ಶ್ರೀರಾಮುಲು ಕಚೇರಿಯ ಇನ್ನೂ ಮೂವರು ಸಿಬಂದಿಗಳಿಗೆ ಕೊರೊನಾ ಪೊಸಿಟಿವ್‌

ಬೆಂಗಳೂರು: ರಾಜ್ಯದ ಆರೋಗ್ಯ ಸಚಿವರನ್ನೂ ಕೊರೊನಾ ಇನ್ನಿಲ್ಲದಂತೆ ಕಾಡುತ್ತಿದೆ.  ಮತ್ತೆ ಕಚೇರಿಯ ಮೂವರು ಸಿಬ್ಬಂದಿಗಳು ಕೊರೋನಾ ಸೊಂಕಿಗೆ ತುತ್ತಾದ  ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರ ಕಚೇರಿ ಸೀಲ್‌ ಡೌನ್ ಮಾಡಲಾಗಿದೆ.

ಶ್ರೀರಾಮುಲು ಅವರ ಚಾಲಕ ಹಾಗೂ ಕಚೇರಿಯ ಇಬ್ಬರು ಸಹಾಯಕರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿಂದೆ ಮತ್ತಿಬ್ಬರು ಸಿಬ್ಬಂದಿಗಳಾದ ನಿತೇಶ್ ಹಾಗೂ ಸೂಜಿತ್ ಅವರಲ್ಲಿ ವೈರಸ್ ದೃಢಪಟ್ಟಿತ್ತು. ಕಳೆದ ಕೆಲ ದಿನಗಳಿಂದ ಇಬ್ಬರೂ ಕಚೇರಿಯಲ್ಲೆಲ್ಲೂ ಕಾಣಿಸಿಕೊಂಡಿರಲಿಲ್ಲ. ನಿತೇಶ್ ಎಂಬವರಲ್ಲಿ ಕೊರೋನಾ ಲಕ್ಷಣಗಳು ಕಂಡ ಬಂದ ಕೂಡಲೇ ಶಿವಮೊಗ್ಗದ ಅಯನೂರಿಗೆ ತೆರಳಿದ್ದರು. ಬಳಿಕ ಸುಜಿತ್ ಅವರೂ ಕೂಡ ಕಚೇರಿಗೆ ಬಂದಿರಲಿಲ್ಲ. ಸುಜಿತ್ ಅವರಿಂದಲೇ ಸೋಂಕು ಹರಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ನಡುವೆ ಸಚಿವ ಶ್ರೀರಾಮುಲು ಅವರು ಬಳ್ಳಾರಿಯಲ್ಲಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕಚೇರಿಯಲ್ಲಿ ಸೋಂಕು ಹರಡಿರುವ ಕುರಿತು ಪ್ರಶ್ನಿಸಿದಾಗ, ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

ಸಿಬ್ಬಂದಿಯಲ್ಲಿ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಇದೀಗ ಕೆಸಿ ಜನರಲ್ ಆಸ್ಪತ್ರೆಯಲ್ಲಿ 50 ಮಂದಿ ಸಿಬ್ಬಂದಿಗಳಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ ಎನ್ನಲಾಗುತ್ತಿದೆ. 

ಇನ್ನು ಶ್ರೀರಾಮುಲು ಅವರ ಕಚೇರಿಯ ಬಳಿಯೇ ಇರುವುದರಿಂದ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರ ಕಚೇರಿಯನ್ನು ಆರೋಗ್ಯಾಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆ. 

13 ಮಂದಿ ಸಿಬ್ಬಂದಿಗಳಲ್ಲಿ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕುಮಾರಕೃಪಾ ಅತಿಥಿ ಗೃಹವನ್ನು ಬಂದ್ ಮಾಡಲಾಗಿದ್ದು, ಹಲವು ಜನರಲ್ಲಿ ಲಕ್ಷಣಗಳೇ ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಗೊಳಗಾಗುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. 

ಈ ನಡುವೆ ಚಾಲಕನಲ್ಲಿ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್  ರಾವ್ ಅವರು ನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ ಗೊಳಗಾಗಿದ್ದಾರೆ. 

error: Content is protected !!
Scroll to Top