ಕಂಬಳ ಆಯೋಜಕರು- ಕೋಣಗಳ ಮಾಲೀಕರ ಜತೆ ಸಮಾಲೋಚನೆ ನಡೆಸಿ – ಸುನಿಲ್ ಕುಮಾರ್
ಕಾರ್ಕಳ : ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿಸುವ ಬಗ್ಗೆ ಈಗ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸರ್ಕಾರವೇಕೋ ಮೈಸೂರಿನಲ್ಲಿ ಕಂಬಳ ನಡೆಸಲೇಬೇಕೆಂಬ ಹಠಕ್ಕೆ ಬಿದ್ದಿರುವುದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಆದರೆ ಈ ಬಗ್ಗೆ ನಿರ್ಣಯಕ್ಕೆ ಬರುವುದಕ್ಕೆ ಮೊದಲು ಎಲ್ಲ ದೃಷ್ಟಿಕೋನಗಳಿಂದಲೂ ಯೋಚನೆ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಂಬಳ ಕರಾವಳಿಯ ಸಾಂಸ್ಕೃತಿಕ ಕ್ರೀಡೆ. ಇದಕ್ಕೆ ಅದರದ್ದೇ ಆದ ಇತಿಹಾಸ ಹಾಗೂ ಸ್ಥಳೀಯ ಮೆರಗುಗಳಿವೆ. ಭಾಷೆ, ಸಂಸ್ಕ್ರತಿ, ಕಲೆ, ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದು ಮಾತ್ರವಲ್ಲ, ಅದರ ಆಕರ್ಷಣೆ ಹಾಗೂ ಮೆಚ್ಚುವಿಕೆಯಲ್ಲೂ ವ್ಯತ್ಯಾಸಕ್ಕೆ ಒಳಪಡುತ್ತವೆ. ಹೀಗಾಗಿ ಕರಾವಳಿಯ ಕ್ರೀಡೆಯನ್ನು ದಸರಾ ಉತ್ಸವದ ಕಾರಣಕ್ಕಾಗಿ ಮೈಸೂರಿಗೆ ರಫ್ತು ಮಾಡುವಾಗ ಅದರಿಂದಾಗುವ ಒಟ್ಟಾರೆ ಪರಿಣಾಮವನ್ನೂ ನಿಷ್ಕರ್ಷೆಗೆ ಒಳಪಡಿಸುವುದು ಅತ್ಯಗತ್ಯ. ಹೀಗಾಗಿ ಮೈಸೂರಿನಲ್ಲಿ ಕಂಬಳ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಸರ್ಕಾರ ಮೈಸೂರಿನ ಜನಪ್ರತಿನಿಧಿಗಳ ಜತೆಗೆ ಚರ್ಚೆ ನಡೆಸುವುದಕ್ಕೆ ಮುನ್ನ ಕರಾವಳಿಯ ಕಂಬಳ ಆಯೋಜಕರು ಹಾಗೂ ಕೋಣಗಳ ಮಾಲೀಕರ ಜತೆಗೂ ಸಮಾಲೋಚನೆ ನಡೆಸಿ ಆ ಬಳಿಕ ನಿರ್ಧಾರಕ್ಕೆ ಬರುವುದು ಒಳಿತು ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

ವೀಡಿಯೋಗಾಗಿ : https://www.facebook.com/share/v/1EaaeeHGHe/
8 ಕೋಟಿ ರೂ. ಖರ್ಚು !
ಈಗಾಗಲೇ ಲಭಿಸಿರುವ ಮಾಹಿತಿ ದಸರಾದಲ್ಲಿ ನಡೆಯುವ ಕಂಬಳಕ್ಕೆ ಸುಮಾರು 8 ಕೋಟಿ ರೂ. ಖರ್ಚು ಮಾಡುವುದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಮಾಹಿತಿಯನ್ನು ಕೇಳಿ ನನಗೆ ಅಚ್ಚರಿಯಾಯ್ತು. ಏಕೆಂದರೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಕಂಬಳಗಳಿಗೆ ಈ ಸರ್ಕಾರ ಬಂದ ನಂತರ ತಲಾ 2.5 ಲಕ್ಷ ರೂ. ನೀಡುವುದಕ್ಕೂ ಹಿಂದೆ ಮುಂದೆ ನೋಡಿದೆ. ನಾವು ಈ ಬಗ್ಗೆ ಪಕ್ಷಾತೀತವಾಗಿ ಸದನದಲ್ಲಿ ಮಾತನಾಡಿದ್ದೇವೆ. ಹೀಗಾಗಿ ಜಿಲ್ಲಾ ಮಟ್ಟದ 20 ಕಂಬಳಿಗೆ ತಲಾ 25 ಲಕ್ಷ ರೂ. ನೀಡುವುದಕ್ಕೆ ರಾಜ್ಯ ಸರ್ಕಾರ ಮೊದಲು ನಿರ್ಧಾರ ತೆಗೆದುಕೊಳ್ಳಬೇಕು. ಆಗ ಕಂಬಳಗಳ ವೈಭವ ಇನ್ನಷ್ಟು ಹೆಚ್ಚುತ್ತದೆ. ಕಂಬಳವನ್ನು ನೋಡುವುದಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನರು ಬರುವಂತಾಗುವ ವಾತಾವರಣವನ್ನು ಸ್ಥಳೀಯ ಭಾಗಿದಾರಿಕೆಯಲ್ಲಿ ಸರ್ಕಾರ ನಿರ್ಮಾಣ ಮಾಡಬೇಕು. ಹೀಗಾಗಿ ಮೈಸೂರು ದಸರಾದಲ್ಲಿ ಕಂಬಳ ನಡೆಸುವ ತೀರ್ಮಾನಕ್ಕೆ ಮುನ್ನ ಇಲ್ಲಿನ ಆಯೋಜಕರು ಹಾಗೂ ಕೋಣದ ಮಾಲೀಕರ ಜತೆಗೆ ಮೊದಲು ಸರ್ಕಾರ ಸಭೆ ನಡೆಸಲಿ ಎಂದು ಸ್ಥಳೀಯ ಜನಪ್ರತಿನಿಧಿಯಾಗಿ, ಕಂಬಳದ ಆಯೋಜಕನೂ ಆಗಿ ನಾನು ಒತ್ತಾಯಿಸುತ್ತೇನೆ ಎಂದು ಸುನಿಲ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
























