ಅಯೋಧ್ಯೆಯ ರಾಮನಿಗೂ  ಓರ್ಚಾದ ರಾಮ ರಾಜನಿಗೂ ಇರುವ ಸಂಬಂಧವೇನು?

ಅಯೋಧ್ಯಾ ನಗರಿ ಶೃಂಗಾರಗೊಂಡಿದೆ.ಎಲ್ಲಾ ಅಡಚಣೆಗಳು ನಿವಾರಣೆಯಾಗಿ  ಆ.5ರಂದು ಭೂಮಿಪೂಜೆಯೊಂದಿಗೆ ಅಲ್ಲಿ ಪ್ರಭು ಶ್ರೀ ರಾಮನ ವಿಶಾಲ ಮಂದಿರದ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.ಅಯೋಧ್ಯೆಯ ರಾಮಲಲ್ಲಾನ ಜತೆಗೆ ಮಧ್ಯ ಪ್ರದೇಶ ರಾಜ್ಯದ ಓರ್ಚಾದ ರಾಜಾರಾಮನ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಯಾರು ಈ ರಾಜಾರಾಮ, ಅಯೋಧ್ಯೆಯ  ರಾಮನಿಗೂ ಓರ್ಚಾದ ರಾಜಾ ರಾಮನಿಗೂ ಇರುವ ಸಂಬಂಧವೇನು?

ಅಯೋಧ್ಯೆಯಿಂದ ಓರ್ಚಾಕ್ಕಿರುವ ಅಂತರ 450 ಕಿ.ಮೀ.ಆದರೆ ಈ ಎರಡೂ ಸ್ಥಳಗಳ ನಡುವೆ ಬಹಳ ಆಳವಾದ ಮತ್ತು ಹತ್ತಿರದ ಸಂಬಂಧವಿದೆ.ಯಾವ ರೀತಿ ಅಯೋಧ್ಯೆಯ ಕಣಕಣದಲ್ಲಿ ರಾಮನಿದ್ದಾನೋ ಅದೇ ರೀತಿ ಓರ್ಚಾದ ಹೃದಯಬಡಿತದಲ್ಲೂ ರಾಮನಿದ್ದಾನೆ.ಇಲ್ಲಿ ರಾಮ ಧರ್ಮವನ್ನು ಮೀರಿ ನಿಂತಿದ್ದಾನೆ.

ಹಿಂದೂವಾಗಿರಲಿ ಅಥವಾ ಮುಸಲ್ಮಾನನಾಗಿರಲಿ ಇಬ್ಬರಿಗೂ ಈತ ಆರಾಧ್ಯ ಮೂರ್ತಿ.

ಅಯೋಧ್ಯೆ ಮತ್ತು ಓರ್ಚಾದ ನಡುವಿನ  ಸಂಬಂಧ ಸುಮಾರು  600 ವರ್ಷಕ್ಕೂ ಹಿಂದಿನದು.16 ನೇ ಶತಮಾನದ ಓರ್ಚಾದ ಬುಂದೇಲಾ ಆಡಳಿತಗಾರ ರಾಜ ಮಧುಕರ್ ಶಾಹನ ಮಹಾರಾಣಿ ಕುಂವಾರಿ ಗಣೇಶ ಅಯೋಧ್ಯೆಯಿಂದ ರಾಮ್ ಲಲ್ಲಾನನ್ನು ಓರ್ಚಾಕ್ಕೆ ಕರೆತಂದಿದ್ದರು ಎನ್ನಲಾಗುತ್ತಿದೆ.

ಪೌರಾಣಿಕ ಕಥೆಗಳ ಪ್ರಕಾರ, ಓರ್ಚಾದ ರಾಜ ಮಧುಕರ ಶಾ ಕೃಷ್ಣ ಭಕ್ತನಾಗಿದ್ದರೆ ಆತನ ಪತ್ನಿ ಮಹಾರಾಣಿ ಕುಂವಾರಿಗಣೇಶ ರಾಮನ ಆರಾಧಕಿ.ಇದರಿಂದಾಗಿ ಇವರಿಬ್ಬರ ನಡುವೆ ಸದಾ ವಾಗ್ಯುದ್ಧಗಳು ನಡೆಯುತ್ತಿದ್ದವಂತೆ.ಒಮ್ಮೆ ಮಧುಕರ ಶಾಹ  ವೃಂದಾವನಕ್ಕೆ ಹೋಗುವ ಬಯಕೆಯನ್ನು ರಾಣಿಯ ಮುಂದಿಡುತ್ತಾನೆ.ಆದರೆ ಆಕೆ ಅದನ್ನು ನಿರಾಕರಿಸಿ ಅಯೋಧ್ಯೆಗೆ ಹೋಗಲು ಹಠ ಹಿಡಿಯುತ್ತಾಳೆ.ಆಗ ರಾಜ,’ ಒಂದು ವೇಳೆ ನಿನ್ನ ರಾಮ ನಿಜವಾಗಿಯೂ ಇದ್ದರೆ ಆತನನ್ನು ಅಯೋಧ್ಯೆಯಿಂದ ಓರ್ಚಾಕ್ಕೆ ತಂದು ತೋರಿಸು’ ಎಂದು ಹೇಳುತ್ತಾನೆ.

ಪತಿಯ ಈ ಪಂಥಾಹ್ವಾನವನ್ನು ಸ್ವೀಕರಿಸಿದ ಮಹಾರಾಣಿ ಅಯೋಧ್ಯೆಗೆ ತೆರಳುತ್ತಾಳೆ.ಅಲ್ಲಿ 21 ದಿನಗಳ ಕಾಲ ಆಕೆ ತಪಗೈದಳು.ಆ ಬಳಿಕವೂ ಆಕೆಯ ಆರಾಧ್ಯ ಪ್ರಭು ಶ್ರೀ ರಾಮ ಪ್ರತ್ಯಕ್ಷಗೊಳ್ಳದಿದ್ದಾಗ ಆಕೆ ಸರಯೂ ನದಿಗೆ ಹಾರುತ್ತಾಳೆ.ಮಹಾರಾಣಿಯ ಭಕ್ತಿಯನ್ನು ಕಂಡು ಭಗವಾನ್ ರಾಮ ನೀರಿನಲ್ಲಿಯೇ ಆಕೆಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತಾನೆ.ಆಗ ರಾಣಿ ಅಯೋಧ್ಯೆಯಿಂದ ಓರ್ಚಾಕ್ಕೆ ಬರುವಂತೆ ಶ್ರೀರಾಮನನ್ನು ಬೇಡಿಕೊಳ್ಳುತ್ತಾಳೆ.ಆಗ ರಾಮ 3 ಷರತ್ತುಗಳನ್ನು ಆಕೆಯ ಮುಂದಿಡುತ್ತಾನೆ.ಮೊದಲನೆಯದು, ನಾನು ಇಲ್ಲಿಂದ ಹೊರಟು ಯಾವ ಜಾಗದಲ್ಲಿ ಹೋಗಿ ನಿಲ್ಲುತ್ತೇನೋ ಅಲ್ಲಿಂದ ಕದಲುವುದಿಲ್ಲ. ಎರಡನೆಯದ್ದು,ಓರ್ಚಾದ ರಾಜನ ರೂಪದಲ್ಲಿ ವಿರಾಜಮಾನನಾದ ಬಳಿಕ ಬೇರೆಯವರ ಆಡಳಿತ ಇರಕೂಡದು.ಮೂರನೆಯ ಷರತ್ತು,’ ತನ್ನನ್ನು ಬಾಲ ರೂಪದಲ್ಲಿ ಜರಗುವ ವಿಶೇಷ ಪುಷ್ಯ ನಕ್ಷತ್ರ ದಲ್ಲಿ ಸಾಧು ಸಂತರ ಜತೆ ಕರೆದೊಯ್ಯಬೇಕು’.

ಮಹಾರಾಣಿ ಈ ಮೂರು ಷರತ್ತುಗಳನ್ನೂ ಸ್ವೀಕರಿಸುತ್ತಾಳೆ.ಆ ಬಳಿಕ ರಾಮರಾಜ ಓರ್ಚಾಕ್ಕೆ  ಬರುತ್ತಾನೆ. ಪರಮಾತ್ಮ ಶ್ರೀರಾಮ ಓರ್ಚಾದಲ್ಲಿ ರಾಜನ ರೂಪದಲ್ಲಿ  ವಿರಾಜಮಾನನಾಗಿರುತ್ತಾನೆ. ರಾಮ ಅಯೋಧ್ಯೆ ಮತ್ತು ಓರ್ಚಾ ಎರಡೂ ಕಡೆಗಳಲ್ಲಿ ಇರುವ ವಿವರ ಹೇಳುವ ಶಿಲಾ ಲೇಖನವೊಂದು ಇಂದಿಗೂ ರಾಮರಾಜಾ ಮಂದಿರದಲ್ಲಿದೆ.

ಓರ್ಚಾದಲ್ಲಿ ಪ್ರಭು ರಾಮನ ಬಗೆಗಿನ ಮತ್ತೊಂದು ಕಥೆ ಪ್ರಚಲಿತದಲ್ಲಿದೆ. 16 ನೇ ಶತಮಾನದಲ್ಲಿ ವಿದೇಶಿಗರು ಭಾರತದಾದ್ಯಂತ ಮಂದಿರಗಳನ್ನು  ಆಕ್ರಮಣಗೈದು ಮಂದಿರ ಮತ್ತು ವಿಗ್ರಹಗಳನ್ನು ಪುಡಿಗೈಯುತ್ತಿದ್ದಾಗ ಅಯೋಧ್ಯೆಯ ಸಂತರು ಜನ್ಮಭೂಮಿಯಲ್ಲಿ ವಿರಾಜಮಾನನಾಗಿದ್ದ ಶ್ರೀರಾಮನ  ವಿಗ್ರಹವನ್ನು ಜಲಸಮಾಧಿಗೈದು ಕೆಸರು ಮಣ್ಣಲ್ಲಿ ಹೂತು ಬಿಡುತ್ತಾರೆ.ಇದೇ ವಿಗ್ರಹವನ್ನು ರಾಣಿ ಕುಂವಾರಿಗಣೇಶ ಓರ್ಚಾಕ್ಕೆ ತೆಗೆದುಕೊಂಡು ಹೋಗಿದ್ದಾಳೆ  ಎನ್ನಲಾಗುತ್ತಿದೆ.

ಸಾಹಿತಿ ರಾಕೇಶ್ ಅಯಾಚಿ ಅವರು ಹೇಳುವ ಪ್ರಕಾರ, 16 ನೇ ಶತಮಾನದಲ್ಲಿ ಅಕ್ಬರನ ದರ್ಬಾರ್ ನಲ್ಲಿ ಸೆಟೆದು ನಿಂತಿದ್ದ ಏಕಮಾತ್ರ ಪರಾಕ್ರಮಿ‌ ಹಿಂದೂ ರಾಜ ಮಧುಕರ್ ಶಾ ಆಗಿದ್ದ.ಅಕ್ಬರ್ನ ದರ್ಬಾರ್ ಗೆ ತಿಲಕವಿಟ್ಟು  ಪ್ರವೇಶಿಸುವುದಕ್ಕೆ ನಿರ್ಬಂಧವಿದ್ದ ಸಮಯ ಮಧುಕರ್ ಅಕ್ಬರನ ತುಂಬಿದ ಸಭಾಗೃಹದಲ್ಲಿ ಆತನ ವಿರುದ್ಧ ಸೆಟೆದು ನಿಂತಿದ್ದ.ಈತನ ಈ ವರ್ತನೆಯನ್ನು ಕಂಡ ಬಳಿಕ ಅಕ್ಬರ್ ತನ್ನ ಈ ಫರ್ಮಾನನ್ನು ಹಿಂತೆಗೆದುಕೊಂಡಿದ್ದ ಎನ್ನಲಾಗುತ್ತಿದೆ.

ಮಧುಕರ್ ಶಾನ ಹಿಂದೂವಾದಿ ವಿಚಾರದ ನಡುವೆ ರಾಮ ಜನ್ಮಭೂಮಿಯ ಶ್ರೀರಾಮನ ಈ ವಿಗ್ರಹ ಓರ್ಚಾದಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರಬಲ್ಲುದು ಎಂಬ ಭರವಸೆ ಅಯೋಧ್ಯೆಯ ಸಂತರಲ್ಲಿ ಮೂಡಿತು.ಆದ್ದರಿಂದ ಮಹಾರಾಣಿ ಕುಂವಾರಿಗಣೇಶ ಅಯೋಧ್ಯೆಗೆ ತೆರಳಿ ಅಲ್ಲಿ ಸಂತರನ್ನು ಭೇಟಿಯಾಗಿ ವಿಗ್ರಹವನ್ನು ಓರ್ಚಾಕ್ಕೆ ತೆಗೆದುಕೊಂಡು ಹೋಗಿದ್ದ ಅಂಶ ಇತಿಹಾಸದಲ್ಲಿ ದಾಖಲಾಗಿದೆ.

ಬುಂದೇಲಾದ ಮಹಾರಾಣಿ ಶ್ರೀರಾಮನನ್ನು  ಅಯೋಧ್ಯೆಯಿಂದ ಓರ್ಚಾಕ್ಕೆ ತಂದು ಸ್ಥಾಪಿಸಿದ್ದು ಒಂದು ಧಾರ್ಮಿಕ ಕತೆಯಷ್ಟೇ ಅಲ್ಲ, ಬದಲಾಗಿ ಅಯೋಧ್ಯೆಯ ರಾಮಜನ್ಮಭೂಮಿಯ ಅಸಲಿ(ಮೂಲ) ಮೂರ್ತಿ ಓರ್ಚಾದ ರಾಮರಾಜಾ ಮಂದಿರದಲ್ಲಿ ವಿರಾಜಮಾನವಾಗಿರುವ ಮೂರ್ತಿಯೂ ಆಗಿರಬಹುದಾದ ಸಂಭವನೀಯತೆಗಳಿಗೂ ಇಂಬು ಕೊಡುತ್ತದೆ.ಆದ್ದರಿಂದಲೇ ಅಯೋಧ್ಯೆಯ ರಾಮಲಲ್ಲಾನ ಜತೆಗೆ ಓರ್ಚಾದ ರಾಮರಾಜಾ ಕೂಡಾ ಸುದ್ದಿಗೆ ಗ್ರಾಸವಾಗಿದ್ದಾನೆ.

ಇತಿಹಾಸಕಾರರು ಹೇಳುವ ಪ್ರಕಾರ, ರಾಮರಾಜಾನಿಗಾಗಿ ಓರ್ಚಾದ ಮಂದಿರವನ್ನು ನಿರ್ಮಿಸಲಾಗಿತ್ತು.ಆದರೆ ಬಳಿಕ ಅದನ್ನು ಸುರಕ್ಷತೆಯ ದೃಷ್ಟಿಯಿಂದ ಮಂದಿರದ ಬದಲು ರಸೋಯಿ(ಅಡುಗೆ ಮನೆ)ಯಲ್ಲಿ ಸ್ಥಾಪಿಸಲಾಯಿತು. ರಾಜಗೃಹದ ಮಹಿಳೆಯರಿರುವ ರಸೋಯಿಯಲ್ಲಿರುವಷ್ಟು  ಸುರಕ್ಷತೆ ಬೇರೆಲ್ಲಿಯೂ ಇರುವುದಿಲ್ಲ ಎಂಬುದು ಇದರ ಹಿಂದಿರುವ ತರ್ಕ.

ಓರ್ಚಾದ ಮಂದಿರ ಹಿಂದೂಗಳಿಗೆ ಎಷ್ಟು ಪವಿತ್ರ ಮತ್ತು ಭಕ್ತಿಯ ತಾಣವಾಗಿದೆಯೋ ಮುಸ್ಲಿಂರಿಗೂ ಅಷ್ಟೇ ಭಕ್ತಿಯ ತಾಣವಾಗಿದೆ.ಅವರಿಗೂ ರಾಮ ಆರಾಧ್ಯದೈವ. ಮುನ್ನಾಖಾನ್ ಎನ್ನುವ ಮುಸ್ಲಿಮ್ ಬಂಧು ಕಳೆದ 40 ವರ್ಷ ಗಳಿಂದ ರಾಮನಿಗೆ  ವಸ್ತ್ರ ಹೊಲಿಯುವ ಕಾರ್ಯ ಮಾಡುತ್ತಿದ್ದು ನಿತ್ಯ  ಅಲಂಕಾರ ಕಾರ್ಯ ವನ್ನೂ ಮಾಡುತ್ತಿದ್ದಾರೆ.ರಹೀಮನಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ರಾಮನಿಗೂ ಕೊಡುತ್ತಿದ್ದಾರೆ.

ರಾಮನಿಗೂ ಇದೆ ಗಾರ್ಡ್‌ ಆಫ ಆನರ್‌

ಇಲ್ಲಿ ರಾಜನ ರೂಪದಲ್ಲಿ ಶ್ರೀರಾಮ ನೆಲೆನಿಂತಿರುವ ಕಾರಣ ಆತನಿಗೆ ನಾಲ್ಕುಬಾರಿ ಆರತಿಯ ಸಮಯ ಸಶಸ್ತ್ರ ಸಲಾಮಿ ಗಾರ್ಡ್ ಆಫ್ ಆನರ್ ನೀಡಲಾಗುತ್ತದೆ.ಓರ್ಚಾದ ನಗರ ಪ್ರದೇಶದಲ್ಲಿ ರಾಮರಾಜನಿಗೆ ಹೊರತಾಗಿ ದೇಶದ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಯಾರೊಬ್ಬ ವಿವಿಐಪಿ ಗೂ ಈ ಗಾರ್ಡ್ ಆಫ್ ಆನರ್ ನೀಡಲಾಗುವುದಿಲ್ಲ.

ಏಳಿಂಜೆ ನಾಗೇಶ್,ಮುಂಬಯಿerror: Content is protected !!
Scroll to Top