ಕಾರ್ಕಳ : ಕಾರ್ಕಳ ಶಿವತಿಕೆರೆಯಲ್ಲಿ ಜು. 12ರಂದು ನಡೆದ ಅಪಘಾತದಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಕಾರ್ಕಳ ತಾಲೂಕು ಹೋಬಳಿ ಕಂದಾಯ ನಿರೀಕ್ಷಕ (RI) ಶಿವಪ್ರಸಾದ್ ರಾವ್ (58 ವ) ಶುಕ್ರವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇಬ್ಬರೂ ಮಕ್ಕಳು ಇಂಜಿನಿಯರ್ ಉದ್ಯೋಗಿಗಳಾಗಿದ್ದಾರೆ.
ಮೂಲತಃ ಕಾರ್ಕಳ ನಂದಳಿಕೆಯ ಶಿವಪ್ರಸಾದ್ ರಾವ್ ಅವರು ಹಾಸನದಲ್ಲಿ ಬಿಇ (ಎಲೆಕ್ಟ್ರೀಕಲ್ ಇಂಜಿನೀಯರಿಂಗ್) ಪೂರೈಸಿದ್ದರು.
ತಾಯಿ ಶಿಕ್ಷಕಿಯಾಗಿದ್ದು ಕರ್ತವ್ಯದ ವೇಳೆಯೇ ನಿಧನರಾದ ಹಿನ್ನೆಲೆಯಲ್ಲಿ ಶಿವಪ್ರಸಾದ್ ರಾವ್ ಅವರಿಗೆ ಅನುಕಂಪದ ಆಧಾರದ ಮೇರೆಗೆ ಸರಕಾರಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು.
ಜನಸ್ನೇಹಿ
ದಶಕಗಳ ಕಾಲ ಕಾರ್ಕಳ ಕಸಬ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ ಶಿವಪ್ರಸಾದ್ ಅವರು ಜನಸ್ನೇಹಿ, ತಕ್ಷಣದ ಸ್ಪಂದನೆ ಮೂಲಕ ಜನಾನುರಾಗಿಯಾಗಿದ್ದರು. ಕೊರೋನಾ ಕಾಲದಲ್ಲಿ ಹಗಲಿರುಳೆನ್ನದೇ ಕರ್ತವ್ಯ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮಂತ್ರಿಗಳು, ಅಧಿಕಾರಿಗಳು ಕಾರ್ಕಳ ಬಂದಾಗ ಶಿಷ್ಟಾಚಾರ ಪಾಲನೆ ಜವಾಬ್ದಾರಿಯನ್ನು ಶಿವಪ್ರಸಾದ್ ಅವರೇ ವಹಿಸುತ್ತಿದ್ದರು. 6 ವರ್ಷಗಳ ಹಿಂದೆ ಕಂದಾಯ ನಿರೀಕ್ಷಕರಾಗಿ ಪದೋನ್ನತಿಗೊಂಡಿದ್ದು 2 ವರ್ಷದಲ್ಲಿ ಸೇವಾ ನಿವೃತ್ತಿ ಹೊಂದಲಿದ್ದರು.

ಅಂತಿಮ ದರ್ಶನ
ಸಾರ್ವಜನಿಕರು 2 ಗಂಟೆಗೆ ತಾಲೂಕು ಕಚೇರಿಯಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಬಹುದೆಂದು ಕಂದಾಯ ಇಲಾಖೆಯವರು ತಿಳಿಸಿದ್ದಾರೆ.































