ಯುವತಿಯ ಹತ್ಯೆ ಪ್ರಕರಣ – ಇಲಿಪಾಷಾಣ ಸೇವಿಸಿದ ಆರೋಪಿ

ಮಂಗಳೂರು : ಬಿ.ಸಿ ರೋಡಿನಲ್ಲಿ ಗುರುವಾರ ನಡೆದ ಯುವತಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ಸಂಜೆ 21 ವರ್ಷದ ಯುವತಿಯೊಬ್ಬಳನ್ನು ಯುವಕನೊಬ್ಬ ತಲವಾರು ಮೂಲಕ ದಾಳಿ ನಡೆಸಿ ಕೊಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಶೇಷ ಪೊಲೀಸ್ ತಂಡ ರಚಿಸುವ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ವಿಚಾರಣೆ ವೇಳೆ ಆತ ಇಲಿಪಾಷಾಣ ಸೇವಿಸಿರುವುದಾಗಿ ಹೇಳಿದ್ದು, ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದೆ ಅಗತ್ಯ ಕಾನೂನು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ತಂದೆಗೆ ಕರೆ ಮಾಡಿದ್ದ ಆರೋಪಿ
ಕೃತ್ಯ ಎಸಗಿದ ನಂತರ ಆರೋಪಿ ಚೇತನ್ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾನೆ. ಈ ಮಧ್ಯೆ ಆತ ಲಾವಣ್ಯ ತಂದೆಗೆ ಕರೆ ಮಾಡಿ, “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ಈಗ ನಾನೂ ಸಹ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದ ಎನ್ನಲಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆದ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಮಂಜೂರು ಪಚ್ಚನಾಡಿ ಬಳಿ ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ.

ತಿಂಗಳ ಹಿಂದೆಯೇ ನಡೆದಿತ್ತು ಗಲಾಟೆ
ಪೊಲೀಸ್ ಮೂಲಗಳ ಪ್ರಕಾರ, ಒಂದು ತಿಂಗಳ ಹಿಂದೆಯೂ ಆರೋಪಿ ಚೇತನ್ ಲಾವಣ್ಯ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದ. ಆ ಸಂದರ್ಭದಲ್ಲಿ ಆಸ್ಪತ್ರೆಯ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು. ಆದರೆ, ಆ ಸಮಯದಲ್ಲಿ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗದೆ ಇರುವುದು ಈ ದುರಂತಕ್ಕೆ ಕಾರಣವಾಯಿತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.































































error: Content is protected !!
Scroll to Top