ಬೆಂಗಳೂರು:ಕೊರೊನಾ ಪಿಡುಗು ಒಂದೊಂದೆ ಕ್ಷೇತ್ರವನ್ನು ಆಪೋಶನ ತೆಗೆದುಕೊಳ್ಳುತ್ತಿದೆ.ಇದೀಗ ಐಟಿ ಕ್ಷೇತ್ರದ ಸರದಿ. ದೇಶದ ಪ್ರಮುಖ ಐಟಿ ಸಂಸ್ಥೆ ಕಾಗ್ನಿಜಂಟ್ ತನ್ನ 18,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಮುಂದಾಗಿದೆ. ಈ ಸುದ್ದಿ ಬಗ್ಗೆ ಕರ್ನಾಟಕ ರಾಜ್ಯ ಐಟಿ/ ಐಟಿಯೇತರ ಉದ್ಯೋಗಿಗಳ ಯೂನಿಯನ್ (ಕೆಐಟಿಯು) ಗರಂ ಆಗಿದ್ದು, ಕಾನೂನು ಸಮರ ಆರಂಭಿಸಿದೆ. ಕೊರೊನಾ ಮಹಾಮಾರಿಯಿಂದಾಗಿ ಐಟಿ ಕಂಪನಿಗಳಿಗೆ ತಕ್ಕಮಟ್ಟಿನ ಆರ್ಥಿಕ ಹೊಡೆತ ಬಿದ್ದಿದೆ. ಆದರೆ, ಯಾವುದೇ ಕಾರಣಕ್ಕೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬೇಡಿ ಎಂದು ಪ್ರಧಾನಿ ಮೋದಿಯಿಂದ ಸ್ಥಳೀಯ ಐಟಿ ಬಿಟಿ ಸಚಿವ ಡಾ. ಅಶ್ವಥ್ ನಾರಾಯಣ ತನಕ ಎಲ್ಲರೂ ಐಟಿ ಸಂಸ್ಥೆಗೆ ಕೇಳಿಕೊಂಡರೂ ಬೆಲೆ ಇಲ್ಲದಂತಾಗಿದೆ.
ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕಾಗ್ನಿಜಂಟ್ ತನ್ನದೇ ಕಾನೂನು ಪಾಲಿಸುವಂತಿದೆ. 18 ಸಾವಿರಕ್ಕೂ ಅಧಿಕ ಮಂದಿಗೆ ಯಾವುದೇ ಪ್ರಾಜೆಕ್ಟ್ ನೀಡದೆ ಬೆಂಚ್ ನಲ್ಲಿರಿಸಲಾಗಿತ್ತು.
ಸಾಮೂಹಿಕ ರಾಜೀನಾಮೆ ನೀಡಲು ಒತ್ತಡ
ಭಾರತದೆಲ್ಲೆಡೆ ಸುಮಾರು 18 ಸಾವಿರ ಉದ್ಯೋಗಿಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ಕಂಪನಿ ಆಡಳಿತ ಮಂಡಳಿ ಒತ್ತಡ ಹೇರಿದೆ. ಈ ಬಗ್ಗೆ ಆತಂಕ ವ್ಯಕ್ತ ಪಡಿಸಿರುವ ಉದ್ಯೋಗಿಗಳು ಕೆಐಟಿಯು ಮೊರೆ ಹೊಕ್ಕಿದ್ದಾರೆ. ಯಾರೂ ಗಾಬರಿಯಾಗಬೇಡಿ, ನಿಮ್ಮ ಮೇಲೆ ಉದ್ಯೋಗ ಸಂಸ್ಥೆ ಒತ್ತಡ ಹೇರಿದರೆ, ಕಾರ್ಮಿಕ ಇಲಾಖೆಗೆ ಸೂಚಿಸಿ, ಸಹಾಯವಾಣಿ ನೆರವು ಪಡೆದುಕೊಳ್ಳಿ ಎಂದು ಐಟಿ ಯೂನಿಯನ್ ಧೈರ್ಯ ತುಂಬಿದೆ.
ಕಾಗ್ನಿಜಂಟ್ ಕ್ರಮವನ್ನು ಖಂಡಿಸಿರುವ ಕೆಐಟಿಯು, ಇದು ಅಮಾನವೀಯ, ಕಾರ್ಮಿಕ ಕಾಯ್ದೆ ಪ್ರಕಾರ 100ಕ್ಕೂ ಅಧಿಕ ಉದ್ಯೋಗಿಗಳ ನೇಮಕ, ಉದ್ಯೋಗ ಕಡಿತ ಕುರಿತ ಮೊದಲಿಗೆ ಕಾರ್ಮಿಕ ಇಲಾಖೆಗೆ ತಿಳಿಸಬೇಕಾಗುತ್ತದೆ. ಆದರೆ, ಇಲ್ಲಿ ಯಾವುದೇ ಕಾನೂನು ಅನುಸರಿಸಿಲ್ಲ, ಬದಲಿಗೆ ಬಲವಂತವಾಗಿ ರಾಜೀನಾಮೆ ಪಡೆದುಕೊಳ್ಳಲಾಗಿದೆ ಎಂದು ಕೆಐಟಿಯು ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಸಿ. ಹೇಳಿದ್ದಾರೆ.
ಕಾರ್ಮಿಕ ಇಲಾಖೆಗೆ ದೂರು ಕಾಗ್ನಿಜಂಟ್ ವಿರುದ್ಧ ರಾಜ್ಯ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಲು ಉದ್ಯೋಗಿಗಳು ಮುಂದಾಗಿದ್ದಾರೆ. ಸಂಸ್ಥೆಗೆ ಲೀಗಲ್ ನೋಟಿಸ್ ಕಳಿಸಲಾಗಿದ್ದು, ಸಮರ್ಪಕ ಪ್ರತಿಕ್ರಿಯೆ ಬರದಿದ್ದರೆ, ಕಾನೂನು ಇಲಾಖೆ ಮೂಲಕ ಕ್ರಮಕ್ಕೆ ಮುಂದಾಗಲಾಗುವುದು, ಬೆಂಗಳೂರು, ಪುಣೆ, ಚೆನ್ನೈ ಇತರೆಡೆಗಳಲ್ಲಿರುವ ಯೂನಿಯನ್ ಕೂಡಾ ಇದೇ ರೀತಿ ಕ್ರಮ ಅನುಸರಿಸಲಿವೆ ಎಂದರು.
ಆದರೆ, ಈ ಎಲ್ಲಾ ಸುದ್ದಿಯನ್ನು ಅಲ್ಲಗೆಳೆದಿರುವ ಕಾಗ್ನಿಜಂಟ್ ವಕ್ತಾರರು, ಇದು ವಾರ್ಷಿಕವಾಗಿ ನಡೆಯುವ ಸಹಜ ಪ್ರಕ್ರಿಯೆ, ಕಾರ್ಯಕ್ಷಮತೆ ಆಧಾರದ ಮೇಲೆ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲಾಗುತ್ತದೆ ಎಂದಿದ್ದಾರೆ. ಉದ್ಯೋಗ ಕಡಿತ, ಮಾರಾಟಕ್ಕಾಗಿ ಹೂಡಿಕೆ ಮತ್ತು ಡಿಜಿಟಲ್ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸುವುದು ಕಂಪೆನಿಯ ಉದ್ದೇಶಗಳಲ್ಲಿ ಸೇರಿದೆ. ಮಧ್ಯಮ ಹಂತದಿಂದ ಉನ್ನತ ಹುದ್ದೆಯ ತನಕ ಜವಾಬ್ದಾರಿ ನಿರ್ವಹಿಸುತ್ತಿರುವ ಹತ್ತರಿಂದ ಹನ್ನೆರಡು ಸಾವಿರ ಮಂದಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಕಳೆದ ವರ್ಷವೇ ಸಂಸ್ಥೆ ಪ್ರಕಟಿಸಿತ್ತು ಎಂದಿದ್ದಾರೆ.