ಕೇರಳದ ಅಲಪ್ಪುಳ ಜಿಲ್ಲೆಯ ವಲ್ಲಿಕುನ್ನು ನಿವಾಸಿ ಅಬ್ದುಲ್ ತಾಹಾ ಓಮಾನ್ ನಲ್ಲಿ ಸುಪರ್ ಮಾರ್ಕೆಟ್ ನ ಸುಪರ್‌ವೈಸರ್‌ಗೆ ಆಗಿ ತಕ್ಕ ಮಟ್ಟಿಗೆ ಉತ್ತಮ ಸಂಪಾದನೆಯನ್ನು ಮಾಡುತ್ತಿದ್ದರು. ಖರ್ಚು ಕಳೆದು ಮನೆಗೂ ಒಂದಿಷ್ಟು ಕಳುಹಿಸುತ್ತಿದ್ದರು.ಊರಿನಲ್ಲಿರುವ ಅಪ್ಪ,ಅಮ್ಮ,ಇಬ್ಬರು ತಂಗಿಯಂದಿರ ಬದುಕು ಅವರು ಕಳುಹಿಸುವ ಹಣದಿಂದ ಹೆಚ್ಚೇನೂ ಏರುಪೇರಿಲ್ಲದೆ ಸಾಗುತ್ತಿತ್ತು. ಗಲ್ಫ್ ನಲ್ಲೂ ಕೊರೊನಾ ಹಾವಳಿ ಶುರುವಾಗಿ ಸುಪರ್ ಮಾರ್ಕೆಟ್ ಮುಚ್ಚಿತು. ನಿರುದ್ಯೋಗಿಯಾದ ತಾಹಾ ಎಪ್ರಿಲ್ ನಲ್ಲಿ ಹೇಗಾದರೂ ಮಾಡಿ ಊರು ಸೇರಿಕೊಂಡರು. ಕೈಯಲ್ಲಿ ಒಂದಷ್ಟು ಹಣ ಇರುವಾಗ ಹೇಗೋ ದಿನ ಕಳೆಯಿತು.ಹಣ ಖಾಲಿಯಾಗುತ್ತಿರುವಂತೆ ಮುಂದೇನು ಎಂಬ ಪ್ರಶ್ನೆ ಎದುರಾಯಿತು.
ಬೇರೇನೂ ದಾರಿ ಕಾಣದಾದಾಗ ತಾಹಾ ಒಂದು ದಿನ ತಂದೆಯ ಹಳೆ ಸ್ಕೂಟರ್ ತೆಗೆದುಕೊಂಡು ಊರಿನ ತರಕಾರಿ ಸಂತೆಗೆ ಒಂದು ಸುತ್ತು ಹಾಕಿಕೊಂಡು ಬಂದರು. ಆಗ ಅವರಿಗೆ ಉಳಿದೆಲ್ಲ ತರಕಾರಿಗಿಂತ ಈರುಳ್ಳಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಗಮನಕ್ಕೆ ಬಂತು. ನಾನು ಏಕೆ ಈರುಳ್ಳಿ ವ್ಯಾಪಾರ ಮಾಡಬಾರದು ಎಂದು ಆಲೋಚಿಸಿದ ಅವರು ಮರುದಿನವೇ ಸಗಟು ಮಾರುಕಟ್ಟೆಗೆ ಹೋಗಿ ಎರಡು ಮೂಟೆ ಈರುಳ್ಳಿ ತಂದರು.
ಆನೆಕುಳಿ ಸೇತುವೆ ಬಳಿಯಿರುವ ತುಸು ಖಾಲಿ ಜಾಗವೇ ಅವರ ಅಂಗಡಿಯಾಯಿತು. ನೋಡುನೋಡುತ್ತಿದ್ದಂತೆ ಬರೀ 2 ತಾಸಿನಲ್ಲಿ ಈರುಳ್ಳಿ ಮೂಟೆ ಖಾಲಿಯಾಯಿತು. ಮೊದಲ ದಿನ ಬಂದ ಲಾಭ 300 ರೂ. ಮರುದಿನ ಇನ್ನೊಂದು ಮೂಟೆ ಹೆಚ್ಚು ತಂದರು.ಹೀಗೆ ದಿನಕಳೆದಂತೆ ತಾಹಾ ವ್ಯಾಪಾರ ಅಭಿವೃದ್ಧಿ ಹೊಂದುತ್ತಾ ಹೋಯಿತು.ಈಗ ಪಾವುಂಬ –ಮಾನಂಪಳ್ಳಿ ರಸ್ತೆಯಲ್ಲಿ ಓಡಾಡುವವರಿಗೆ ತಾಹಾ ಪರಿಚಿತ ಮುಖ. ಎಲ್ಲ ಖರ್ಚು ಕಳೆದು ದಿನಕ್ಕೆ 500-600 ಉಳಿಯುವುದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿಲ್ಲ ಎನ್ನುತ್ತಾರೆ ತಾಹಾ.
ಗಲ್ಫ್ ಗೆ ಹೋಗಿ ಕೈತುಂಬ ಸಂಪಾದಿಸಬೇಕೆಂಬ ತಾಹಾ ಕನಸು ಮೂರು ವರ್ಷದಲ್ಲೇ ಮುರುಟಿ ಹೋಗಿದೆ. ಈಗ ಏನಿದ್ದರೂ ಬದುಕುಳಿಯುವ ಹೋರಾಟ. ಸದ್ಯಕ್ಕೆ ಜೀವನವೇನೂ ತಕ್ಕಮಟ್ಟಿಗೆ ನಡೆಯುತ್ತಿದೆ ಎನ್ನುತ್ತಾರೆ ತಾಹಾ. ಕೇರಳದಲ್ಲಿ ಇಂಥ ಸಾವಿರಾರು ತಾಹಾಗಳಿದ್ದಾರೆ.ಎಲ್ಲರದ್ದೂ ಹೆಚ್ಚುಕಮ್ಮಿ ಒಂದೇ ರೀತಿಯ ಕತೆ. ಕೈತುಂಬ ಸಂಪಾದಿಸಿ ಭವ್ಯವಾದ ಬದುಕು ಕಟ್ಟುವ ಕನಸು ಕಂಡು ಸಾಲಸೋಲ ಮಾಡಿ ಗಲ್ಫ್ ವಿಮಾನ ಏರಿದವರೆಲ್ಲ ಕೊರೊನಾ ಕೊಟ್ಟ ಹೊಡೆತಕ್ಕೆ ಬರಿಗೈಯ್ಯಲ್ಲಿ ವಾಪಾಸು ಬಂದು ನಿರುದ್ಯೋಗಿಗಳಾಗಿ ದಿಕ್ಕು ಕಾಣದೆ ಕುಳಿತಿದ್ದಾರೆ.ತಾಹಾನಂಥ ಕೆಲವರು ಎಲ್ಲ ಪ್ರತಿಷ್ಠೆಗಳನ್ನು ಬದಿಗಿರಿಸಿ ತರಕಾರಿ, ಮೀನು, ಕೋಳಿ ಮಾರಿ, ಚಿಕ್ಕಪುಟ್ಟ ಕ್ಯಾಂಟೀನ್ ಗಳನ್ನು ಆರಂಭಿಸಿ ಸದ್ಯಕ್ಕೆ ಬದುಕಿನ ದಾರಿ ಕಂಡುಕೊಂಡಿದ್ದಾರೆ.