ದೆಹಲಿ : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಮುದ್ರ ಭದ್ರತಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಸಮಗ್ರ ಯೋಜನೆ (Seafarer First)ಯನ್ನು ಜಾರಿಗೆ ತಂದಿದೆ. ಪರ್ಷಿಯನ್ ಕೊಲ್ಲಿ, ಹೋರ್ಮುಜ್ ಜಲಸಂಧಿ ಮತ್ತು ಒಮಾನ್ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ವಿದೇಶಾಂಗ ಸಚಿವಾಲಯ, ಭಾರತೀಯ ನೌಕಾಪಡೆ, ಹಡಗು ಸಾಗಣೆ ಮಹಾನಿರ್ದೇಶನಾಲಯ, ಇರಾನ್ ಹಾಗೂ ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಅಧಿಕಾರಿಗಳು ಭಾಗವಹಿಸಿದ್ದರು.
ಯೋಜನೆಯ ಪ್ರಮುಖ ಅಂಶಗಳು
ಈ ಯೋಜನೆಯಡಿ ವಿಶೇಷ ನೇರ ಮೇಲ್ವಿಚಾರಣೆಯ ಡಿಜಿಟಲ್ ಮಾಹಿತಿ ವ್ಯವಸ್ಥೆ ನಿರ್ಮಿಸಲಾಗುತ್ತದೆ. ಇದರಲ್ಲಿ ಹಡಗಿನ ಪ್ರಸ್ತುತ ಸ್ಥಳ, ಮಾಲೀಕತ್ವ, ಸಾಗಿಸುತ್ತಿರುವ ಸರಕು, ಸಿಬ್ಬಂದಿಯ ಸಂಖ್ಯೆ, ಭಾರತೀಯ ನಾವಿಕರ ಮಾಹಿತಿ, ಭದ್ರತಾ ಅಪಾಯದ ಮಟ್ಟ, ಮುಂದಿನ ಬಂದರು ಹಾಗೂ ಪ್ರಯಾಣದ ವಿವರಗಳು ಲಭ್ಯವಾಗಲಿವೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ.

ದಾಳಿಯ ಬಳಿಕ ಸರ್ಕಾರದ ಕ್ರಮ
ಇತ್ತೀಚೆಗೆ ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಒಟ್ಟು 30 ಭಾರತೀಯ ನಾವಿಕರು ಇದ್ದರು. ಈ ದಾಳಿಯಲ್ಲಿ ಭಾರತೀಯ ನಾವಿಕ ರೋಹನ್ ಕುಮಾರ್ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮತ್ತೊಂದು ಹಡಗಿನಲ್ಲಿದ್ದ 9 ಭಾರತೀಯರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ.
ಕುಟುಂಬಗಳಿಗೆ ವಿಶೇಷ ನೆರವು
ದಾಳಿಯಿಂದ ತೊಂದರೆಗೊಳಗಾದ ಪ್ರತಿಯೊಬ್ಬ ಭಾರತೀಯ ನಾವಿಕರ ಕುಟುಂಬಕ್ಕೆ ಒಬ್ಬ ವಿಶೇಷ ಸಂಪರ್ಕಾಧಿಕಾರಿ ನೇಮಕ ಮಾಡಲಾಗುತ್ತದೆ. ಅವರು ವೈದ್ಯಕೀಯ ಮಾಹಿತಿ, ಪ್ರಯಾಣದ ದಾಖಲೆಗಳು, ಕುಟುಂಬಕ್ಕೆ ನೆರವು, ಭಾರತಕ್ಕೆ ಸುರಕ್ಷಿತವಾಗಿ ಕರೆತರುವುದು, ಬಾಕಿ ವೇತನ, ವಿಮೆ ಹಾಗೂ ಪರಿಹಾರದ ಪ್ರಕ್ರಿಯೆ ಸೇರಿದಂತೆ ಎಲ್ಲ ವಿಚಾರಗಳಲ್ಲಿ ನೆರವಾಗಲಿದ್ದಾರೆ.
24 ಗಂಟೆಗಳ ಸಹಾಯವಾಣಿ
ಭಾರತೀಯ ನಾವಿಕರು ಹಾಗೂ ಅವರ ಕುಟುಂಬಗಳಿಗಾಗಿ 24 ಗಂಟೆಗಳ ಸಹಾಯವಾಣಿ ಆರಂಭಿಸಲಾಗಿದೆ. ದೂರವಾಣಿ, ವಾಟ್ಸಾಪ್ ಹಾಗೂ ಇ-ಮೇಲ್ ಮೂಲಕ ಯಾವುದೇ ಸಮಯದಲ್ಲೂ ಸಹಾಯ ಪಡೆಯಬಹುದಾಗಿದೆ.
ಇದಲ್ಲದೆ, ಸಂಘರ್ಷಪೀಡಿತ ಪ್ರದೇಶದಲ್ಲಿ ಸಂಚರಿಸುವ ಪ್ರತಿಯೊಂದು ಹಡಗು ಪ್ರಯಾಣ ಆರಂಭಿಸುವ ಮೊದಲು ಹೊಸ ಭದ್ರತಾ ಮೌಲ್ಯಮಾಪನ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಹಡಗು ಮಾಲೀಕರು ಹಾಗೂ ಸಿಬ್ಬಂದಿ ನೇಮಕಾತಿ ಸಂಸ್ಥೆಗಳು ಭಾರತೀಯ ನಾವಿಕರಿಗೆ ಸಮರ್ಪಕ ಭದ್ರತೆ, ಮಾಹಿತಿ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿರುವುದನ್ನು ಖಚಿತಪಡಿಸಿ ವರದಿ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.































