ಹೊಸ ಪ್ರಯತ್ನ

ನಲ್ಮೆಯ ಓದುಗರೇ,

ಕಾರ್ಕಳಕ್ಕೊಂದು ನಿಷ್ಪಕ್ಷಪಾತ, ಜನಾನುರಾಗಿ ಮತ್ತು ಸಶಕ್ತ ಸುದ್ದಿಮಾಧ್ಯಮದ ಅಗತ್ಯವಿದೆ, ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವ,ಇದ್ದದ್ದನ್ನು ಇದ್ದಂತೆಯೇ ಸಮಾಜದ ಮುಂದೆ ಇಡುವಂತಹ ಮಾಧ್ಯಮದ ಆವಶ್ಯಕತೆಯನ್ನು ಮನಗಂಡು ನಾವು ಕ್ರಿಯಾಶೀಲತೆಯ ಕುರುಹಾಗಿ ಕಾರ್ಕಳ ನ್ಯೂಸ್.ಕಾಂ ಎಂಬ ವೆಬ್ ನ್ಯೂಸ್ ತಾಣವನ್ನು ವಿನ್ಯಾಸಗೊಳಿಸಿದ್ದೇವೆ.
ಒಂದು ಹೊಸಚಿಂತನೆ, ನೂತನ ಪ್ರಯೋಗ, ವಿನೂತನ ಕಾರ್ಯಶೈಲಿಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದು, ತಾಲೂಕಿನ ಸುದ್ದಿಗಳನ್ನು ಸಮಗ್ರವಾಗಿ ಮತ್ತು ಕ್ಷಿಪ್ರವಾಗಿ ಓದುಗರಿಗೆ ತಲುಪಿಸುವ ಕಾರ್ಯವನ್ನು ಮಾಡಲಿದ್ದೇವೆ. ಇವುಗಳ ಜತೆಗೆ ದೇಶ, ವಿದೇಶದ ಮಹತ್ವದ ವಿದ್ಯಮಾನಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಇದರೊಂದಿಗೆ ನಮ್ಮ ಕಾರ್ಕಳದ ಸಂಸ್ಕೃತಿಯ ಭವ್ಯತೆ ಬಗ್ಗೆ, ನಮ್ಮೂರಿನ ಅರಳು ಪ್ರತಿಭೆಗಳ ಪರಿಚಯವನ್ನೂ ಮಾಡಿಕೊಡುತ್ತ, ಓದುಗರ ಅಪೇಕ್ಷೆಗೆ ತಕ್ಕಂತೆ ವಸ್ತುನಿಷ್ಠ ವರದಿಯೊಂದಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ಬೆಳಕು ಹರಿಸಲಿದ್ದೇವೆ.

ತಾಲೂಕಿನ ನಾಡಿಮಿಡಿತ
‘ಜನತೆಯ ನಾಡಿಮಿಡಿತ’ ಎಂಬ ಧ್ಯೇಯದೊಂದಿಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಪ್ರತಿ ಗ್ರಾಮಗಳ ಸಮಗ್ರ ಸುದ್ದಿಗಳನ್ನುವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆಯೊಂದಿಗೆ ಪಸರಿಸಲಿದ್ದೇವೆ. ದೇಶ -ವಿದೇಶಗಳಲ್ಲಿ ನೆಲೆಸಿರುವ ಕಾರ್ಕಳದ ಬಂಧುಗಳಿಗೂ ತಮ್ಮೂರಿನ ವಿದ್ಯಮಾನಗಳ ಮಾಹಿತಿಯನ್ನು ನೀಡುತ್ತ, ಊರಿನ ನೆನಪನ್ನು ಸದಾ ಹಸಿರಾಗಿಡಲು ಪ್ರಯತ್ನಿಸುತ್ತೇವೆ. ನಮ್ಮ ನ್ಯೂಸ್ ತಾಣ ಜನ-ಮನ ಬೆಸೆಯುವ ವೈವಿಧ್ಯಮಯ ಸುದ್ದಿ ಜಾಲವಾಗಿಯೂ ಮೂಡಿಬರಲಿದೆ.

ಡಿಜಿಟಲ್ ಯುಗ
ಪ್ರಸ್ತುತ ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿಯೊಂದು ಕ್ಷೇತ್ರವೂ ಆಧುನಿಕ ತಂತ್ರಜ್ಞಾನ, ತಂತ್ರಾಂಶಗಳ ಮೂಲಕ ವೇಗವಾಗಿ ಬದಲಾಗುತ್ತಿದೆ. ಮಾಧ್ಯಮ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಪತ್ರಿಕೆಗಳ ಪ್ರಸರಣ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿಯುತ್ತಿದ್ದು, ಯುವಕರು ಮಾತ್ರವಲ್ಲದೆ ಎಲ್ಲ ವಯೋಮಾನದ ಓದುಗರೂ ವೆಬ್ ತಾಣಗಳತ್ತ ಆಕರ್ಷಿತರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವೂ ಪುಟ್ಟ ಹೆಜ್ಜೆಯಿಡುತ್ತಿದ್ದೇವೆ. 

ಮಾಹಿತಿನೀಡಿ
ನಮ್ಮ ಸುದ್ದಿ ಜಾಲಕ್ಕೆ ಓದುಗರೇ ಬಲ. ನಿಮ್ಮೂರಿನಲ್ಲಿ ಜರಗುವ ಸಾಮಾಜಿಕ, ಧಾರ್ಮಿಕ, ಕ್ರೀಡಾ  ಚಟುವಟಿಕೆಗಳು, ಶೈಕ್ಷಣಿಕ ಹಾಗೂ ಸಾಂಸ್ಕತಿಕ ಸಮಾರಂಭ ಇತ್ಯಾದಿಗಳ ಕುರಿತಾಗಿಯೂ ಸಚಿತ್ರವಾಗಿ ಬರೆದು ಕಳುಹಿಸಿದಲ್ಲಿ, ನಾವು ಅದನ್ನು ಹತ್ತೂರಿಗೆ ಬಿತ್ತರಿಸುವ ಕೆಲಸ ಮಾಡಲಿದ್ದೇವೆ. ನಿಮ್ಮೂರಿನ ಸಮಸ್ಯೆಗಳಿಗೂ ನಾವು ಧ್ವನಿಯಾಗುತ್ತೇವೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದು ಅವುಗಳ ಪರಿಹಾರಕ್ಕೂ ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದೇವೆ. ಉಭಯ ತಾಲೂಕುಗಳ ನಾಡಿಮಿಡಿತಕ್ಕೆ ನಮ್ಮ ವೆಬ್ ತಾಣ ಸದಾ ಸ್ಪಂದಿಸಲಿದೆ. ಜಾಲ ನಮ್ಮದಾದರೂ ಅದಕ್ಕೆ ಬಲ ನೀವೇ ಆಗಿರುತ್ತೀರಿ. 

ಇ-ಪೇಪರ್
ಕ್ಷಣಕ್ಷಣದ ಸುದ್ದಿಗಳನ್ನು ವೆಬ್ ತಾಣದಲ್ಲಿ ಪ್ರಕಟಿಸುವುದರೊಂದಿಗೆ ಕಾರ್ಕಳದ ಇಡೀ ದಿನದ ಪ್ರಮುಖ ಸುದ್ದಿಗಳನ್ನು ಸಂಜೆ 7ರ ಸುಮಾರಿಗೆ ಇ-ಪೇಪರ್ ಮೂಲಕ ಪ್ರಕಟಿಸಲಿದ್ದೇವೆ. ಓದುಗರು ತಮಗೆ ಬೇಕಾದ ಸುದ್ದಿಯನ್ನು ಚಿತ್ರರೂಪದಲ್ಲಿ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಸ್ನೇಹಿತರು, ಬಂಧುಗಳ ವೀಕ್ಷಣೆಗಾಗಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಲು ಅವಕಾಶವಿರುತ್ತದೆ.

ಬೆಂಬಲವಿರಲಿ
ಕಾರ್ಕಳದ ಸಮಗ್ರ ಸುದ್ದಿ ನೀಡುವ ನಮ್ಮ ಆಶಯಕ್ಕೆ ತಮ್ಮೆಲ್ಲರ ಬೆಂಬಲ ಯಾಚಿಸುತ್ತೇವೆ. ತಮ್ಮ ಸುತ್ತಮುತ್ತಲಿನ ವರದಿ ನೀಡುವ ಮೂಲಕ ಮತ್ತು karkalanews.com ನಲ್ಲಿ ಪ್ರಕಟಗೊಂಡ ವೆಬ್ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ. 

ಯಾವುದೇ ಮಾಧ್ಯಮವೂ ಯಶಸ್ಸು ಕಾಣುವಂತಾಗಲು ಜಾಹೀರಾತು ಅತೀ ಮುಖ್ಯ. ಮದುವೆ, ಜನ್ಮದಿನ, ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳ ವಾರ್ಷಿಕೋತ್ಸವ, ಸಾಧಕರಿಗೆ ಅಭಿನಂದನೆ, ಶಿಲಾನ್ಯಾಸ, ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ನಮ್ಮ ವೆಬ್ ಸೈಟ್ ಗೆ ನೀಡಿ, ಪ್ರೋತ್ಸಾಹಿಸಿ, ಬೆನ್ನೆಲುಬಾಗಿ ನಿಲ್ಲುವಂತೆ ಮನವಿ ಮಾಡುತ್ತೇವೆ.

ನ್ಯೂಸ್‌ ಕಾರ್ಕಳ ಟೀಮ್ 

ನ್ಯೂಸ್ ಕಳುಹಿಸಲು ಇ –ಮೇಲ್ ಐಡಿ
nk.newskarkala@gmail.com
ವಾಟ್ಸಪ್ ನಂಬರ್: 6363666197

ನಮ್ಮವಿಳಾಸ:
ನ್ಯೂಸ್ ಕಾರ್ಕಳ ಕಚೇರಿ
ಎರಡನೇ ಮಹಡಿ

ಹೊಟೇಲ್‌ ಜೈನ್‌, ಸರ್ವಜ್ಞ ವೃತ್ತ ಬಳಿ, ಕಾರ್ಕಳ-574104

Address 
News Karkala
Second Floor 
Hotel Jain
Near Sarvajna Circle, Karkala – 574104
E-mail – nk.newskarkala@gmail.com
WhatsApp: 6363666197





















error: Content is protected !!
Scroll to Top