ನಾಳೆಯಿಂದ ಬೆಂಗಳೂರು ಅನ್‌ಲಾಕ್‌

ಬೆಂಗಳೂರು: ಕೊರೊನಾ ಪ್ರಸರಣ  ತಡೆಯುವ ಸಲುವಾಗಿ ವಿಧಿಸಿರುವ ಲಾಕ್‌ ಡೌನ್‌ ತೆರವುಗೊಳಿಸಲಾಗುತ್ತಿದೆ. ಲಾಕ್‌ಡೌನ್‌ ಜಾರಿಗೆ ಮೊದಲು ಇದ್ದ ಸ್ಥಿತಿಗೆ ರಾಜಧಾನಿ ನಾಳೆ ಮರಳಲಿದೆ. ಆದರೆ ಲಾಕ್‌ಡೌನ್ ಮಾರ್ಗಸೂಚಿಗಳಲ್ಲಿ ತಿಳಿಸಿದ ಕೆಲವು ವಲಯಗಳು ಅನ್‌ಲಾಕ್‌ ಆಗಲಿವೆ. ಆದರೆ ಜಿಮ್, ಶಾಲೆ ಮುಂತಾದ ವಲಯಗಳ ಮೇಲಿನ ನಿರ್ಬಂಧ ಮುಂದುವರಿಯಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. `

ನಗರದಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ದೊಡ್ಡ ಮಟ್ಟದಲ್ಲಿ ಜನಸಂದಣಿ ಸೇರುವ ಸ್ಥಳಗಳಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅಲ್ಲಿ ಇನ್ನೂ ಕೆಲವು ದಿನ ನಿರ್ಬಂಧ ಮುಂದುವರಿಸಬೇಕಾಗುತ್ತದೆ. ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ಮಾಡಿದರೆ ನಾವು ಅದಕ್ಕೆ ಬೆಂಬಲ ನೀಡುತ್ತೇವೆ ಎಂದರು.

ಒಂದು ವಾರದ ಲಾಕ್‌ ಡೌನ್ ಮನಸ್ಸಿಲ್ಲದ ಮನಸ್ಸಿನಲ್ಲಿ ಜಾರಿಗೊಳಿಸಲಾಯಿತು. ವಿವಿಧ ಸಂಘಟನೆಗಳು, ತಜ್ಞರು, ವಿರೋಧ ಪಕ್ಷದವರು ನೀಡಿದ ಸಲಹೆಯಂತೆ ಅದನ್ನು ಜಾರಿಗೊಳಿಸಲಾಯಿತು. ಅದಕ್ಕೂ ಸಾಕಷ್ಟು ರೀತಿಯಲ್ಲಿ ತಯಾರಿ ಮಾಡಲಾಗಿತ್ತು. ಲಾಕ್‌ಡೌನ್‌ನಿಂದ ಸೋಂಕು ವೇಗವಾಗಿ ತಡೆಯುವುದನ್ನು ನಿಯಂತ್ರಣ ಮಾಡಬಹುದು ಎಂಬ ಉದ್ದೇಶವಿತ್ತು. ಸೋಂಕಿನ ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯಲು ಸಾಧ್ಯವಾಗಿದೆ ಎಂದರು.

ಅನ್‌ಲಾಕ್‌ ಆದ ಬಳಿಕವೂ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಾಗುತ್ತದೆ. ಇದಕ್ಕಾಗಿ ಬೂತ್‌ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಈ ತಂಡದಲ್ಲಿ 5-6ರಿಂದ ಮಂದಿ ಅಧಿಕಾರಿಗಳು ಇರುತ್ತಾರೆ. ಇವರು ಕೊರೊನಾ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‌ಮೆಂಟ್‌ ಬಗ್ಗೆ ಗಮನ ಹರಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉಪ ಮುಖ್ಯಮಂತ್ರಿ ಉತ್ತರಿಸಿದರು.
 

error: Content is protected !!
Scroll to Top