ಬಂಟ್ವಾಳದಲ್ಲಿ ಯುವತಿಯ ಬರ್ಬರ ಹತ್ಯೆ : FIR ನಲ್ಲಿ ಏನಿದೆ ?

ಮಂಗಳೂರು : ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳನ್ನು ಯುವಕನೋರ್ವ ಕತ್ತಿಯಿಂದ ಭೀಕರವಾಗಿ ದಾಳಿ ನಡೆಸಿ ಕೊಲೆಗೈದ ಘಟನೆ ಗುರುವಾರ ಸಂಜೆ 5:45ರ ಸುಮಾರಿಗೆ ಸಂಭವಿಸಿದೆ. ಮೃತ ಯುವತಿಯನ್ನು ಕಕ್ಯಪದವು ಸಮೀಪದ ಕೊಡಂಗೆ ನಿವಾಸಿ ಲಾವಣ್ಯ (22) ಎಂದು ಗುರುತಿಸಲಾಗಿದೆ. ಯುವತಿಯ ದೂರದ ಸಂಬಂಧಿ, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಪಂ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ನಿವಾಸಿ ಚೇತನ್ ಕೊಲೆ ಆರೋಪಿ. ಘಟನೆ ಸಂಬಂಧ ಲಾವಣ್ಯ ಅವರ ಸಹೋದರಿಯ ಪತಿ ಗೌತಮ್ ಎಂಬವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

FIR ನಲ್ಲಿ ಏನಿದೆ ?
ಉಳಿ ಗ್ರಾಮದ ಕಕ್ಯ ಪದವು ನಿವಾಸಿಯಾಗಿರುವ ಗೌತಮ್ ಅವರ ಪತ್ನಿ ಹಾಗೂ ಪತ್ನಿಯ ತಂಗಿ ಲಾವಣ್ಯ ಕಲ್ಲಡ್ಕ ಪುಷ್ಪರಾಜ್ ನರ್ಸಿಂಗ್ ಹೋಮ್‌ನಲ್ಲಿ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದರು. ಲಾವಣ್ಯರಿಗೆ ಜು.17ರಂದು ಹಗಲು ಪಾಳಿ ಕೆಲಸವಿದ್ದು, ಲಾವಣ್ಯ ಅವರ ಅಕ್ಕ ಚೈತ್ರಾರಿಗೆ ರಾತ್ರಿ ಪಾಳಿ ಕರ್ತವ್ಯ ಇತ್ತು. ಗುರುವಾರ ಸಂಜೆ ಸುಮಾರು 5:45 ಗಂಟೆಗೆ ಚೈತ್ರಾ ಅವರು ಪತಿಯ ಮೊಬೈಲ್‌ಗೆ ಕರೆ ಮಾಡಿ, “ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಲಾವಣ್ಯ ಕಕ್ಯಪದವಿಗೆ ಬರಲು ಕುಳಿತುಕೊಂಡಿದ್ದು, ಆಕೆಗೆ ಚೇತನ್ ಎಂಬಾತನು ಕಿರುಕುಳ ನೀಡುತ್ತಿದ್ದಾನೆ ನೀವು ಲಾವಣ್ಯಳ ಮೊಬೈಲ್‌ಗೆ ಕರೆ ಮಾಡಿ” ಎಂದು ತಿಳಿಸಿದ್ದಾರೆ. ಅದರಂತೆ ಗೌತಮ್ ಕರೆ ಮಾಡಿದಾಗ ಲಾವಣ್ಯ ಕರೆಯನ್ನು ಸ್ವೀಕರಿಸಿ, “ಚೇತನ್ ಎಂಬಾತನು ಕಿರುಕುಳ ನೀಡಿದ್ದು ಸತ್ಯ” ಎಂದು ಹೇಳುವಷ್ಠರಲ್ಲಿ ಆಕೆ ಜೋರಾಗಿ ಕಿರುಚುವುದು ಕೇಳಿ ಬಂದಿದೆ. ಗೌತಮ್‌ ಅವರು ಕೂಡಲೇ ಬಿ.ಸಿ.ರೋಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಅಜಯ್ ಎಂಬವರಿಗೆ ಕರೆ ಮಾಡಿ ʼಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚೇತನ್ ಎಂಬಾತನು ನನ್ನ ಪತ್ನಿಯ ತಂಗಿ ಲಾವಣ್ಯಳಿಗೆ ಕಿರುಕುಳ ನೀಡುತ್ತಿದ್ದಾನೆ. ನೀನು ಕೂಡಲೇ ಅಲ್ಲಿಗೆ ಹೋಗುʼ ಎಂದು ತಿಳಿಸಿದ್ದಾರೆ.

ಅಲ್ಲಿಗೆ ಹೋಗುತ್ತೇನೆಂದು ಹೇಳಿ ಅಜಯ್ ಕಾಲ್ ಕಟ್ ಮಾಡಿದ್ದಾರೆ. ಸುಮಾರು 10 ನಿಮಿಷದ ನಂತರ ಗೌತಮ್‌ ಅವರಿಗೆ ಕರೆ ಮಾಡಿದ ಅಜಯ್, “ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಲಾವಣ್ಯಳ ಕೊಲೆಯಾಗಿದೆ. ನೀನು ಕೂಡಲೇ ಬಾ” ಎಂದು ಹೇಳಿದ್ದು, ಈ ಹಿನ್ನೆಲೆ ಗೌತಮ್‌ ಅವರು ಬೆಳ್ತಂಗಡಿ ಸರಳಿ ಕಟ್ಟೆಯಿಂದ ಊರವರಾದ ಸುರೇಶ್, ವಸಂತ ಎಂಬವರೊಂದಿಗೆ ಘಟನಾ ಸ್ಥಳಕ್ಕೆ ಬರುತ್ತಿರುವಾಗ ಲಾವಣ್ಯರ ಮೃತ ದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು, ನೇರವಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಬಂದು ಲಾವಣ್ಯರ ಮೃತದೇಹವನ್ನು ನೋಡಿದ್ದಾರೆ.

ಲಾವಣ್ಯ ಅವರ ತಲೆ ಹಿಂಬದಿ ಆಳವಾದ ಗಾಯವಾಗಿದೆ. ಘಟನಾ ಸ್ಥಳದಲ್ಲಿ ಬ್ಯಾಗ್, ರಕ್ತದ ಕಲೆ ಹಾಗೂ ಲಾವಣ್ಯರನ್ನು ಕಡಿದು ಕೊಲೆ ಮಾಡಲು ಉಪಯೋಗಿಸಿದ ತಲವಾರು ಬಿದ್ದಿರುವುದನ್ನು ಘಟನಾ ಸ್ಥಳಕ್ಕೆ ಹೋಗಿದ್ದ ಅಜಯ್ ಅವರು ಗೌತಮ್‌ ಅವರಿಗೆ ತಿಳಿಸಿದ್ದಾರೆ.

ಚೇತನ್ ಎಂಬಾತನು ಮೃತ ಲಾವಣ್ಯಳ ದೂರದ ಸಂಬಂಧಿಯಾಗಿದ್ದು, ಆತ ಕೆಲವು ಸಮಯದಿಂದ ಪ್ರೀತಿಸುವಂತೆ ಲಾವಣ್ಯಳನ್ನು ಒತ್ತಾಯ ಮಾಡುತ್ತಿದ್ದ. ಆದರೆ ಲಾವಣ್ಯ ಇದನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಚೇತನ್, ಗುರುವಾರ ಸಂಜೆ 5:30 ಗಂಟೆಗೆ ಲಾವಣ್ಯ ಕೆಲಸ ಮುಗಿಸಿ ಮನೆಗೆ ಬರಲು ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವುದನ್ನು ತಿಳಿದು, ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರನ್ನು ತೆಗೆದುಕೊಂಡು ಬಂದಿದ್ದ. ಸಂಜೆ 5:30 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಕೆಯನ್ನು ಹಿಂಬಾಲಿಸಿ ತಡೆದು ನಿಲ್ಲಿಸಿ, ಮಾರಾಕ ಆಯುಧವಾದ ತಲವಾರಿನಿಂದ ತಲೆಯ ಹಿಂಬದಿಗೆ ಕಡಿದು ಕೊಲೆ ಮಾಡಿ ತಲವಾರನ್ನು ಅಲ್ಲಿಯೇ ಬಿಸಾಕಿ ಪರಾರಿಯಾಗಿದ್ದಾನೆ.



























error: Content is protected !!
Scroll to Top