1.ಮೋಟಾರು ವಾಹನಗಳ ಕಾಯ್ದೆ, 1988 ಎಂಬ ಕಾನೂನು ಸಾರ್ವಜನಿಕ ಸ್ಥಳದಲ್ಲಿನ ಮೋಟಾರು ವಾಹನ ಚಲಾವಣೆಯನ್ನು ನಿಯಂತ್ರಿಸುವ ಹಾಗೂ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರವು ಜ್ಯಾರಿಗೊಳಿಸಿರುವ ನಿಯಮಗಳ ಅನುಸಾರ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ವಾಹನ ಅಪಘಾತದ ಸಂದರ್ಭದಲ್ಲಿ ಕಾನೂನಿನ ನಿಯಮಾನುಸಾರದ ಮತ್ತು ನೈತಿಕ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಹೊಂದಿರುತ್ತಾರೆ.
2.ಎಲ್ಲಾ ಮೋಟಾರು ವಾಹನಗಳ ಅಪಘಾತಗಳಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಲ್ಲಿ ಅಥವಾ ಆಸ್ತಿಗೆ ನಷ್ಟ ಉಂಟಾಗಿದ್ದಲ್ಲಿ ಆ ವಾಹನದ ಚಾಲಕ ಅಥವಾ ವಾಹನದ ಪ್ರಭಾರದಲ್ಲಿದ್ದ ವ್ಯಕ್ತಿಯು ಅಪಘಾತ ಘಟಿಸಿದ ಬಗ್ಗೆ ತಕ್ಷಣ 24 ಗಂಟೆಯೊಳಗೆ ಮೀರದಂತೆ ಹತ್ತಿರದ ಪೊಲೀಸ್ ಠಾಣೆಗೆ ವಿಷಯವನ್ನು ತಿಳಿಸಬೇಕು.
3.ಗಾಯಗೊಂಡ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗೆ ಎಲ್ಲಾ ಕ್ರಮವನ್ನು ತೆಗೆದುಕೊಳ್ಳುವುದು ಅಪಘಾತ ಉಂಟುಮಾಡಿದ ವಾಹನ ಚಾಲಕನ ಕರ್ತವ್ಯವಾಗಿರುತ್ತದೆ.

4.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತಮ್ಮಲ್ಲಿ ಪೊಲೀಸರು ಅಥವಾ ಸಾರ್ವಜನಿಕರು ಕರೆ ತಂದಾಗ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಕೊಡುವುದು ನೋಂದಣಿ ಮಾಡಿಕೊಂಡಿರುವ ಎಲ್ಲ ವೈದ್ಯರ ಆದ್ಯ ಕರ್ತವ್ಯವಾಗಿರುತ್ತದೆ.
5.ಅಪಘಾತ ಸ್ಥಳಕ್ಕೆ ಪ್ರಪ್ರಥಮವಾಗಿ ತಲುಪಿದ ಪೊಲೀಸ್ ಅಧಿಕಾರಿಯು ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆಗೆ ತಕ್ಷಣ ಸೂಕ್ತ ವ್ಯವಸ್ಥೆ ಮಾಡಬೇಕು. ವಿಳಂಬವಿಲ್ಲದೆ ಹತ್ತಿರದ ಆಸ್ಪತ್ರೆಗೆ ಅಥವಾ ನೋಂದಾಯಿತ ವೈದ್ಯಾಧಿಕಾರಿಯ ಬಳಿಗೆ ಗಾಯಾಳುವನ್ನು ಚಿಕಿತ್ಸೆಗೆ ಕಳುಹಿಸಬೇಕು.
6.ಅಪಘಾತದಲ್ಲಿ ಗಾಯಗೊಂಡ ಅಥವಾ ಮೃತ ಹೊಂದಿರುವ ವ್ಯಕ್ತಿಯ ಸ್ವತ್ತುಗಳನ್ನು ಆತನ ರಕ್ತ ಸಂಬಂಧಿಕರಿಗೆ ಸ್ವೀಕೃತಿ ಪಡೆದು ವಹಿಸಿಕೊಡಬೇಕು.
7.ಎಲ್ಲಾ ರಸ್ತೆ ಅಪಘಾತಗಳ ಪ್ರಕರಣಗಳಲ್ಲಿ ದೂರುದಾರರು ಈ ಕೆಳಕಂಡ ಮಾಹಿತಿ/ದಾಖಲೆಗಳನ್ನು ಶುಲ್ಕ ರಹಿತವಾಗಿ ಪಡೆಯಲು ಅರ್ಹರಿರುತ್ತಾರೆ. (1) ಪ್ರಥಮ ವರ್ತಮಾನದ ವರದಿ ಪ್ರತಿ. (2) ನಿಗದಿತ ನಮೂನೆಯಲ್ಲಿ ಪೊಲೀಸ್ ಠಾಣೆಯ ಹೆಸರು, ಪ್ರಥಮ ವರ್ತಮಾನ ವರದಿಯ ಸಂಖ್ಯೆ, ಆರೋಪಿಯ ಹೆಸರು, ಅಪಘಾತಕ್ಕೆ ಬಲಿಯಾದವರ ಹೆಸರು, ದಿನಾಂಕ ಮತ್ತು ಕಾಲ ಅಪಘಾತದ ಸ್ಥಳ, ವಾಹನ ನೋಂದಣಿ ಸಂಖ್ಯೆ, ಮಾದರಿ ಮತ್ತು ಯಾವ ವಾಹನ, ವಾಹನ ಚಾಲಕನ ಹೆಸರು ಮತ್ತು ವಿಳಾಸ, ಚಾಲಕನ ರಹದಾರಿ ವಿವರಗಳು, ವಾಹನದ ಮಾಲೀಕರ ಹೆಸರು ಮತ್ತು ವಿಳಾಸ, ವಿಮೆ ಮಾಡಿರುವ ವಿಮಾ ಕಂಪನಿಯ ಹೆಸರು, ಅಪಘಾತಕ್ಕೊಳಗಾದವನು ಮೃತಪಟ್ಟಲ್ಲಿ ಆತನ ಅವಲಂಬಿತರ ಹೆಸರು ಈ ನಮೂನೆ ವಿವರಗಳ ಪ್ರತಿಯನ್ನು ಕಾನೂನು ಸೇವಾ ಪ್ರಾಧಿಕಾರಕ್ಕೂ ಸಹ ಕಳುಹಿಸಬೇಕು.
8.ನಿಗದಿತ ಶುಲ್ಕವನ್ನು ಪಾವತಿ ಮಾಡಿ ದೂರುದಾರ ಅಥವಾ ಅಪಘಾತಕ್ಕೊಳಗಾದ ಅಥವಾ ಆತನ/ ಅವಳ ಪ್ರತಿನಿಧಿ ಈ ಕೆಳಕಂಡ ದಾಖಲೆಗಳನ್ನು ತನಿಖಾದಿಕಾರಿಯಿಂದ ಪಡೆದುಕೊಳ್ಳಲು ಅರ್ಹನಾಗಿರುತ್ತಾನೆ.
- ಸ್ಥಳ ಮಹಜರ್ 2. ಅಪಘಾತ ಸ್ಥಳದ ಕರಡು ನಕ್ಷೆ 3. ಮೋಟಾರು ವಹನ ನಿರೀಕ್ಷಕರ ವರದಿ. 4. ತನಿಖೆಯ ಅಂತಿಮ ವರದಿ 5. ಮರಣ ಆಗಿದ್ದಲ್ಲಿ ಶವ ಮರಣೋತ್ತರ ಪರೀಕ್ಷಾ ವರದಿ 6. ಶವ ಪಂಚನಾಮ ವರದಿ 7. ಗಾಯ ಪ್ರಮಾಣ ಪತ್ರ ಇತ್ಯಾದಿ.
9.ಪೊಲೀಸ್ ಅಧಿಕಾರಿಯು ಅಪಘಾತಕ್ಕೊಳಗಾದ ವಾಹನವನ್ನು ಮೋಟಾರು ವಾಹನ ನಿರೀಕ್ಷಕರ ತಪಾಸಣೆಗಾಗಿ ತಡೆದಿಟ್ಟುಕೊಳ್ಳಬಹುದು. ವಾಹನವನ್ನು ಪೊಲೀಸ್ ಅಧಿಕಾರಿಯು ಪರೀಕ್ಷೆಗಾಗಿ ಜಪ್ತಿ ಮಾಡಿಕೊಂಡಿದ್ದಲ್ಲಿ ಅದನ್ನು ಸಂಬಂಧಪಟ್ಟ ನ್ಯಾಯಾಲಯದ ಆದೇಶದ ಮೂಲಕ ವಾಹನ ಮಾಲಿಕನಿಂದ ಆಧಾರ ಪಡೆದು ಆತನಿಗೆ ಬಿಡುಗಡೆ ಮಾಡಬಹುದು.
10.ಅಪಘಾತ ನಡೆದ ಕೂಡಲೇ ವಾಹನವು ಮತ್ತು ಅದರ ಚಾಲಕ ತಪ್ಪಿಸಿಕೊಂಡು ಹೋದ ಪ್ರಕರಣಗಳಲ್ಲಿ ಮತ್ತು ಅಪಘಾತ ನಡೆಸಿದ ವಾಹನ ಮತ್ತು ವ್ಯಕ್ತಿಯ ಸುಳಿವು ಸಿಗದಿದ್ದಲ್ಲಿ ಅಂಗಹೀನ ಅಥವಾ ತೀವ್ರ ಗಾಯಗಳು ಅಥವಾ ಮರಣ ಸಂಭವಿಸಿದ ಪ್ರಕರಣಗಳಲ್ಲಿ ಆರೋಪಿ ಪತ್ತೆಯಾಗದಿದ್ದಲ್ಲಿ ಇಂತಹ ಪ್ರಕರಣಗಳಿಗೆ ಸೊಲೇಷಿಯಂ ಸ್ಕೀಂ ಎಂಬ ಯೋಜನೆ ಇರುತ್ತದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಇದಕ್ಕಾಗಿ ಸಮಿತಿಗಳನ್ನು ರಚಿಸಲಾಗಿದ್ದು ಜಿಲ್ಲೆಯ ಜಿಲ್ಲಾಧಿಕಾರಿಯವರು ಈ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯು ನಷ್ಟ ಪರಿಹಾರದ ಬಗ್ಗೆ ತೀರ್ಮಾನಿಸುತ್ತದೆ. ಅಪಘಾತ ಸಂಭವಿಸಿದ 6 ತಿಂಗಳೊಳಗೆ ಅಥವಾ ವಿಶೇಷ ಪ್ರಕರಣಗಳಲ್ಲಿ 12 ತಿಂಗಳೊಳಗೆ ನಷ್ಟ ಪರಿಹಾರ ಕೊಡಲು ಈ ಸಮಿತಿಗಳಿಗೆ ಮನವಿ ಮಾಡಿಕೊಳ್ಳಬಹುದು. ತೀವ್ರ ಗಾಯ ಪ್ರಕರಣಗಳಲ್ಲಿ ಗಾಯಗೊಂಡ ವ್ಯಕ್ತಿ ಅರ್ಜಿ ಮಾಡಿಕೊಳ್ಳಬೇಕು. ನಷ್ಟ ಪರಿಹಾರದ ಮೊತ್ತವನ್ನು ಕಾಲಕಾಲಕ್ಕೆ ನಿಗದಿಮಾಡಿರುವ ದರದಲ್ಲಿ ನೀಡಲಾಗುವುದು. ಇಂತಹ ಪ್ರಕರಣಗಳಲ್ಲಿ ಅರ್ಜಿದಾರನು ತನ್ನ ಅರ್ಜಿಯ ಜೊತೆಗೆ ಪ್ರಥಮ ವರ್ತಮಾನದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಲಗತ್ತಿಸಿ ನೀಡಬೇಕು ಉಳಿದ ದಾಖಲಾತಿಗಳನ್ನು ಸೊಲೇಷಿಯಂ ಯೋಜನೆಯಿಂದ ನೇಮಕವಾದ ಕ್ಲೇಮ್ಸ್ ವಿಚಾರಣಾಧಿಕಾರಿಯಿಂದ ಪಡೆಯಬೇಕು.
11.ಪ್ರತಿಯೊಂದು ಜಿಲ್ಲೆಯಲ್ಲೂ ಮೋಟಾರು ಅಪಘಾತದ ಉಳಿದ ಪ್ರಕರಣಗಳಲ್ಲಿ ಮೋಟಾರು ವಾಹನ ಅಪಘಾತದಲ್ಲಿ ಮರಣ ಅಥವಾ ಗಾಯ ಅಥವಾ ಆಸ್ತಿ ಪಾಸ್ತಿಯ ಹಾನಿಗೆ ಸಂಭವಿಸಿದಂತೆ ಮೂರನೇ ವ್ಯಕ್ತಿಗೆ ಆದ ಆಸ್ತಿಹಾನಿಗೆ ಅಥವಾ ಇಬ್ಬರಿಗೂ ಸಂಬಂಧಿಸಿದಂತೆ ನ್ಯಾಯ ತೀರ್ಮಾನ ಮಾಡಿ ಪರಿಹಾರ ನೀಡುವುದಕ್ಕೆ ಮೋಟಾರು ಅಪಘಾತ ಕ್ರೈಮ್‌ನ ನ್ಯಾಯಾಧಿಕರಣವಿರುತ್ತದೆ. ಈ ನ್ಯಾಯಾಧಿಕರಣಕ್ಕೆ ಈ ಕೆಳಕಂಡವರು ಅರ್ಜಿ ಮಾಡಿಕೊಳ್ಳಬಹುದು.
1.ಗಾಯ ಹೊಂದಿರುವ ವ್ಯಕ್ತಿ 2.ವಾಹನದ ಅಥವಾ ಸ್ವತ್ತಿನ ಒಡೆಯ 3.ಅಪಘಾತದಲ್ಲಿ ಮರಣ ಹೊಂದಿದ ಮೃತ ವ್ಯಕ್ತಿಯ ನ್ಯಾಯ ಸಮ್ಮತವಾದ ಪ್ರತಿನಿಧಿ 4.ಗಾಯ ಹೊಂದಿದ ವ್ಯಕ್ತಿಯಿಂದ ನೇಮಿಸಲ್ಪಟ್ಟ ವ್ಯಕ್ತಿ ಅಥವಾ ಮರಣ ಹೊಂದಿದ ವ್ಯಕ್ತಿಯ ನ್ಯಾಯ ಸಮ್ಮತವಾದ ಪ್ರತಿನಿಧಿ, ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಮರಣ ಹೊಂದಿದ ವ್ಯಕ್ತಿಯ ಪರವಾಗಿ ಅಥವಾ ಮೃತರ ನ್ಯಾಯ ಸಮ್ಮತವಾದ ಕಾನೂನು ಪ್ರತಿನಿಧಿಗಳ ಅನುಕೂಲಕ್ಕಾಗಿ ಮಾಡಬಹುದು. ಈ ಪ್ರಕರಣದಲ್ಲಿ ಸೇರದಿರುವ ನ್ಯಾಯ ಸಮ್ಮತ ಪ್ರತಿನಿಧಿಗಳನ್ನು ಅರ್ಜಿಗೆ ಸೇರಿಸಿಕೊಳ್ಳಬಹುದು. ಪರಿಹಾರಕ್ಕಾಗಿ ಅರ್ಜಿಯನ್ನು ಅಪಘಾತವಾದ ಸ್ಥಳದ ಅಧಿಕಾರ ವ್ಯಾಪ್ತಿಯಲ್ಲಿ ಅಥವಾ ಅರ್ಜಿದಾರನು ವಾಸಮಾಡುವ ಅಧಿಕಾರ ವ್ಯಾಪ್ತಿಯೊಳಗೆ ಮಾಡಬಹುದು. ಕ್ಲೈಮ್ ನ್ಯಾಯಾಧಿಕರಣವು ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರಗಳನ್ನೂ ಹೊಂದಿರುತ್ತದೆ.













