ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕಾಗಿ ಅತ್ಯುನ್ನತ ರಾಷ್ಟ್ರೀಯ ಗೌರವಕ್ಕೆ ಭಾಜನ
ಬೆಂಗಳೂರು : ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಕಾರ್ಕಳದ ವಿದುಷಿ ಮಹಾಲಕ್ಷ್ಮೀ ಶೆಣೈ ಅವರು ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಕೊಡಮಾಡುವ ಪ್ರತಿಷ್ಠಿತ “ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ–2024″ಕ್ಕೆ ಹಿಂದೂಸ್ತಾನಿ ಗಾಯನ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸಂಗೀತ ನಾಟಕ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಅಕಾಡೆಮಿ ರತ್ನ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಮಹಾಲಕ್ಷ್ಮೀ ಶೆಣೈ ಅವರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಮಹಾಲಕ್ಷ್ಮಿ ಶೆಣೈ ಅವರು ಕರ್ನಾಟಕದ ಪ್ರತಿಭಾನ್ವಿತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಲ್ಲಿ ಪ್ರಮುಖರಾಗಿದ್ದು, ತಮ್ಮ ಸುಮಧುರ ಕಂಠ, ಗಾಢ ಸಂಗೀತಾಭ್ಯಾಸ ಹಾಗೂ ಭಾವಪೂರ್ಣ ಗಾಯನದ ಮೂಲಕ ದೇಶದಾದ್ಯಂತ ಸಂಗೀತಾಸಕ್ತರ ಮನಗೆದ್ದಿದ್ದಾರೆ. ಪ್ರತಿಷ್ಠಿತ ಸಂಗೀತ ಉತ್ಸವಗಳು ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಅವರ ಗಾಯನ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತದ ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.

ಕಾರ್ಕಳದ ಡಾ. ಪ್ರಕಾಶ್ ಶೆಣೈ ಹಾಗೂ ಭಾರತಿ ದಂಪತಿ ಪುತ್ರಿಯಾಗಿರುವ ಇವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪಂಡಿತ್ ವಿಶ್ವಮೋಹನ್ ಭಟ್ ಅವರ ಶಿಷ್ಯೆ.
ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವು ದೇಶದ ಯುವ ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿದ್ದು, ಸಂಗೀತ, ನೃತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ಹಾಗೂ ಸಾಧನೆ ತೋರಿದ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.
ಮಹಾಲಕ್ಷ್ಮಿ ಶೆಣೈ ಅವರ ಈ ಸಾಧನೆ ಕರ್ನಾಟಕಕ್ಕೆ, ವಿಶೇಷವಾಗಿ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಈ ರಾಷ್ಟ್ರೀಯ ಗೌರವವು ರಾಜ್ಯದ ಹಿಂದೂಸ್ತಾನಿ ಸಂಗೀತ ಪರಂಪರೆಯ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಾಗಿದೆ.











