ಭಾರತೀಯ ಸಂವಿಧಾನ ಮತ್ತು ಕಾನೂನು – ಮಹಿಳೆಯರು ಹೊಂದಿರುವ ವಿಶೇಷ ಹಕ್ಕುಗಳು

ನಮ್ಮ ದೇಶದ ಇತಿಹಾಸವನ್ನು ಮೆಲುಕು ಹಾಕಿದಾಗ ಹಲವಾರು ಮಹಿಳೆಯರು ಪ್ರಜೆಗಳ ರಕ್ಷಣೆಗಾಗಿ ಪುರುಷರಂತೆ ಕೈಯಲ್ಲಿ ಖಡ್ಗವನ್ನು ಹಿಡಿದು ಶತ್ರುಗಳ ವಿರುದ್ಧ ಹೋರಾಡಿ ವಿರೋಚಿತವಾಗಿ ಪ್ರಾಣಾರ್ಪಣೆ ಮಾಡಿದವರ ಸಂಖ್ಯೆ ಬಹಳಷ್ಟು ಇವೆ. ಆದರೂ ಅನಾದಿ ಕಾಲದಲ್ಲಿ ಮಹಿಳೆಯರು ಸಮಾಜದಲ್ಲಿ ಸೂಕ್ತ ಕಾನೂನಿನ ರಕ್ಷಣೆ, ಗೌರವ ಮತ್ತು ಸಮಾನತೆಯನ್ನು ಹೊಂದಿರದ ಕಾರಣ ಸಮಾಜದಲ್ಲಿ ಸ್ವಾವಲಂಬಿಯುತ ಜೀವನವನ್ನು ನಡೆಸುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಸಂವಿಧಾನ ಮತ್ತು ಕಾನೂನುಗಳು ಮಹಿಳೆಯರು ಸಮಾನತೆ, ರಕ್ಷಣೆ ಮತ್ತು ಗೌರವಸ್ತ ಜೀವನವನ್ನು ನಡೆಸುವ ಹಕ್ಕನ್ನು ಹೊಂದುವಂತೆ ಅವಕಾಶ ನೀಡುವ ಮತ್ತು ಉತ್ತೇಜಿಸುವ ದೃಷ್ಟಿಯಿಂದ ಮಹಿಳೆಯರಿಗೆ ಸಮಾನತೆಯ ಹಕ್ಕು, ಲಿಂಗ ತಾರತಮ್ಯದ ನಿಷೇಧ, ವಿಶೇಷ ಅವಕಾಶಗಳು, ಸಮಾನ ಅವಕಾಶ ಮತ್ತು ಜೀವಿಸುವ ಹಕ್ಕು ಮುಂತಾದ ವಿಶೇಷವಾದ ಮೂಲಭೂತ ಹಕ್ಕನ್ನು ಒದಗಿಸಿದೆ. ಇದರಂತೆ ನಮ್ಮ ಸಂವಿಧಾನದ 14ನೇ ಪರಿಚ್ಛೇದದ ಪ್ರಕಾರ ಮಹಿಳೆಯರು ಸಮಾನತೆಯ ಹಕ್ಕನ್ನು ಹೊಂದಿದ್ದು ಪ್ರತಿಯೊಬ್ಬ ಪ್ರಜೆ ಅಂದರೆ ಪುರುಷ ಅಥವಾ ಮಹಿಳೆ ಕಾನೂನಿನ ಮುಂದೆ ಸಮಾನರಾಗಿರುತ್ತಾರೆ.

ಈ ವಿಚಾರದಲ್ಲಿ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಅದೇ ಪ್ರಕಾರ ಸಂವಿಧಾನದ 15(1)ನೇ ಪರಿಚ್ಛೇದದ ಪ್ರಕಾರ ಸರಕಾರವು ಕೇವಲ ಲಿಂಗದ ಆಧಾರದ ಮೇಲೆ ಯಾವುದೇ ನಾಗರಿಕನಿಗೆ/ಳಿಗೆ ತಾರತಮ್ಯ ಮಾಡುವಂತಿಲ್ಲ. ಸಂವಿಧಾನದ 15(3) ನೇ ಪರಿಚ್ಛೇದದ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸಂದರ್ಭಾನುಸಾರವಾಗಿ ವಿಶೇಷ ಕಾನೂನುಗಳನ್ನು ಜಾರಿಗೊಳಿಸಲು ಸರ್ಕಾರವು ವಿಶೇಷವಾದ ಅಧಿಕಾರವನ್ನು ಹೊಂದಿರುತ್ತದೆ. ಹೀಗಾಗಿ ಮಹಿಳೆಯರ ವಿರುದ್ಧ ದೈಹಿಕ, ಮಾನಸಿಕ, ಆರ್ಥಿಕ ಮತ್ತು ಲೈಂಗಿಕ ದೌರ್ಜನ್ಯಗಳಿಂದ ರಕ್ಷಣೆ ನೀಡುವುದಕ್ಕಾಗಿ ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆ, ವರದಕ್ಷಿಣೆಯ ವಿರುದ್ಧ ನಿಷೇಧ ಹೇರುವುದಕ್ಕಾಗಿ ವರದಕ್ಷಿಣೆ ನಿಷೇಧ ಕಾಯ್ದೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಮತ್ತು ಆಂತರಿಕ ದೂರು ಸಮಿತಿ ಸ್ಥಾಪನೆಯ ಉದ್ದೇಶಕ್ಕಾಗಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ, ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಪಾಲನ್ನು ನೀಡುವುದಕ್ಕಾಗಿ ಹಿಂದೂ ಉತ್ತರಾಧಿಕಾರ ಕಾಯ್ದೆ, ಗರ್ಭಿಣಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸುವುದಕ್ಕಾಗಿ ಹೆರಿಗೆ ಸೌಲಭ್ಯಗಳ ಕಾಯ್ದೆ, ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯನ್ನು ಅಪರಾಧವೆಂದು ಘೋಷಿಸಿ ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆ, ಹೆಣ್ಣು ಮಕ್ಕಳಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಘೋಷಿಸಿ ಅಪ್ರಾಪ್ತ ವಯಸ್ಕರ ವಿವಾಹ ನಿಷೇಧ ಕಾಯ್ದೆ, ಹಿಂದೂ ಉತ್ತರಾಧಿಕಾರ ಕಾಯ್ದೆಯಡಿಯಲ್ಲಿ, ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಸಮಾನ ಹಕ್ಕನ್ನು ನೀಡುವ ಬಗ್ಗೆ ಆಸ್ತಿ ಹಕ್ಕು, ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ, ಸಂತ್ರಸ್ತ ಮಹಿಳೆಯರು ಉಚಿತ ಕಾನೂನು ನೆರವು ಪಡೆಯುವ ಹಕ್ಕನ್ನು ಹೊಂದುವ ಬಗ್ಗೆ ಉಚಿತ ಕಾನೂನು ನೆರವು ಇತ್ಯಾದಿ ಪ್ರಮುಖ ಕಾನೂನುಗಳು ನಮ್ಮ ದೇಶದಲ್ಲಿ ಜ್ಯಾರಿಯಲ್ಲಿರುತ್ತದೆ. ಮಾತ್ರವಲ್ಲದೆ ಯಾವುದೇ ಮಹಿಳೆಯನ್ನು ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯದ ಮೊದಲು ಬಂಧಿಸದಂತೆ, ಕಾನೂನಿನ ನಿರ್ಭಂದ ಇರುತ್ತದೆ. ಮಹಿಳೆಯರು ತಮ್ಮ ಗೌಪ್ಯತೆ ಮತ್ತು ಘನತೆಗೆ ಧಕ್ಕೆ ಬಾರದಂತೆ ರಕ್ಷಣೆ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಮಾತ್ರವಲ್ಲದೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ನಿಬಂಧನೆಗಳಡಿಯಲ್ಲಿ ಮಹಿಳೆಯರ ವಿರುದ್ಧ ಕಿರುಕುಳ, ಹಿಂಬಾಲಿಸುವಿಕೆ ಅಥವಾ ದೌರ್ಜನ್ಯ ಇತ್ಯಾದಿ ಕೃತ್ಯಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧ ಪಟ್ಟ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಮಾ. 8ನೇ ತಾರೀಖನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತದೆ.









































error: Content is protected !!
Scroll to Top