳೈ(1998-2008),ಮತ್ತು ಮಾನ್ಯತಾ ದತ್ತ್.ಮೊದಲ ಪತ್ನಿಯಲ್ಲಿ ಮಕ್ಕಳಾದ ತೃಷಾ ದತ್ತ್,ಹಾಗೂ ಮೂರನೇ ಪತ್ನಿಯಲ್ಲಿ ಅವಳಿ ಮಕ್ಕಳು ಇಕ್ರಾ ಮತ್ತು ಶಹ್ರಾನ್ ರನ್ನು ಹೊಂದಿದ್ದಾರೆ.
1972ರಲ್ಲಿ ತಂದೆ ಸುನಿಲ್ ದತ್ತ್ ರ ರೇಶ್ಮಾ ಔರ್ ಶೇರಾ ದಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಂಡಿದ್ದ ಸಂಜು ಬಾಬಾ ನಾಯಕ ನಟನಾಗಿ 1981 ರಲ್ಲಿ ‘ರಾಕಿ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಗೈದಿದ್ದು ಹಲವು ಯಶಸ್ವೀ ಚಿತ್ರಗಳನ್ನು ನೀಡಿದ್ದಾರೆ.ಅಕ್ರಮ ಶಸ್ತ್ರ ಹಿಂದಿರುವ ಆರೋಪದಲ್ಲಿ ಜೈಲು ಶಿಕ್ಷೆ ಯನ್ನೂ ಅನುಭವಿಸಿದ್ದರು.
ಕೆ.ಜಿ.ಎಫ್ ಚಾಪ್ಟರ್ 2 ,ಹೇರಾಫೇರಿ 3 ಅವರ ನಟನೆಯ ನಿರ್ಮಾಣ ಹಂತದಲ್ಲಿನ ಚಿತ್ರಗಳು.
ಮಹೇಶ್ ಭಟ್ ನಿರ್ದೇಶನದ ‘ಸಡಕ್ 2’ ಚಿತ್ರ ಈ ತಿಂಗಳ ಕೊನೆಗೆ ಓಟಿಟಿ ( ಆನ್ಲೈನ್) ಮೂಲಕ ಪ್ರದರ್ಶನ ಕಾಣಲಿದೆ.ಪೂಜಾ ಭಟ್,ಆಲಿಯಾ ಭಟ್,ಸಿದ್ಧಾರ್ಥ್ ರಾಯ್ ಕಪೂರ್ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
ಸಂಜಯ್ ನಟನೆಯ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಮತ್ತು ಟೊರ್ಭುಝ್ ಕೂಡಾ ಓಟಿಟಿ ಮೂಲಕ ಪ್ರದರ್ಶನ ಕಾಣುವ ತಯಾರಿಯಲ್ಲಿವೆ.
” ಮಿತ್ರರೇ ನಾನು ಅನಾರೋಗ್ಯದಿಂದಿದ್ದು ಚಿಕಿತ್ಸೆಗಾಗಿ ಕೆಲ ಸಮಯ ಕೆಲಸದಿಂದ ವಿರಾಮ ಪಡೆಯುತ್ತಿದ್ದೇನೆ.ನೀವ್ಯಾರು ಗಾಬರಿಗೊಳ್ಳಬೇಡಿ” ಎಂಬುದಾಗಿ ದತ್ತ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ಸಂಜಯ್ ದತ್ತ್ ರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ.