ಬೆಂಗಳೂರು : ಗಾನಕೋಗಿಲೆ ಎಸ್. ಜಾನಕಿ (88) ನಿಧನಕ್ಕೆ ಇಡೀ ಕರ್ನಾಟಕ ಕಂಬನಿ ಮಿಡಿದಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರು ಸ್ವರಗಂಗೆಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಗಣ್ಯರು, ಅಭಿಮಾನಿಗಳು, ಕಲಾವಿದರು ಮೈಸೂರಿಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಮೈಸೂರಿನ ಕಣಿಯನಹುಂಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರಾಜ್ಯ ಸರಕಾರ ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಿದೆ. ಅವರ ಸಂಗೀತ ಪರಂಪರೆಯನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಂಗೀತ ನಿರ್ದೇಶಕ ಹಂಸಲೇಖ ಅವರು ಭಾವುಕ ವಿಡಿಯೋವೊಂದನ್ನ ಶೇರ್ ಮಾಡಿಕೊಳ್ಳುವ ಮೂಲಕ ಸರಕಾರದ ಮುಂದೆ ಒಂದು ಪ್ರಮುಖ ಬೇಡಿಕೆಯನ್ನಿಟ್ಟಿದ್ದಾರೆ. ಗಾನಕೋಗಿಲೆ ಜಾನಕಿ ಅಮ್ಮ ಕರುನಾಡಿನ, ಮೈಸೂರಿನ ಮಣ್ಣಲ್ಲಿ ತಮ್ಮ ಅಂತ್ಯವನ್ನು ಕಂಡಿದ್ದಾರೆ. ಅವರಿಗಾಗಿ ಇಲ್ಲೊಂದು ಸ್ಮಾರಕ ನಿರ್ಮಾಣವಾಗಬೇಕೆಂದು ಆಗ್ರಹಿಸಿದ್ದಾರೆ.



































































