ವಿಕಾಸ್‌ ದುಬೆ ಎಂಬ ಪಾತಕಿ ಇಷ್ಟು ಪವರ್‌ಫುಲ್‌ ಆದದ್ದೇಗೆ? ಇಲ್ಲಿದೆ ವಿವರ

ರಾಜಕಾರಣಿಗಳು , ಪೊಲೀಸರು ಅವನ  ಕೈಯೊಳಗಿದ್ದರು

ಬಂಧಿಸಲು ಬಂದ ಎಂಟು ಪೊಲೀಸರನ್ನು ಖೆಡ್ಡಾಕ್ಕೆ ಕೆಡವಿ ಸಾಯಿಸಿದ ಬಳಿಕ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶದ ನಟೋರಿಯಸ್‌ ಕ್ರಿಮಿನಲ್‌ ವಿಕಾಸ್‌ ದುಬೆ ಕೊನೆಗೂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಸೆರೆಯಾಗಿದ್ದ ದುಬೆಯನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಮುಗಿಸಿ ಹಾಕಿದ್ದಾರೆ.ಈ ಮೂಲೆ ಪರಮ ಪಾಪಿಯೊಬ್ಬನ ಪಾತಕ  ಬದುಕು ಮುಕ್ತಾಯವಾಗಿದೆ. ದುಬೆ ಸತ್ತಿರುವುದಕ್ಕೆ ಯಾರಿಗೂ ಬೇಸರವಿಲ್ಲ. ಬದುಕಿನುದ್ದಕ್ಕೂ ರಕ್ತ ಚೆಲ್ಲಾಡುತ್ತಲೇ ಬಂದವನ ಅಂತ್ಯ ಹೀಗೆಯೇ ಆಗಬೇಕಿತ್ತು. ಆದರೆ ಈ ದುಷ್ಟನ  ಅಂತ್ಯದೊಂದಿಗೆ ಅನೇಕ ರಹಸ್ಯಗಳು ಕೂಡ ಸಮಾಧಿಯಾಗಿವೆ. ದುಬೆಗೆ ಇರುವ ಪೊಲಿಟಿಕಲ್ ಲಿಂಕ್, ಪೊಲೀಸ್ ಲಿಂಕ್ ಗಳನ್ನು ಮುಚ್ಚಿಡುವ ಸಲುವಾಗಿಯಾಗಿಯೇ  ಅವನ ಹೆಣ ಬೀಳಿಸಲಾಗಿದೆ ಎನ್ನಲಾಗುತ್ತಿದೆ.ಇಷ್ಟಕ್ಕೂ ಯಾರು ಈ ವಿಕಾಸ್‌ ದುಬೆ? ಉತ್ತರ ಪ್ರದೇಶದ ರಾಜಕೀಯಕ್ಕೂ ಅವನಿಗೂ ಇರುವ ನಂಟು ಏನು? ಇಲ್ಲಿದೆ ಒಂದಷ್ಟು ಮಾಹಿತಿ.

ದುಬೆಯಿಂದ ಕೊಲೆಗೀಡಾಗಿರೋದು ಎಂಟು ಪೊಲೀಸರು, ಅದರಲ್ಲಿ ಒಬ್ಬ ಡಿವೈಎಸ್ಪಿ, ಮೂವರು ಸಬ್ಇನ್ಸ್ ಪೆಕ್ಟರ್ಗಳು, ನಾಲ್ವರು ಕಾನ್ಸ್ ಟೇಬಲ್ ಗಳು. ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಗೆ ಇದಕ್ಕಿಂತ ದೊಡ್ಡ ಅಪಮಾನ ಇನ್ನೇನಿರಲು ಸಾಧ್ಯ? ಅವರ ಮನೋಸ್ಥೈರ್ಯ ಉಳಿಸುವ ಕಾರಣಕ್ಕಾಗಿಯಾದರೂ ದುಬೆಯನ್ನು ಮಟ್ಟ ಹಾಕಲೇ ಬೇಕಿತ್ತು.

ವಿಕಾಸ್ ದುಬೆ, ನಿನ್ನೆ ಮೊನ್ನೆ ಹುಟ್ಟಿಕೊಂಡ ಕ್ರಿಮಿನಲ್ ಅಲ್ಲ. ಅವನ ಮೇಲೆ ಕೊಲೆ ಸುಲಿಗೆಯಂಥ ಅರವತ್ತು ಕ್ರಿಮಿನಲ್ ಕೇಸುಗಳಿದ್ದವು. ಯಾವತ್ತೋ ಬೀದಿ ಹೆಣವಾಗಬೇಕಿತ್ತು ಅಥವಾ ಜೈಲು ಸೇರಬೇಕಿತ್ತು. ಆದರೆ ಅವನ ರಕ್ಷಣೆಗೆ ರಾಜಕಾರಣಿಗಳಿದ್ದರು,  ಪೊಲೀಸ್ ಅಧಿಕಾರಿಗಳಿದ್ದರು. ಅವನ ಕಾರ್ಯಕ್ಷೇತ್ರದಲ್ಲಿ ಬ್ರಾಹ್ಮಣರೇ ಪ್ರಬಲರಾಗಿದ್ದರು, ಎದುರು ಹಾಕಿಕೊಳ್ಳುವ ಶಕ್ತಿಯೂ ಯಾರಿಗೂ ಇರಲಿಲ್ಲ.  ಒಬ್ಬ ಹುಟ್ಟಾ ಕ್ರಿಮಿನಲ್ ಗೆ ಇನ್ನೇನು ಬೇಕಿತ್ತು?

ವಿಕಾಸ್ ದುಬೆ ಬಿಕಾರೂ ಎಂಬ ಹಳ್ಳಿಯವನು. 1990ರಲ್ಲಿ ಇವನ ಮೇಲೆ ಮೊದಲ ಕೊಲೆ ಕೇಸು ಬಿತ್ತು. ಬಿಜೆಪಿ ಮುಖಂಡ ಹರಿಕಿಶನ್ ಶ್ರೀವಾಸ್ತವ ಇವನಿಗೆ ಗಾಡ್ ಫಾದರ್ ಆದ. ಮಾಯಾವತಿ ಇದ್ದಕ್ಕಿದ್ದಂತೆ ಬಿಎಸ್ ಪಿಯೊಳಗೆ ಬ್ರಾಹ್ಮಣರನ್ನು ತಂದುಕೊಂಡು ಹೊಸ ಕ್ಯಾಸ್ಟ್ ಕೆಮಿಸ್ಟ್ರಿ ಮುಂದಿಟ್ಟರಲ್ಲ, ಆಗ ಹರಿಕಿಶನ್ ಪಕ್ಷ ಬದಲಿಸಿ ಬಿಎಸ್ ಪಿಗೆ ಹೋದ. ದುಬೆ ಕೂಡ ಅವನ ಜತೆಯೇ ಬಿಎಸ್ ಪಿ ಪ್ರವೇಶಿಸಿದ. ಹೆಂಡತಿ ರಿಚಾ ದುಬೆಯನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿಲ್ಲಿಸಿದ. ಸಮಾಜವಾದಿ ಪಕ್ಷದ ಜತೆಗೂ ಇವನ ಒಡನಾಟವಿತ್ತು. ದುಬೆ ಒಂದಷ್ಟು ಪೊಲೀಸರನ್ನೂ ಸಾಕಿಕೊಂಡಿದ್ದ. ಗ್ಯಾಂಗ್ ನಡೆಸಲು ಅವನಿಗೆ ಇಷ್ಟು ಸಾಕಿತ್ತು.

2001ರಲ್ಲಿ ವಿಕಾಸ್ ದುಬೆ ಪೊಲೀಸ್ ಠಾಣೆಯೊಳಗೆ‌ ನುಗ್ಗಿ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಎಂಬುವರನ್ನು ದಾರುಣವಾಗಿ ಹತ್ಯೆ ಮಾಡಿದ್ದ. ಪ್ರಕರಣ ದಾಖಲಾಯಿತು. ಒಬ್ಬನೇ ಒಬ್ಬ ಪೊಲೀಸನೂ ಸಾಕ್ಷ್ಯ ನುಡಿಯಲಿಲ್ಲ. ಕೇಸು ಬಿದ್ದುಹೋಯಿತು.

ವಿಕಾಸ್ ದುಬೆಗೆ ಸಿನಿಮಾ ಹುಚ್ಚಿತ್ತು. ಅರ್ಜುನ್ ಪಂಡಿತ್ ಎಂಬ ಸನ್ನಿಡಿಯೋಲ್ ಸಿನಿಮಾವನ್ನು ನೂರಾರು ಬಾರಿ‌ ನೋಡಿದ್ದ. ತನ್ನನ್ನು ತಾನು ಅರ್ಜುನ್ ಪಂಡಿತ್ ಎಂದು ಭ್ರಮಿಸಿಕೊಂಡು ಓಡಾಡಿದ. ತನ್ನನ್ನು ವಿಕಾಸ್ ಪಂಡಿತ್ ಎಂದು ಕರೆಯುವಂತೆ ಎಲ್ಲರಿಗೂ ಹೇಳುತ್ತಿದ್ದ. ಪೊಲೀಸರಾದಿಯಾಗಿ ಎಲ್ಲರೂ ಇವನನ್ನು ಪಂಡಿತ್ ಎಂದೇ ಕರೆಯುತ್ತಿದ್ದರು. ತಮಾಷೆ ಏನು ಗೊತ್ತಾ? ಅರ್ಜುನ್ ಪಂಡಿತ್ ಕನ್ನಡದ ಉಪೇಂದ್ರ ನಿರ್ದೇಶನದ ‘ಓಂ’ ಸಿನಿಮಾದ ಕೆಟ್ಟ ರೀಮೇಕ್! ಬ್ರಾಹ್ಮಣ ಯುವಕನೊಬ್ಬ ಯುವತಿಯೊಬ್ಬಳಿಂದ ವಂಚಿತನಾಗಿ ಗ್ಯಾಂಗ್ ಸ್ಟರ್ ಆಗುವ ಕತೆ ಅದು. ಕನ್ನಡದಲ್ಲಿ ಪ್ರೇಮ ಅಭಿನಯಿಸಿದ್ದ ಪಾತ್ರವನ್ನು ಜೂಹಿ ಚಾವ್ಲಾ ನಿಭಾಯಿಸಿದ್ದರು.

ಜುಲೈ ಮೂರರಂದು ಕಾನ್ಪುರ ಸಮೀಪದ ಬಿಕಾರು ಗ್ರಾಮದಲ್ಲಿ ನಡೆದಿದ್ದು ಅಕ್ಷರಶಃ ನರಮೇಧ. ಮೂವತ್ತು ಪೊಲೀಸರ ತಂಡ ತನ್ನ ಬಂಧನಕ್ಕೆ ಬರುತ್ತಿದೆ ಎಂಬ ಮಾಹಿತಿ ಅವನಿಗೆ  ಕೆಲವು ಪೊಲೀಸರಿಂದಲೇ ತಿಳಿದಿತ್ತು. ಒಟ್ಟು ಅರವತ್ತು ಮಂದಿ ಸಹಚರರನ್ನು‌ ಗುಡ್ಡೆ ಹಾಕಿಕೊಂಡಿದ್ದ. ಮನೆಗಳ ತಾರಸಿ ಮೇಲೆ ಗನ್ ಹಿಡಿದು ಮಲಗಿಕೊಂಡು ಅವನ ಸಹಚರರು ಪೊಜಿಷನ್ ತೆಗೆದುಕೊಂಡಿದ್ದರು. ಒಂದು ಎಕೆ -47, ಒಂದು INSAS ರೈಫಲ್, ಹತ್ತಾರು ನಾಡಬಂದೂಕುಗಳು ಅವರ ಬಳಿ ಇದ್ದವು. ಇದ್ಯಾವುದರ ಅರಿವಿಲ್ಲದೆ ಬಂದ ಪೊಲೀಸ್ ತಂಡ ದಾರುಣವಾಗಿ ಬಲಿಯಾಯಿತು. ಮಿಕ್ಕ ಪೊಲೀಸರನ್ನು ಗುಂಡಿಟ್ಟು ಸಾಯಿಸಿದ ದುಬೆ ತಂಡ, ಡಿವೈಎಸ್ ಪಿಯನ್ನು ಮಾತ್ರ ಚಿತ್ರಹಿಂಸೆ ಕೊಟ್ಟು ಸಾಯಿಸಿತು.

ಯುಪಿ ಪೊಲೀಸರ ಹತ್ತಾರು ತಂಡಗಳು ಅವನ ಹಿಂದೆ ಬಿದ್ದಿದ್ದವು. ದುಬೆಯ ಸಹಚರರನ್ನು ಹಿಡಿದು ಕೊಲ್ಲಲಾಯಿತು ಅಥವಾ ಜೈಲಿಗೆ ತಳ್ಳಲಾಯಿತು. ಇದೆಲ್ಲ ಒಂದು ಸಿನೆಮಾಕ್ಕಾಗುವ  ಕಥೆ. ವಿಕಾಸ್ ದುಬೆಯಂಥವರು ಉತ್ತರಪ್ರದೇಶದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಪೊಲೀಸರು ಈ ಗ್ಯಾಂಗ್ ಗಳ ನಡುವೆ ಹರಿದುಹಂಚಿಹೋಗಿದ್ದಾರೆ. ಒಂದು ಗ್ಯಾಂಗಿಗಾಗಿ ಇನ್ನೊಬ್ಬ ಗ್ಯಾಂಗಿನವನನ್ನು ಪೊಲೀಸರು ಎನ್ ಕೌಂಟರ್ ಹೆಸರಿನಲ್ಲಿ ಕೊಲ್ಲುವುದು ಇಲ್ಲಿ ಸಾಮಾನ್ಯ. ಯೋಗಿ ಮುಖ್ಯಮಂತ್ರಿಯಾದ ನಂತರ ಕೇವಲ ಆರು ತಿಂಗಳಲ್ಲಿ 420 ಎನ್ ಕೌಂಟರ್ ಗಳಲ್ಲಿ ಹದಿನೈದು ಮಂದಿಯನ್ನು ಕೊಲ್ಲಲಾಯಿತು. 2018ರಲ್ಲಿ  1038 ಎನ್ ಕೌಂಟರ್ ಗಳಲ್ಲಿ 38 ಮಂದಿಯನ್ನು ಕೊಲ್ಲಲಾಯಿತು. ಕ್ರೈಮ್ ನಿಯಂತ್ರಿಸಲು ಎನ್ ಕೌಂಟರ್ ಮಾಡೋದು ಅನಿವಾರ್ಯ ಎನ್ನವುದು ನಿಜ

ರಾಜಕಾರಣಿಗಳ ಒಡನಾಟ, ಜಾತಿಯ ದುರಹಂಕಾರ, ಲೂಟಿಯಿಂದ ಬಂದ ಹಣ ಎಲ್ಲವೂ ಇದ್ದಾಗ ಒಬ್ಬ ವಿಕಾಸ್ ದುಬೆ ಹುಟ್ಟದೇ ಇರುತ್ತಾನೆಯೇ?

error: Content is protected !!
Scroll to Top