ಸಿಂಧು ಮಾನೆಗೆ ಯಾವಾಗ ನೌಕರಿ ಮರಳಿ ಸಿಕ್ಕೀತು?

ಸಿಂಧು ಮಾನೆ ಮುಂಬಯಿಯ ಹಿಂದುಜಾ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದರು. ನಗರದಲ್ಲಿ ಕೊರೊನಾ ಹಾವಳಿ ಇರುವಾಗಲೂ ಉಳಿದವರಂತೆ ಅವರು ಕೂಡ ತನ್ನ ಕರ್ತವ್ಯದಲ್ಲಿ ನಿರತರಾಗಿದ್ದರು. ಹೀಗಿರುವಾಗ ಮೇ ತಿಂಗಳಲ್ಲಿ ಒಂದು ದಿನ ಸಿಂಧು ಮಾನೆಗೂ ಕೊರೊನಾ ವೈರಸ್‌ ತಗಲಿತು.

ಒಂದು ಖಾಸಗಿ ಸೆಕ್ಯುರಿಟಿ ಕಂಪನಿಯ ಉದ್ಯೋಗಿ ಸಿಂಧು  ಮಾನೆ. ಧಾರಾವಿಯ ಕೊಳೆಗೇರಿಯ ಚಾಳ್‌ನಲ್ಲಿ ಗಂಡ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸವಾಗಿದ್ದಾರೆ.

ಕೊರೊನಾ ರೋಗಿಗಳಿಗಾಗಿಯೇ ಇದ್ದ ರಾಜೀವ್‌ ಗಾಂಧಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ನಲ್ಲಿ ಅವರನ್ನು ಕ್ವಾರಂಟೈನ್‌ ಮಾಡಲಾಯಿತು. 15 ದಿನಗಳ  ಕ್ವಾರಂಟೈನ್‌ ಮುಗಿಸಿ ಮೇ 21ರಂದು ಅವರು ಮನೆಗೆ ಹಿಂದಿರುಗಿದರು. ಅಂದೇ ಹಿಂದುಜಾ ಆಸ್ಪತ್ರೆಯ ಸೆಕ್ಯುರಿಟಿ ಆಫೀಸರ್‌ ಗೆ ಫೋನ್‌ ಮಾಡಿ ಕರ್ತವ್ಯಕ್ಕೆ ಯಾವಾಗ ಬರಬೇಕೆಂದು ಕೇಳಿದರು. ಧಾರಾವಿಯ ನಿವಾಸಿಯಾಗಿರುವುದರಿಂದ ಈಗ ಬೇಡ ಎಂದರು ಆಫೀಸರ್.‌ ಆಗ ಧಾರಾವಿ ಕೊರೊನಾದ ಹಾಟ್‌ಸ್ಪಾಟ್ ಎಂದು ಕುಖ್ಯಾತವಾಗಿತ್ತು. ಜನರು ಧಾರಾವಿಯವರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು. ಧಾರಾವಿಯಿಂದ ಬಂದವರು ಎಂದು ಗೊತ್ತಾದರೆ ಸಾಕು ಅವರು ಯಾವುದೋ ಮಹಾ ಅಪರಾಧ  ಮಾಡಿ ಬಂದವರಂತೆ ಕಾಣುತ್ತಿತ್ತು ಸಮಾಜ.ಯಾಕಾದರೂ ಧಾರಾವಿಯಲ್ಲಿ ವಾಸವಾಗಿದ್ದೆವೋ ಎಂದು ಅಲ್ಲಿನವರು ನಿಟ್ಟುಸಿರು ಬಿಡುತ್ತಿದ್ದರು.  ಆದರೆ ಈಗ ಕೊರೊನಾ ನಿಯಂತ್ರಣದಲ್ಲಿ ಧಾರಾವಿಯೇ ಜಗತ್ತಿಗೆ ಮಾದರಿಯಾಗಿದೆ.

ಇನ್ನು ಸಿಂಧು  ಮಾನೆಯ  ಕತೆಗೆ ಬರುವ.  ಆ ನಂತರವೂ ಸಿಂಧು ಮಾನೆ ಸೆಕ್ಯುರಿಟಿ ಆಫೀಸರ್‌ಗೆ ಅನೇಕ ಸಲ ಫೋನ್‌ ಮಾಡಿದರು.ಕೊನೆಗೆ ಕಿರಿಕಿರಿ ತಡೆಯಲಾಗದೆ ಆತ ನೀವು ನಿಮ್ಮನ್ನು ನೇಮಿಸಿದ ಕಂಪನಿಯನ್ನೇ ಸಂಪರ್ಕಿಸಿ. ನಾವು ಅವರು ಕೊಟ್ಟ ಜನರನ್ನು ಮಾತ್ರ ಕೆಲಸಕ್ಕಿಟ್ಟುಕೊಳ್ಳುವುದು ಎಂದುಬಿಟ್ಟ.ಇಷ್ಟೆಲ್ಲ ಆಗುವಾಗ ಒಂದೂವರೆ ತಿಂಗಳೇ ಸರಿದು ಹೋಗಿತ್ತು. ಕೊನೆಗೆ ಸಿಂಧು ಮಾನೆ ತನ್ನನ್ನು ನೇಮಿಸಿದ ಕಂಪನಿಗೇ ಫೋನ್‌ ಮಾಡಿದರು. ಅಲ್ಲಿನ ಮೆನೇಜರ್‌ ಇ-ಮೈಲ್‌ ಮಾಡಲು ಹೇಳಿದ. ಅದರಂತೆ ಇ-ಮೈಲ್‌ ಕೂಡ ಮಾಡಲಾಯಿತು.ಆದರೆ ಇಷ್ಟರ ತನಕ ಸಿಂಧು ಮಾನೆಗೆ ಉತ್ತರ ಬಂದಿಲ್ಲ. ಫೋನ್‌ ಮಾಡಿದರೂ ಸ್ಪಷ್ಟ ಉತ್ತರವಿಲ್ಲ.  ಮೇಲಧಿಕಾರಿಗೆ ಫೋನ್‌ ಮಾಡಿ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದಾಗ ಅವನು ರೇಗಿ ಸಿಕ್ಕಾಪಟ್ಟೆ ಬಯ್ದುಬಿಟ್ಟ.

ಸಿಂಧು ಮಾನೆಯ ಗಂಡನಿಗೆ ಕೊರೊನಾದಿಂದಾಗಿ ನೌಕರಿ ಇಲ್ಲದಂತಾಗಿದೆ.ಮನೆಯಲ್ಲಿ 10ನೇ ತರಗತಿ ಮುಗಿಸಿದ ಮಗ ಮತ್ತು ವೃತ್ತಿಪರ ಕೋರ್ಸ್‌ ಕಲಿಯುತ್ತಿರುವ ಮಗಳಿದ್ದಾಳೆ. ಸಿಂಧು  ಮಾನೆಗೆ ಮೇ ತಿಂಗಳಿನಿಂದೀಚೆಗೆ ಸಂಬಳ ಇಲ್ಲ. ಮನೆಯಲ್ಲಿರುವುದು 10 ದಿನಕ್ಕಾಗುವಷ್ಟು ರೇಶನ್‌ ಮಾತ್ರ.ಮಕ್ಕಳ ಕಾಲೇಜು ಫೀಸ್‌ ಕಟ್ಟವುದು ಬಗೆ ಹೇಗೆಂದು ತಿಳಿಯದೆ ಸಿಂಧು ಮಾನೆ ಕೈಚೆಲ್ಲಿ ಕುಳಿತಿದ್ದಾರೆ. ಮುಂದಿನ ತಿಂಗಳಿನಿಂದ ನೌಕರಿ ಸಿಗದಿದ್ದರೆ ಉಪವಾಸವೇ ಗತಿ.ಹೀಗೆ ಕೊರೊನಾ ಸೋಂಕಿಗೊಳಗಾಗಿ  ನೌಕರಿ ಕಳೆದುಕೊಂಡವರು ಅನೇಕ  ಮಂದಿ ಇದ್ದಾರೆ. ಜನರು  ಅವರ ತಮ್ಮ ಮಧ್ಯ ಇದ್ದರೆ ತಮಗೂ ಸೋಂಕು ತಗಲುತ್ತದೆ ಎಂದು ಭಾವಿಸಿ ಅವರನ್ನು ದೂರ ಇಡುತ್ತಿದ್ದಾರೆ. ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಪಾಡು ಅವರದ್ದು.













































error: Content is protected !!
Scroll to Top