ಬೆಂಗಳೂರು : 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ನೇಮಕಾತಿ ಸಂಬಂಧ ಸರ್ಕಾರ ಕರಡು ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಆಕ್ಷೇಪಣೆಗೆ 15 ದಿನಗಳ ಅವಕಾಶವನ್ನು ಸರ್ಕಾರ ನೀಡಿದೆ. ಕಲ್ಯಾಣ ಕರ್ನಾಟಕಕ್ಕೆ 6905 ಹಾಗೂ ಇತರೆ ಜಿಲ್ಲೆಗಳಿಗೆ 8095 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಅದಕ್ಕಾಗಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ) (ವಿಶೇಷ) ನಿಯಮಗಳು 2026ನ್ನು ಪ್ರಕಟಿಸಲಾಗಿದೆ. ಈ ಕರಡು ಅಧಿಸೂಚನೆಯಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-I ಮತ್ತು II), ಗಣಕ ವಿಜ್ಞಾನ ಶಿಕ್ಷಕರು (ಹೊಸ ವೃಂದ) ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ಉದ್ದೇಶಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ 16 ಸದಸ್ಯರ ಪರೀಕ್ಷಾ ಪ್ರಾಧಿಕಾರ ರಚಿಸಲಾಗಿದೆ.
ಅಧಿಸೂಚನೆಯಲ್ಲಿರುವ ನಿಯಮಾವಳಿಯಂತೆ ಅಭ್ಯರ್ಥಿಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಉಳಿದಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ವೇಟೇಜ್ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಅಭ್ಯರ್ಥಿಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ಪತ್ರಿಕೆಯಲ್ಲೂ ಕನಿಷ್ಠ ಶೇ. 35 ಅಂಕ ಗಳಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಪರೀಕ್ಷೆಯು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ನಡೆಯಲಿದೆ. ಇನ್ನು, ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕಿದೆ. ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1 ಮತ್ತು ವಿಶೇಷ ಚೇತನರಿಗೆ 43 ವರ್ಷಗಳು, ಪ್ರವರ್ಗ-2ಎ, 2ಬಿ, 3ಎ, 3ಬಿಗೆ 41 ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ವಸ್ತು ನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರಲಿದೆ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕರಡು ನಿಯಮಗಳ ಕುರಿತಂತೆ ಆಕ್ಷೇಪಣೆಗಳಿದ್ದರೆ ಅಥವಾ ಸಲಹೆಗಳಿದ್ದರೆ ರಾಜ್ಯಪತ್ರ ಪ್ರಕಟವಾದ 15 ದಿನಗಳ ಒಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.
ಹುದ್ದೆಗಳ ವಿವರ
-ಇತರೆ ಜಿಲ್ಲೆ
ಜಿಪಿಟಿ- 5272
ಪ್ರೌಢಶಾಲೆ- 2286
PST- 100
ಕಂಪ್ಯೂಟರ್ ಸೈನ್ಸ್-200
PE ಗ್ರೇಡ್ 1- 131
PE ಗ್ರೇಡ್- 2- 106
-ಕಲ್ಯಾಣ ಕರ್ನಾಟಕ
ಜಿಪಿಟಿ- 3228
ಪ್ರೌಢಶಾಲೆ- 2214
PST- 800
ಕಂಪ್ಯೂಟರ್ ಸೈನ್ಸ್-300
PE ಗ್ರೇಡ್ 1- 319
PE ಗ್ರೇಡ್- 2- 44































