ಉಡುಪಿ, ಜು.27 : ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಮೂಲಕ ಯಡಿಯೂರಪ್ಪ ಸಂಪುಟದಲ್ಲಿ ಕರಾವಳಿಯ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪ ನಿವಾರಣೆಯಾಗಿದೆ.
ಸೋಮವಾರ ಈ ಆದೇಶ ಬಂದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಸಂಬಂಧ ಆದೇಶ ಹೊರಡಿಸುವಂತೆ ಸೂಚನೆ ನೀಡಿದ್ದಾರೆ.
ಲಾಲಾಜಿ ಮೆಂಡನ್ ಅವರು ಕಾಪು ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡನೇ ಬಾರಿ ಶಾಸಕರಾದ ಅವಧಿಯಲ್ಲಿ ಕೊಂಕಣ್ ರೈಲ್ವೇ ಮಂಡಳಿ ನಿರ್ದೇಶಕರಾಗಿದ್ದರು. ಇದೀಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಮೊಗವೀರ ಸಮುದಾಯದ ಲಾಲಾಜಿ ಅವರು 1994ರಲ್ಲಿ ಕಾಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದರು. ನಂತರ 2004, 2008 ಹಾಗೂ 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.