ಹಿರಿಯೂರು, ಆ. 12: ಚಲಿಸುತ್ತಿದ್ದ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದು, ಇಬ್ಬರು ಮಕ್ಕಳು ಸೇರಿ ಐವರು ಜೀವಂತ ದಹಿಸಿರುವ ಘಟನೆ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಬಳಿ ಬುಧವಾರ ನಸುಕಿನ ಹೊತ್ತು ಸಂಭವಿಸಿದೆ.
ಖಾಸಗಿ ಬಸ್ ಬಿಜಾಪುರದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಈ ಘಟನೆ ನಡೆದಿದೆ. ಬಸ್ಸಿನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.
ಬಸ್‌ಗೆ ಬೆಂಕಿ ಅವರಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಹೊರಗೆ ಬರಲು ಪ್ರಯತ್ನಿಸಿದ್ದಾರೆ. ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಜಯಪುರದಿಂದ ಹೊರಟ ಬಸ್ ಎಲ್ಲೂ ನಿಲ್ಲಿಸದೆ ಸಂಚಾರ ನಡೆಸಿದೆ.ಪ್ರಯಾಣಿಕರು ಹೇಳಿದರೂ ಚಾಲಕ ಯಾರ ಮಾತು ಕೇಳದೆ ಡ್ರೈವ್ ಮಾಡಿದ್ದಾನೆ. ಹೀಗಾಗಿ ಇಂಜಿನ್ ಅತಿ ಬಿಸಿಯಾಗಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.