ಜಾಗದ ವಿಚಾರವಾಗಿ ಗಲಾಟೆ, ಕತ್ತಿಯಿಂದ ಹಲ್ಲೆ

ಕಾರ್ಕಳ : ಜಾಗದ ವಿಚಾರವಾಗಿ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಘಟನೆ ಮಾಳ ಗ್ರಾಮದ ಹುಕ್ರಟ್ಟೆಯಲ್ಲಿ ನಡೆದಿದೆ.
ಮಿಯ್ಯಾರು ಗ್ರಾಮದ ಅನಿಲ್‌ ಮಸ್ಕರೇನ್ಹಸ್‌ ಅವರು ಹುಕ್ರಟ್ಟೆಯಲ್ಲಿ ಜಾಗ ಮತ್ತು ಮನೆ ಹೊಂದಿದ್ದು, ಅಲ್ಲಿಗೆ ಹೋಗಿ ಬರುತ್ತಾ ಇರುತ್ತಾರೆ. ಅವರು ಅಲ್ಲಿಗೆ ಹೋದಾಗ ನೆರೆಮನೆಯ ನಿವಾಸಿ ಗಣೇಶ ಎಂಬಾತನು ಇದು ತನ್ನ ಜಾಗ ಎಂದು ಜಗಳ ಮಾಡುತ್ತಿದ್ದನು. ಜು.15ರಂದು ಅನಿಲ್‌ ಅವರು ಅಲ್ಲಿ ಹುಲ್ಲು ಮತ್ತು ಕಳೆಗಿಡಗಳನ್ನು ತೆಗೆಯುತ್ತಿದ್ದಾಗ ಗಣೇಶನು ಬಂದು ಈ ಜಾಗ ನನಗೆ ಸೇರಿದ್ದು, ಇಲ್ಲಿ ಯಾಕೆ ಕೆಲಸ ಮಾಡುತ್ತೀಯಾ ಎಂದು ಆಕ್ಷೇಪಿಸಿದ್ದಾನೆ. ಆಗ ಅನಿಲ್‌ ನಾನು ನನ್ನ ಜಾಗದಲ್ಲಿ ಕೆಲಸ ಮಾಡುತ್ತಾ ಇದ್ದೇನೆ ಎಂದು ಹೇಳಿ ಮನೆಯೊಳಗೆ ಹೋದಾಗ ಆಪಾದಿತನು ಅವಾಚ್ಯ ಶಬ್ದಗಳಿಂದ ಬೈದು 2 ಕತ್ತಿಗಳನ್ನು ತೆಗೆದುಕೊಂಡು ಬಂದಾಗ ಅನಿಲ್‌ ಹೆದರಿ ಮನೆಯೊಳಗೆ ಹೋಗಿ ಬಾಗಿಲು ಹಾಕಿದ್ದಾರೆ. ಆಪಾದಿತನು ಅನಿಲ್‌ ಅವರಿಗೆ ಹೊರಗೆ ಬಾ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಮನೆಯ ಸಿಟ್‌ ಔಟ್‌ಗೆ ಅಕ್ರಮ ಪ್ರವೇಶ ಮಾಡಿ ಬಾಗಿಲಿಗೆ ತುಳಿದಿದ್ದು, ಮನೆಯ ಹೊರಗೆ ಇಟ್ಟಿದ್ದ ಅನಿಲ್‌ ಅವರ ಸ್ಕೂಟರನ್ನು ದೂಡಿ ಹಾಕಿದ್ದಾರೆ. ಈ ವೇಳೆ ಅನಿಲ್‌ ಅವರು ಹೊರಗೆ ಬಂದಾಗ ಆಪಾದಿತನು ಕತ್ತಿಯಿಂದ ಕಡಿಯಲು ಬಂದಿದ್ದು, ಅನಿಲ್‌ ಅವರು ತಡೆಯಲು ಕೈ ಅಡ್ಡ ಹಿಡಿದಿದ್ದು ಪರಿಣಾಮವಾಗಿ ಕೈಗೆ ಗಾಯವಾಗಿರುತ್ತದೆ. ಅನಿಲ್‌ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top