ಕೋಯಿಕ್ಕೋಡ್, ಆ. 8: ಇಲ್ಲಿನ ಕರಿಪುರ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರೆಲ್ಲರೂ ಕ್ವಾರಂಟೈನ್ ಗೆ ಒಳಪಡಬೇಕು ಎಂದು ಕೇರಳ ಸರ್ಕಾರ ಸೂಚಿಸಿದೆ.
ದುರ್ಘಟನೆಯಲ್ಲಿ ಮೃತಪಟ್ಟ ಒಬ್ಬ ಪ್ರಯಾಣಿಕರಲ್ಲಿ ಕೊರೊನಾ ಪೊಸಿಟಿವ್ ಕಾಣಿಸಿಕೊಂಡಿದೆ. ಎಲ್ಲ ಪ್ರಯಾಣಿಕರ ಕೊರೋನಾ ಪರೀಕ್ಷೆ ನಡೆಯುತ್ತಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸುಮಾರು 500 ಮಂದಿ ಇದೀಗ ಕ್ವಾರಂಟೈನ್ ಗೆ ಒಳಪಡಬೇಕು ಎಂದು ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ, ರಕ್ಷಣಾ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದು ಎಲ್ಲರೂ ಕೊರನಾ ಮಾರ್ಗಸೂಚಿ ಪ್ರಕಾರ ಕ್ವಾರಂಟೈನ್ ಗೆ ಒಳಗಾಗಬೇಕು ಎಂದಿದ್ದಾರೆ. ಸ್ಥಳೀಯ ನಾಗರಿಕರು, ವಿಮಾನ ನಿಲ್ದಾಣ ಸಿಬ್ಬಂದಿ, ಕಾರ್ಯಕರ್ತರು, ಆರೋಗ್ಯ ಸೇವಕರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆಂಬ್ಯುಲೆನ್ಸ್ ನೌಕರರು, ಚಾಲಕರು ಮತ್ತು ಮಾಧ್ಯಮ ಪ್ರತಿನಿಧಿಗಳು ಎಲ್ಲರೂ ನಿನ್ನೆ ಒಟ್ಟು ಸೇರಿದ್ದರು. ತುರ್ತು ಸನ್ನಿವೇಶದಲ್ಲಿ ಹಲವರಿಗೆ ಮಾರ್ಗಸೂಚಿ ಅನುಸರಿಸಲು ಸಾಧ್ಯವಾಗಲಿಲ್ಲ. ಈ ವಿಮಾನ ನಿಲ್ದಾಣ ಕಂಟೈನ್ ಮೆಂಟ್ ಪ್ರದೇಶದಲ್ಲಿ ಇರುವುದರಿಂದ ತಮ್ಮ ಮತ್ತು ಸಮಾಜದ ಒಳಿತಿಗಾಗಿ ಕ್ವಾರಂಟೈನ್ ಗೆ ಒಳಗಾಗಬೇಕೆಂದು ಹೇಳಿದ್ದಾರೆ.
ವಿಮಾನದಲ್ಲಿ ಸುಮಾರು 40 ಮಂದಿ ಅಸೌಖ್ಯಕ್ಕೀಡಾದವರಿದ್ದರು ಎಂಬ ಸುದ್ದಿ ಹಬ್ಬಿದ್ದು ಅದು ಸತ್ಯಕ್ಕೆ ದೂರವಾದುದು, ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಚಿವೆ ಶೈಲಜಾ ಹೇಳಿದ್ದಾರೆ.