ವೈದ್ಯರ , ನರ್ಸ್‌ಗಳ ವೇತನ ಏರಿಕೆ

ಬೆಂಗಳೂರು: ಕೊರೋನಾ ಸೋಂಕನ್ನು ತಡೆಗಟ್ಟಲು  ವಾರಿಯರ್​ಗಳಾಗಿ ಹೋರಾಡುತ್ತಿರುವ ವೈದ್ಯರು, ನರ್ಸ್​ಗಳು ಹಗಲು-ರಾತ್ರಿ ಕೊರೋನಾ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನರ್ಸ್​ಗಳಿಗೆ ರಾಜ್ಯ ಸರ್ಕಾರ ಬಂಪರ್ ಉಡುಗೊರೆಯೊಂದನ್ನು ನೀಡಿದೆ. ಆಯುಷ್ ಮತ್ತು ಯುನಾನಿ ವೈದ್ಯರ ತಿಂಗಳ ಸಂಬಳವನ್ನು 48,000ಕ್ಕೆ ಏರಿಕೆ ಮಾಡಲಾಗಿದೆ. ಹಾಗೇ, ತಿಂಗಳಿಗೆ 15 ಸಾವಿರ ರೂ. ಸಂಬಳ ಪಡೆಯುತ್ತಿದ್ದ ನರ್ಸ್​ಗಳ ವೇತನವನ್ನು 30 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ. ಆಯುಷ್, ಯುನಾನಿ ವೈದ್ಯರಿಗೆ ನೀಡಲಾಗುವ ವೇತನವನ್ನು 25ರಿಂದ 48 ಸಾವಿರಕ್ಕೇರಿಕೆ ಮಾಡಲಾಗಿದೆ. ತಾತ್ಕಾಲಿಕವಾಗಿ‌ ಕೋವಿಡ್ ಕಾರ್ಯ ನಿರ್ವಹಣೆಗೆ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್​ ವೈದ್ಯರಿಗೆ 80 ಸಾವಿರ ರೂ. ವೇತನ ನೀಡಲಾಗುವುದು. 6 ತಿಂಗಳ ಕಾಲ ಕರ್ನಾಟಕದ ನರ್ಸ್​ಗಳ ವೇತನವನ್ನು 30 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲ ನರ್ಸ್​ಗಳಿಗೂ ಹೊಸ ವೇತನ ಅನ್ವಯವಾಗಲಿದೆ. ಇದುವರೆಗೂ 15 ಸಾವಿರ ರೂ. ವೇತನ ಪಡೆಯುತ್ತಿದ್ದ ನರ್ಸ್ ಗಳು ಇನ್ನುಮುಂದೆ 30 ಸಾವಿರ ರೂ. ವೇತನ ಪಡೆಯಲಿದ್ದಾರೆ ಎಂದು ದೃಢಪಡಿಸಿದ್ದಾರೆ.

ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಕ್ರಮಗಳನ್ನ ಕೈಗೊಳ್ಳಲು ಆಯುಷ್ ಇಲಾಖೆಯಿಂದ ಪ್ರಸ್ತಾವನೆ ಬಂದಿತ್ತು. ಆ ಪ್ರಸ್ತಾವನೆಯನ್ನ ಉನ್ನತ ಮಟ್ಟದ ಸಮಿತಿಗೆ ನೀಡಲಾಗಿದೆ. ಮುಂದಿನ ವಾರ ಸಮಿತಿ ವರದಿ ನೀಡಲಿದೆ. ಮೆಡಿಕಲ್ ಕಾಲೇಜುಗಳಲ್ಲಿ ಆರ್‌ಟಿಪಿಸಿಆರ್ ಉನ್ನತಿಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಕೊರೋನಾ ಟೆಸ್ಟ್ ಸಂಖ್ಯೆ ಹೆಚ್ಚಳವಾಗುತ್ತದೆ. ನಾನ್ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನ ಮಾಡಲಾಗಿದೆ. ಅವರಿಂದ ಒಪಿಡಿ ದರ 10 ರೂ. ಕೂಡ ಪಡೆಯದಿರಲು ತೀರ್ಮಾನ ಮಾಡಲಾಗಿದೆ ಎಂದು ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಎನ್‌ಡಿಆರ್‌ಎಫ್, ಕೆಪಿಎಂಇ, ಎಪಿಡಮಿಕ್ ಆ್ಯಕ್ಟ್ ಇದೆ. ಆ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಸಂಘರ್ಷದ ಹಾದಿ ಬೇಡ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಿಎಂ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ದರ ಪಡೆಯಬೇಕು. ಜಿಲ್ಲಾ ಸರಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆ ಮಾಡಲು ನಿರ್ಣಯ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳು ನಾನ್ ಕೋವಿಡ್ ಸೇವೆಗೆ ಮೀಸಲಿರಲಿವೆ ಎಂದು ಸಚಿವರು ತಿಳಿಸಿದ್ದಾರೆ.

Latest Articles

error: Content is protected !!