ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಮತ್ತು ಕ್ರೀಡಾ ಸಂಕೀರ್ಣಗಳಂತಹ ಸೂಕ್ಷ್ಮ ಸಾರ್ವಜನಿಕ ಪ್ರದೇಶಗಳಿಂದ ಅಕ್ರಮಣಕಾರಿ ಅಥವಾ ರೇಬಿಸ್ ಪೀಡಿತ ಬೀದಿನಾಯಿಗಳನ್ನು ಕೊಲ್ಲದೇ ಅವುಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೀಡಿರುವ ಆದೇಶವನ್ನು ಪರಿಪಾಲಿಸುವ ದೃಷ್ಟಿಯಿಂದ ಸರಕಾರವು ಬೀದಿನಾಯಿಗಳ ನಿರ್ವಹಣೆ ಮತ್ತು ಕಡಿತದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಹಳ ವರ್ಷಗಳಿಂದ ಜ್ಯಾರಿಯಲ್ಲಿದ್ದ ಕಾನೂನಿಗೆ ಪೂರಕವಾಗಿ ಪ್ರಾಣಿ ಸಂತಾನ ನಿಯಂತ್ರಣ ನಿಯಮಗಳು- 2023 ಎಂಬ ನಿಯಮವನ್ನು ಕರ್ನಾಟಕದಾದ್ಯಂತ ಜ್ಯಾರಿಗೆ ತಂದಿರುತ್ತದೆ.
ಈ ಪ್ರಕಾರ ಸರಕಾರವು ಬೀದಿನಾಯಿಗಳನ್ನು ಕೊಲ್ಲುವುದನ್ನು ಸಂಪೂರ್ಣವಾಗಿ ನಿಷೇದಿಸಿ ಅದರ ಬದಲಾಗಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆ ಹಾಕಿಸಿ, ಮತ್ತೆ ಅದೇ ಸ್ಥಳಕ್ಕೆ ಬಿಡುವ ಪದ್ದತಿಯನ್ನು ಕಡ್ಡಾಯಗೊಳಿಸಿರುತ್ತದೆ. ಈ ಬಗ್ಗೆ ಕರ್ನಾಟಕದ ಎಲ್ಲಾ ಸ್ಥಳೀಯ ಸಂಸ್ಥೆಗಳು ಮೇಲಿನ ನಿಯಮಗಳನ್ನು ಪಾಲಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರವು ತನ್ನ ನಡವಳಿಗಳು ಹಾಗೂ ಸುತ್ತೋಲೆಗಳ ಮುಖಾಂತರ ಸ್ಪಷ್ಟಪಡಿಸಿರುತ್ತದೆ. ಇದರಂತೆ ರಾಜ್ಯದ ಎಲ್ಲಾ ಪುರಸಭೆ/ನಗರಸಭೆ/ಪಟ್ಟಣ ಪಂಚಾಯತ್/ನಗರಪಾಲಿಕೆಗಳ ವ್ಯಾಪ್ತಿಯ ಬೀದಿ ನಾಯಿಗಳ ಸಂತಾನ ನಿಯಂತ್ರಣ ಯೋಜನೆಯನ್ನು ಕೈಗೊಳ್ಳುವುದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ. ಈ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವುದರಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣವಾಗುವುದರ ಜೊತೆಗೆ ನಾಯಿ ಕಡಿತ ಮತ್ತು ರೇಬಿಸ್ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುವುದು. ಈ ಯೋಜನೆಯ ಪ್ರಕಾರ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಹಾ ಈ ಯೋಜನೆಯನ್ನು ಕೈಗೊತ್ತಿಕೊಳ್ಳಲು ನಿಯಮಾನುಸಾರವಾಗಿ ಅನುಮತಿಯನ್ನು ಪಡೆಯಬಹುದಾಗಿದೆ.
ಈ ಮೇಲ್ಕಾಣಿಸಿದ ಯೋಜನೆಯಂತೆ ಪ್ರತಿ ವರ್ಷ ಸ್ಥಳೀಯ ಸಂಸ್ಥೆಗಳು ತಮ್ಮ ಆಯವ್ಯಯದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಅಗತ್ಯವಿರುವ ಹಣಕಾಸನ್ನು ಹಂಚಿಕೆ ಮಾಡಿಕೊಳ್ಳಬೇಕು. ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಸಂತಾನ ನಿಯಂತ್ರಣ ಶಸ್ತçಚಿಕಿತ್ಸೆ ನಡೆಸಲಾದ ನಂತರ ಲಸಿಕೆ ನೀಡಿ ನಾಯಿಗಳನ್ನು ಯಾವ ಪ್ರದೇಶದಿಂದ ಹಿಡಿಯಲಾಗಿತ್ತೋ ಅದೇ ಪ್ರದೇಶದಲ್ಲಿ ವಾಪಸ್ಸು ಬಿಡಬೇಕಾಗಿರುತ್ತದೆ. ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಕೈಗೊತ್ತಿಕೊಂಡ ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಂಪೂರ್ಣ ದಾಖಲಾತಿಗಳನ್ನು ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಸ್ಥಳೀಯ ಮಟ್ಟದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ನಿಗಾವಣೆ ಸಮಿತಿಯನ್ನು ಆಯುಕ್ತರು/ಮುಖ್ಯಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಪಶುಸಂಗೋಪನೆ, ಆರೋಗ್ಯ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಪ್ರತಿನಿಧಿಗಳನ್ನು ಒಳಗೊಂಡಂತೆ ರಚಿಸಿಕೊಂಡು ಒಟ್ಟಾರೆಯಾಗಿ ಯೋಜನೆಯನ್ನು ಮೇಲುಸ್ತುವಾರಿ ಮಾಡಬೇಕಾಗುತ್ತದೆ.

ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಮೂಲ ಸಂಪನ್ಮೂಲದಿಂದ ಪ್ರತಿ ವರ್ಷ ಆಯವ್ಯಯದಲ್ಲಿ ಸೂಕ್ತವಾದ ಅನುದಾನವನ್ನು ಕಡ್ಡಾಯವಾಗಿ ನಿಗದಿಪಡಿಸಿಕೊಂಡು ಕೆ.ಟಿ.ಪಿ.ಪಿ. ಕಾಯ್ದೆ ಪ್ರಕಾರ ಅನುಷ್ಠಾನಗೊಳಿಸಬೇಕಾಗುತ್ತದೆ. ಸರಕಾರದ ವಿವಿಧ ಸುತ್ತೋಲೆಯಲ್ಲಿನ ನಿರ್ದೇಶನವನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷತನದಿಂದ, ಲೋಪದೋಷಗಳು/ಬೇಜವಾಬ್ದಾರಿ ಉಂಟಾದಲ್ಲಿ ಸರಕಾರವು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರವಾದ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ.

























