ಎಚ್ಡಿಕೆ –ಕಾಂಗ್ರೆಸ್‌ ನಡುವೆ ನೈತಿಕತೆ ಸಮರ -ಬ್ಯಾಕ್‌ ಸೀಟ್‌ ಡ್ರೈವಿಂಗ್‌ ಮಾಡಿದವರಿಂದ ನೈತಿಕತೆಯ ಪಾಠ

0

ಬೆಂಗಳೂರು,ಜು.29:ಮಾಜಿ ಮುಖ್ಯಮಂತ್ರಿ ಎಚ್.‌ ಡಿ.  ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌  ನಡುವೆ ಮತ್ತೊಂದು ಸುತ್ತಿನ ಟ್ವೀಟ್‌ ಸಮರ ಪ್ರಾರಂಭವಾಗಿದೆ. ನೈತಿಕತೆ ವಿಚಾರವಾಗಿ ಪರಸ್ಪರರು ಕಾಲೆಳೆದುಕೊಂಡಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ  ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ ಎಂದು ಪ್ರಶ್ನಿಸಿದ್ದ  ಕಾಂಗ್ರೆಸ್ ಗೆ  ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ  ಕುಮಾರಸ್ವಾಮಿ ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸಿನ  ಅತಿರಥ ಮಹಾರಥರು ಪಕ್ಷದ ಟ್ವಿಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ.

ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ  ಕೂರಿಸಿದಿರಿ. ನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್ ನ ನೈತಿಕತೆ ಎಲ್ಲಿತ್ತು ಎಂದು ಕೇಳಿದ್ದಾರೆ.

ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ.  ನಿಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಕಾಂಗ್ರೆಸ್ ಗೆ  ಚಾಟಿ ಬೀಸಿದ್ದಾರೆ.

ಖರ್ಗೆಗೆ ಅಡ್ಡಗಾಲು

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರನ್ನ ಕುಟುಕಿರುವ ಹೆಚ್ಡಿಕೆ ಕಳೆದ ವಿಧಾನಸಭಾ  ಚುನಾವಣೆಯಲ್ಲಿ  ಅತಂತ್ರ ಫಲಿತಾಂಶ ಬಂದಾಗ  ದೇವೇಗೌಡರು ಖರ್ಗೆ ಸಿಎಂ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು‌. ಆ ನಾಯಕರುಗಳು ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು ಎಂದು ಲೇವಡಿ ಮಾಡಿದರು.

Previous articleನಾನು ಸಚಿವೆಯಾಗಿ ಮುಂದುವರಿಯುತ್ತೇನೆ : ಶಶಿಕಲಾ ಜೊಲ್ಲೆ
Next articleಸಿಎಂ ಬದಲಾವಣೆ ಮಾಡುವುದಿಲ್ಲ : ನಳಿನ್‌ ಕುಮಾರ್‌ ಭರವಸೆ

LEAVE A REPLY

Please enter your comment!
Please enter your name here