-20 ಎಕರೆ ವಿಸ್ತೀರ್ಣದಲ್ಲಿ ಟ್ರೀ ಪಾರ್ಕ್
-1.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಬರಹ : ಎಂ.ಕೆ. ಹೆಬ್ರಿ
ಹೆಬ್ರಿ: ಹೊಸದಾಗಿ ರಚನೆಯಾಗಿರುವ ಹೆಬ್ರಿ ತಾಲೂಕಿಗೆ ಮೊದಲ ಕೊಡುಗೆಯಾಗಿ ಸಿಕ್ಕಿದ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗಾಗಿ ಕಾಯುತ್ತಿದೆ. ಸುಮಾರು 20 ಎಕರೆ ಜಾಗದಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಾಣಗೊಂಡಿದ್ದು, ಕೊರೊನಾ ಮುಕ್ತವಾದ ಕೂಡಲೇ ಪಾರ್ಕ್ ಲೋಕಾರ್ಪಣೆಗೊಳ್ಳಲಿದೆ.
ಸಸ್ಯ ಸಂಪತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೆಸರಲ್ಲಿ ರಾಜ್ಯದ ವಿವಿಧೆಡೆ ಒಟ್ಟು 27 ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಮಂಜೂರು ಮಾಡಿದೆ. ಇವುಗಳ ಪೈಕಿ ಹೆಬ್ರಿಗೆ ಉಡುಪಿ ಶಿವಮೊಗ್ಗ ರಾ.ಹೆ. ಬಳಿಯ ಹೆಬ್ರಿ ಅರಣ್ಯ ಇಲಾಖೆಯ ಕಚೇರಿ ಸಮೀಪ ಪ್ರಕೃತಿ ಸೊಬಗನ್ನು ಉಳಿಸಿಕೊಂಡು ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಹೆಬ್ಬೇರಿ ಉದ್ಯಾನವನ್ನು ಸಾಲುಮರದ ತಿಮ್ಮಕ್ಕ ಪಾರ್ಕ್ ಆಗಿ ಮಾರ್ಪಾಡು ಮಾಡಲಾಗಿದೆ. ಪ್ರಾರಂಭದಲ್ಲಿ ಅರಣ್ಯ ಸಮಿತಿ ಶ್ರಮದಾನ ಬಳಿಕ 2016ರಲ್ಲಿ ಜಿ.ಪಂ. ಅನುದಾನದಲ್ಲಿ ಬಾವಿ, ಪಂಪ್ ಶೆಡ್, ಆವರಣಗೋಡೆಯನ್ನು ರಚನೆಗೊಂಡಿತು.
ಪಾರ್ಕ್ ನಲ್ಲಿ ಏನೇನಿದೆ ?
ಆಕರ್ಷಕ ಮಹಾದ್ವಾರ, ಔಷಧೀಯ ಸಸ್ಯಗಳ ವನ, ಪಾರಾಗೋಲಾ, ಟೆಂಟ್ ಹೌಸ್, 1600 ಮೀಟರ್ ಉದ್ದದ ಸಣ್ಣ ಮತ್ತು ದೊಡ್ಡದಾದ ಎರಡು ವಾಕಿಂಗ್ ಟ್ರ್ಯಾಕ್, ಪ್ರಾಕೃತಿಕ ವನ, ಮಕ್ಕಳು ಆಟವಾಡಲು ವಿವಿಧ ಜೋಕಾಲಿಗಳು, ಕುಳಿತುಕೊಳ್ಳಲು ಬೆಂಚ್, ವಿಶ್ರಾಂತಿ ತಾಣ, ರೋಪ್ ವೇ, ವೀಕ್ಷಣಾ ಗೋಪುರ, ಮುಕ್ತ ಸಭಾಂಗಣ, ಸ್ತಬ್ಧ ಚಿತ್ರಗಳು, ನೈಸರ್ಗಿಕ ಪಥ, ಪಕ್ಷಿಗಳ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. 20 ಎಕರೆ ಜಾಗಕ್ಕೆ ಆವರಣ ಗೋಡೆ, ರಾತ್ರಿಗೆ ವರ್ಣರಂಜಿತ ಬೆಳಕು ಮೊದಲಾದ ಕಾಮಗಾರಿಯ ಮುಂದಿನ ದಿನಗಳಲ್ಲಿ ನಡೆಸುವ ಉದ್ದೇಶ ಹೊಂದಲಾಗಿದೆ.
600 ಗಿಡಗಳ ನಾಟಿ
ಪ್ರಕೃತಿ ಸೊಬಗಿನ ರಕ್ಷಣೆಯೊಂದಿಗೆ ಪರಿಸರ ಸ್ನೇಹಿಯಾಗಿ ಟ್ರೀ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಮೀಸಲು ಅರಣ್ಯದ ಯಾವುದೇ ಗಿಡ-ಮರಗಳಿಗೆ ಹಾನಿ ಮಾಡದೇ ಸಸ್ಯ ರಾಶಿಗಳ ಮಧ್ಯೆ ಮಳೆಗಾಲದಲ್ಲಿ ಔಷಧೀಯ ಸಸ್ಯಗಳು ಸೇರಿದಂತೆ ಸುಮಾರು 600 ಗಿಡಗಳನ್ನು ನೆಡುವ ಉದ್ದೇಶವನ್ನು ಹೆಬ್ರಿ ಅರಣ್ಯ ಇಲಾಖೆ ಹೊಂದಿದ್ದು ಬಣ್ಣಬಣ್ಣದ ಹೂವು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಸಸ್ಯ ಸಂಪತ್ತು ಬೆಳೆಸಿ, ಸುಂದರ ಉದ್ಯಾನವನ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಇಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ದೀಪದ ವ್ಯವಸ್ಥೆ ಇನ್ನಷ್ಟೇ ಆಗಬೇಕಿದೆ.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುವುದು. ಉದ್ಯಾನವನ ಪ್ರವೇಶಿಸುವಲ್ಲಿ ಕೌಂಟರ್ ತೆರೆಯಲಾಗುತ್ತಿದ್ದು ಮಕ್ಕಳಿಗೆ 5 ರೂ. ವಯಸ್ಕರಿಗೆ 10 ರೂ. ಪ್ರವೇಶ ಶುಲ್ಕ ನಿಗದಿ ಪಡಿಸುವ ಕುರಿತು ಚಿಂತನೆ ನಡೆದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ನೂತನ ತಾಲೂಕು ಹೆಬ್ರಿ ಅಭಿವೃದ್ಧಿಗೆ ಹೊಸ ವೇಗ ದೊರೆಯುತ್ತಿದೆ. ಈಗಾಗಲೇ ಮಿನಿ ವಿಧಾನ ಸೌಧ ಸೇರಿದಂತೆ ಹೆಬ್ರಿ ತಾಲೂಕಿನಲ್ಲಿ ಹತ್ತಾರು ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಕೊರೊನಾದಿಂದ ಸಮಾಜ ಸಹಜ ಸ್ಥಿತಿಯತ್ತ ಬಂದ ಕೂಡಲೇ ಪಾರ್ಕ್ ಲೋಕಾರ್ಪಣೆಗೊಳ್ಳಲಿದೆ.
ವಿ. ಸುನಿಲ್ ಕುಮಾರ್
ಶಾಸಕರು, ಕಾರ್ಕಳ
ಟ್ರಿ ಪಾರ್ಕ್ ಉದ್ಘಾಟನೆ ಈ ಹಿಂದೆಯೆ ಆಗಬೇಕಿತ್ತು. ಕಾಮಗಾರಿ ಪೂರ್ಣಗೊಂಡಾದ ಚುನಾವಣೆ ನೀತಿ ಸಂಹಿತೆ ಜಾರಿಬಂದಿತ್ತು. ಇದೀಗ ಕೊರೊನಾ ಕಾರಣದಿಂದ ವಿಳಂಬವಾಗುತ್ತಿದೆ.
ಜಯಕರ ಪೂಜಾರಿ
ಅಧ್ಯಕ್ಷರು, ಗ್ರಾಮ ಅರಣ್ಯ ಸಮಿತಿ