ಬೆಂಗಳೂರು, ಆ. 4: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭೂಮಿ ಪೂಜೆಗೆ ಮುಹೂರ್ತ ನಿಗದಿಪಡಿಸಿದ್ದ ಬೆಳಗಾವಿಯ ಜ್ಯೋತಿಷಿ ವಿಜಯೇಂದ್ರ ಶರ್ಮ ಅವರಿಗೆ ಬೆದರಿಕೆ ಅಜ್ಞಾತ ಮೂಲಗಳಿಂದ ಕರೆಗಳು ಬರುತ್ತಿವೆ ಎಂದು ವರದಿಯಾಗಿದೆ.
ಆ.5 ರಂದು ನಿಗದಿಪಡಿಸಿರುವ ಮುಹೂರ್ತವನ್ನು ವಾಪಸ್ ಪಡೆಯುವಂತೆ ಬೆದರಿಕೆ ಕರೆಗಳು ಬರುತ್ತಿವೆ, ಆದ್ದರಿಂದ ಶರ್ಮ ಅವರ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ವಿಜಯೇಂದ್ರ ಶರ್ಮ ಅವರು ಅಕ್ಷಯ ತೃತೀಯವೂ ಸೇರಿ ಒಟ್ಟು 4 ಮುಹೂರ್ತಗಳನ್ನು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಸಲಹೆ ನೀಡಿದ್ದರು. ಈ ಪೈಕಿ ಆ.5 ಸಹ ಇತ್ತು. ಟ್ರಸ್ಟ್ ಇದೇ ಮುಹೂರ್ತವನ್ನು ಆಯ್ಕೆ ಮಾಡಿಕೊಂಡಿದೆ.
ರಾಮ ಮಂದಿರ ಚಳುವಳಿಯಲ್ಲಿ ಸಕ್ರಿಯರಾಗಿದ್ದ ವಿಜಯೇಂದ್ರ ಶರ್ಮ ಅವರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರಲ್ಲಿ ಒಬ್ಬರಾದ ಸ್ವಾಮಿ ಗೋವಿಂದ್ ದೇವ್ ಗಿರಿಜೀ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.
ವಿದ್ವಾಂಸ ವಿಜಯೇಂದ್ರ ಶರ್ಮ ಮಾಜಿ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿದ್ದಾರೆ.