ಕಸ್ತೂರಿ ರಂಗನ್‌ ವರದಿ ಜನರಲ್ಲಿ ಗೊಂದಲ ಸೃಷ್ಠಿಸುತ್ತಿರುವ ಕೇಂದ್ರ ಸರ್ಕಾರ

ಕಸ್ತೂರಿ ರಂಗನ್‌ ವರದಿ : ಕೇಂದ್ರ ಸರಕಾರದಿಂದ ಗೊಂದಲ ಸೃಷ್ಟಿ – ಸಂಸದರ ಮೌನ -ಮುದ್ರಾಡಿ ಆಕ್ರೋಶ

ಹೆಬ್ರಿ : ಕಸ್ತೂರಿರಂಗನ್‌ ವರದಿ ವಿಚಾರದಲ್ಲಿ 2008ರಿಂದಲೂ ಕೇಂದ್ರದ ಬಿಜೆಪಿ ಸರಕಾರವು ಜನತೆಯಲ್ಲಿ ಗೊಂದಲ ಸೃಷ್ಠಿಸುತ್ತಲೇ ಬಂದಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ವರದಿಯನ್ನು ತಿರಸ್ಕರಿಸಿದ್ದರೂ ಇದೀಗ ಮತ್ತೆ ನೋಟಿಫಿಕೇಶನ್‌ ಜಾರಿ ಮಾಡುವ ಮೂಲಕ ಆತಂಕ ಸೃಷ್ಠಿಸಿದೆ. ಇದೆಲ್ಲವೂ ನಮ್ಮ ಸಂಸದರು, ಶಾಸಕರ ಮೌನದಿಂದಲೇ ಆಗುತ್ತಿದೆ ಎಂದು ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಹೆಬ್ರಿಯ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಮಲೆನಾಡು ವ್ಯಾಪ್ತಿಯ ಸಂಸದರು ಲೋಕಸಭೆಯಲ್ಲಿ ಮಾತನಾಡಿ ರಾಜ್ಯಕ್ಕೆ ಆಗುವ ಅನ್ಯಾಯವನ್ನು ತಪ್ಪಿಸಲಿ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜನರ ಮನವಿಗೆ ಸ್ಪಂದಿಸಿ ಕರ್ನಾಟಕ ರಾಜ್ಯದಲ್ಲಿ ಕಸ್ತೂರಿ ರಂಗನ್‌ ವರದಿಯನ್ನೇ ತಿರಸ್ಕರಿಸಿದ್ದರು. ಅದಕ್ಕಾಗಿ ಅಂದಿನ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಂದು ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್‌ ಸೊರಕೆಯವರ ನೇತೃತ್ವದಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಗ್ರಾಮ ಗ್ರಾಮದಲ್ಲಿ ಅಧ್ಯಯನ ಮಾಡಿ ಸರ್ಕಾರಕ್ಕೆ ಜನಾಭಿಪ್ರಾಯವನ್ನು ನೀಡಿದ್ದರು. ಅದರ ಅಭಿಪ್ರಾಯದಂತೆ ಕರ್ನಾಟಕ ಸರ್ಕಾರ ಕಸ್ತೂರಿ ರಂಗನ್‌ ವರದಿಯನ್ನೇ ತಿರಸ್ಕರಿಸಿದೆ. ಡಿ.ಕೆ. ಶಿವಕುಮಾರ್‌ ಸರ್ಕಾರ ಕೂಡ ಕಸ್ತೂರಿರಂಗನ್‌ ವರದಿಯನ್ನು ತಿರಸ್ಕರಿಸಲಿದೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ರಾಜ್ಯದ ಸಂಸದರ ಮೌನ
ಕಸ್ತೂರಿ ರಂಗನ್‌ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಎಲ್ಲಾ ಸಂಸದರು ಬಿಜೆಪಿಯವರೇ ಆಗಿದ್ದಾರೆ. ವರದಿ ಜಾರಿಗೊಳಿಸುವಾಗ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾಗಿದ್ದರು. ಆಗಲೂ ಅವರು ಮೌನವಾಗಿದ್ದರು. ಮೈಸೂರು ಸಂಸದ ಯಧುವೀರ ಶ್ರೀಕಂಠದತ್ತ ಒಡೆಯರ್‌, ಮಂಗಳೂರು ಸಂಸದ ಬ್ರಿಜೇಶ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಕ್ಷೇತ್ರದಲ್ಲಿ ಕಸ್ತೂರಿರಂಗನ್‌ ವರದಿ ನೋಟಿಫಿಕೇಶನ್‌ ಜಾರಿಯಾಗಿದೆ. ಜನತೆ ಆತಂಕದಲ್ಲಿದ್ದಾರೆ. ಆದರೂ ಸಂಸದರು, ಶಾಸಕರು ತುಟಿ ಬಿಚ್ಚುತ್ತಿಲ್ಲ, ಪದೇ ಪದೇ ನೋಟಿಫೀಕೇಶನ್‌ ಜಾರಿ ಮಾಡಿ ಮತ್ತೆ ಮತ್ತೆ ಭಯ ಹುಟ್ಟಿಸುತ್ತಿದ್ದಾರೆಯೇ ಹೊರತು ಜನರ ಸಮಸ್ಯೆ ದೂರ ಮಾಡುತ್ತಿಲ್ಲ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದರು.

ಸಂಸದರೇ ಹೊಣೆ
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುವಾರ 60 ದಿನಗಳ ಅವಧಿಯ ನೋಟಿಫೀಕೇಶನ್‌ ಜಾರಿ ಮಾಡಿದ್ದಾರೆ. ಜನರಿಗೆ ಅನ್ಯಾಯವಾದರೆ ಅದಕ್ಕೆಲ್ಲ ಸಂಸದರೆ ಹೊಣೆಯಾಗುತ್ತಾರೆ. ಕೇಂದ್ರ ಸರ್ಕಾರದಲ್ಲಿ ಕಸ್ತೂರಿರಂಗನ್‌ ವರದಿಯನ್ನು ರದ್ದುಪಡಿಸಿ ಜನರ ಆತಂಕ ದೂರ ಮಾಡಿ ಎಂದು ಒತ್ತಾಯಿಸಿದ ಮಂಜುನಾಥ ಪೂಜಾರಿ ಅವರು ಡಿ.ಕೆ. ಶಿವಕುಮಾರ್‌ ನೇತೃತ್ವದ ಸರಕಾರ ಜನರ ಭಾವನೆ ಅರ್ಥ ಮಾಡಿಕೊಂಡು ಸಮಸ್ಯೆಯನ್ನು ದೂರ ಮಾಡಲಿದೆ. ನಾವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಲಿದ್ದೇವೆ. ಬಿಜೆಪಿ ಸರಕಾರ ಮತ್ತು ನಾಯಕರು ಏನು ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.

ಕೇಂದ್ರದ ಕಾಂಗ್ರೆಸ್‌ ಸರ್ಕಾರ ಅರಣ್ಯ ಹಕ್ಕು ಕಾಯಿದೆ, ಆಹಾರ ಭದ್ರತಾ ಕಾಯಿದೆ, ಅಕ್ರಮ ಸಕ್ರಮ ಕಾನೂನು ಜಾರಿ ಮಾಡಿ ಜನರ ಬದುಕು ಭದ್ರಗೊಳಿಸಿದೆ. ಆದರೆ, ಬಿಜೆಪಿ ಸರ್ಕಾರ ಡೀಮ್ಡ್‌ ಫಾರೆಸ್ಟ್‌, ಕಸ್ತೂರಿರಂಗನ್‌ ಮೊದಲಾದ ಜನವಿರೋಧಿ ಕಾನೂನುಗಳನ್ನು ಜಾರಿ ಮಾಡಿ ಜನರ ಬದುಕು ಛಿದ್ರಗೊಳಿಸುತ್ತಿದೆ. ಪ್ರಾಣಿಗಳಿಗಿರುವ ಬದುಕುವ ಹಕ್ಕು ಜನರಿಗೆ ಇಲ್ಲವೆ, ಕೇಂದ್ರ ಸರ್ಕಾರದ 7ನೇ ನೋಟಿಫಿಕೇಶನ್‌ ಕೂಡ ರಾಜ್ಯ ಸರ್ಕಾರ ತಿರಸ್ಕರಿಸುತ್ತದೆ. ಚುನಾವಣೆಯ ಹುನ್ನಾರ ಬಿಜೆಪಿ ಕೈಬಿಡಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುನಿಯಾಲು ಗೋಪಿನಾಥ ಭಟ್‌, ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್‌ ಕೆ. ಅಡ್ಯಂತಾಯ, ಹೆಬ್ರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್‌, ಪ್ರಮುಖರಾದ ಚಂದ್ರಶೇಖರ ಬಾಯರಿ, ಎಚ್.‌ ಜನಾರ್ಧನ್‌, ದಿನೇಶ ಶೆಟ್ಟಿ ಚಾರ, ಹೆಚ್.ಬಿ. ಸುರೇಶ್‌, ರಾಘವೇಂದ್ರ ನಾಯ್ಕ್‌, ಸಂತೋಷ ನಾಯಕ್‌ ಕನ್ಯಾನ, ಗುಳ್ಕಾಡು ಭಾಸ್ಕರ ಶೆಟ್ಟಿ, ನಿಲೇಶ ಪೂಜಾರಿ ಉಪಸ್ಥಿತರಿದ್ದರು.







































error: Content is protected !!
Scroll to Top