ಚೀನ ಪ್ರತೀಕಾರ : ಅಮೆರಿಕ ದೂತವಾಸ ಕಚೇರಿ ಮುಚ್ಚಲು ಆದೇಶ

ಬೀಜಿಂಗ್: ಹೂಸ್ಟನ್ ನಲ್ಲಿದ್ದ  ದೂತವಾಸ ಕಚೇರಿಯನ್ನು ಅಮೆರಿಕ ಮುಚ್ಚಿಸಿದ್ದಕ್ಕೆ ಪ್ರತೀಕಾರವಾಗಿ ಚೀನ ತನ್ನ ದೇಶದಲ್ಲಿರುವ ಅಮೆರಿಕ ದೂತವಾಸ ಕಚೇರಿಯನ್ನು ಮುಚ್ಚಲು ಮುಂದಾಗಿದೆ. ಚೀನದ  ಚೆಂಗ್ಡುವಿನಲ್ಲಿರುವ ಅಮೆರಿಕ ದೂತವಾಸ ಕಚೇರಿ ಸ್ಥಗಿತಕ್ಕೆ ಆದೇಶ ಹೊರಡಿಸಲಾಗಿದ್ದು, ಇದರೊಂದಿಗೆ  ಚೀನ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಮರ ತೀವ್ರಗೊಂಡಿದೆ.

ಈ ಬಗ್ಗೆ ಚೀನದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಅಮೆರಿಕದ ದೂತವಾಸ ಕಚೇರಿಯ ಕಾರ್ಯನಿರ್ವಹಣೆಗೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಿ, ಚಟುವಟಿಕೆಗಳನ್ನು ನಿಲ್ಲಿಸುವಂತೆ ಹೇಳಿದೆ. 

ಜು.22 ರಂದು (ಬುಧವಾರ) ಅಮೆರಿಕ ಹೂಸ್ಟನ್ ನಲ್ಲಿರುವ ಚೀನದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಲು ಆದೇಶ ನೀಡಿತ್ತು. ಅಮೆರಿಕನ್ನರ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿರುವುದಾಗಿ ಅಮೆರಿಕ ಹೇಳಿತ್ತು. 

ಅಮೆರಿಕದ ಈ ನಡೆಯನ್ನು ಹಿಂದೆಂದೂ ಕಾಣದ ತೀವ್ರತರವಾದದ್ದು ಎಂದು ಚೀನ ಖಂಡಿಸಿತ್ತು. ಅಲ್ಲದೇ ಅಮೆರಿಕ ತನ್ನ ಆದೇಶವನ್ನು ಹಿಂಪಡೆಯದೇ ಮುನ್ನಡೆದಿದ್ದೇ ಆದರೆ ತಾವೂ ಸಹ ಪ್ರತೀಕಾರಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿತ್ತು.

ಅಮೆರಿಕದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸುವ ತನ್ನ ಆದೇಶವನ್ನು ಚೀನ ಸಮರ್ಥಿಸಿಕೊಂಡಿದ್ದು, ಅಮೆರಿಕದ ಅನುಚಿತ ನಡೆಗಳಿಗೆ ತಕ್ಕ  ಪ್ರತಿಕ್ರಿಯೆ ನೀಡುವ ಸಾರ್ವಭೌಮ ಅಧಿಕಾರ ತನಗಿದೆ ಎಂದು ಹೇಳಿಕೊಂಡಿದೆ. ಚೀನದ ದೂತವಾಸ, ರಾಯಭಾರಿ ಕಚೇರಿಗಳನ್ನು ಮುಚ್ಚಿಸುತ್ತಿರುವ ಅಮೆರಿಕಾದ ಕ್ರಮ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದ್ದು, ಸಂಬಂಧಕ್ಕೆ ತೀವ್ರ ಧಕ್ಕೆ ಉಂಟಾಗಲಿದೆ ಎಂದು ಚೀನ ಎಚ್ಚರಿಸಿದೆ.





























































































































































































































error: Content is protected !!
Scroll to Top