ಬೆಂಗಳೂರು, ಜು.30: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಿನ ಮೂರು ವರ್ಷ ಬಿ.ಎಸ್. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ ಈ ಕುರಿತು ಯಾರಿಗೂ ಸಂಶಯ ಬೇಡ ಎಂದಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುವ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಊಹಾಪೋಹಗಳಿಗೆ ತೆರೆ ಎಳೆದ ನಳಿನ್ ಕುಮಾರ್ ಕಟೀಲ್ ಯಡಿಯೂರಪ್ಪನವರ ಕುರ್ಚಿ ಭದ್ರ ಎಂಬ ಭರವಸೆ ನೀಡಿದ್ದಾರೆ.
ಪಕ್ಷದ ಯಾವೊಬ್ಬ ಶಾಸಕರು, ಮಂತ್ರಿಗಳು ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ. ನಮ್ಮ ಪಕ್ಷದಲ್ಲಿ ನಮ್ಮದೆ ಆದ ಶಿಸ್ತು ಮತ್ತು ನಿಮಯಗಳಿವೆ. ಪಕ್ಷದ ಶಿಸ್ತನ್ನು ಯಾರೇ ಉಲ್ಲಂಘನೆ ಮಾಡಿದರೂ ಸಹಿಸುವುದಿಲ್ಲ ಎಂದು ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಮುಂದಿನ ಮೂರು ವರ್ಷಗಳೂ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಪಕ್ಷವೂ ಸುಭದ್ರವಾಗಿರಲಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿ ವಿಚಾರವಾಗಿಯೂ ಮಾತನಾಡಿರುವ ಅವರು, ಲಕ್ಷ್ಮಣ ಸವದಿ ಇಲಾಖೆ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಈ ವಿಚಾರಕ್ಕೆ ನಾನಾ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದಿದ್ದಾರೆ.
ಸಂಪುಟ ಪುನಾರಚನೆ ಕುರಿತು ಮಾತನಾಡಿರುವ ನಳಿನ್ ಕುಮಾರ್, ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು? ಯಾರನ್ನು ಸಂಪುಟದಿಂದ ಕೈಬಿಡಬೇಕು ಎಂದು ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ.